ಉದಯರಶ್ಮಿ ದಿನಪತ್ರಿಕೆ
ವಿಜಯಪುರ: ಬೆಳಗಾವಿಯಲ್ಲಿ ಪಂಚಮಸಾಲಿಗಳು ನ್ಯಾಯಯುತವಾಗಿ ಮೀಸಲಾತಿ ಪಡೆಯಲು ಶಾಂತಿಯುತವಾಗಿ ಮಾಡುತ್ತಿದ್ದ ಹೋರಾಟವನ್ನು ಪೊಲೀಸ್ ಶಕ್ತಿ ಪ್ರಯೋಗಿಸಿ ಹತ್ತಿಕ್ಕುವ ಮೂಲಕ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಕಾಂಗ್ರೆಸ್ ಸರಕಾರ ಆಧುನಿಕ ಬ್ರಿಟೀಷರಂತೆ ವರ್ತಿಸಿರುವುದು ಖಂಡನೀಯವಾಗಿದೆ. ಮಾನವ ಹಕ್ಕುಗಳ ಉಲ್ಲಂಘನೆಗೈದ ಜನವಿರೋಧಿ ರಾಜ್ಯ ಸರಕಾರವನ್ನು ಕಿತ್ತೊಗೆದು ರಾಷ್ಟ್ರಪತಿ ಆಡಳಿತವನ್ನು ಹೇರಬೇಕೆಂದು ನ್ಯಾಯವಾದಿ ದಾನೇಶ ಅವಟಿ ಅವರು ಆಗ್ರಹಿಸಿದರು.
ಅವರು ನಗರದಲ್ಲಿ ಬೆಳಗಾವಿ ಸುವರ್ಣ ವಿಧಾನ ಸೌಧದ ಮುಂದೆ ಪಂಚಮಸಾಲಿ ಮೀಸಲಾತಿ ಹೋರಾಟಗಾರರ ಮೇಲೆ ಪೊಲೀಸರು ಎಸಗಿರುವ ದೌರ್ಜನ್ಯವನ್ನು ಖಂಡಿಸಿ ವಿಜಯಪುರ ಜಿಲ್ಲಾಧಿಕಾರಿಗಳ ಮೂಲಕ ಲಿಂಗಾಯತ ಪಂಚಮಸಾಲಿ ವಕೀಲರ ವೇದಿಕೆ ವತಿಯಿಂದ ರಾಜ್ಯಪಾಲರಿಗೆ ಮನವಿ ಸಲ್ಲಿಸಿ ಮಾತನಾಡಿದರು.
ಇನ್ನೋರ್ವ ನ್ಯಾಯವಾದಿ ಬಸವರಾಜ ಯಾದವಾಡ ಅವರು ಮಾತನಾಡಿ, ಬೆಳಗಾವಿಯಲ್ಲಿ ಪಂಚಮಸಾಲಿ ಶ್ರೀಗಳು ಹಾಗೂ ಮೀಸಲಾತಿ ಹೋರಾಟಗಾರರ ಮೇಲೆ ಪೊಲೀಸರು ಎಸಗಿರುವ ದೌರ್ಜನ್ಯ ಪ್ರಕರಣವನ್ನು ಸುಪ್ರೀಮ್ ಕೋರ್ಟಿನ ಹಾಲಿ ನ್ಯಾಯಾದೀಶರ ನೇತೃತ್ವದಲ್ಲಿ ಉನ್ನತ ನ್ಯಾಯಾಂಗ ತನಿಖೆಗೆ ಒಪ್ಪಿಸಿ ಹೋರಾಟದ ದಿಕ್ಕು ತಪ್ಪಿಸಲು ಪ್ರಯತ್ನಿಸುತ್ತಿರುವ ಕಿಡಗೇಡಿಗಳಿಗೆ ಕಠಿಣ ಶಿಕ್ಷೆ ನೀಡಬೇಕು ನೊಂದ ಪಂಚಮಸಾಲಿ ಜನಾಂಗಕ್ಕೆ ನ್ಯಾಯ ಒದಗಿಸಬೇಕೆಂದು ಆಗ್ರಹಿಸಿದರು.
ನ್ಯಾಯವಾದಿ ಶ್ರೀಶೈಲ ಮುಳಜಿ ಅವರು ಮಾತನಾಡಿ, ರೈತಾಪಿ ವರ್ಗದ ಪಂಚಮಸಾಲಿ ಸಮಾಜವು ಆರ್ಥಿಕವಾಗಿ ಮತ್ತು ಶೈಕ್ಷಣಿಕವಾಗಿ ಹಿಂದುಳಿದಿದೆ ಸಮಾಜದ ಮಕ್ಕಳ ಪ್ರಗತಿಗೆ ೨ಎ ಮೀಸಲಾತಿ ಅವಶ್ಯಕತೆ ಇದೆ ಅದಕ್ಕಾಗಿ ಪ್ರಜಾಪ್ರಭುತ್ವ ಮಾರ್ಗದಲ್ಲಿ ನಾವು ನಡೆಸುತ್ತಿರುವ ಹೋರಾಟವನ್ನು ತಡೆಗಟ್ಟಲು ಸರಕಾರ ವಿಫಲ ಪ್ರಯತ್ನ ಮಾಡುತ್ತಿರುವುದು ಒಳ್ಳೆಯ ಬೆಳವಣಿಗೆಯಲ್ಲ ಎಂದರು.
ನ್ಯಾಯವಾದಿ ಸಿ ಎಂ ಅಂಗಡಿ ಅವರು ಮಾತನಾಡಿದರು.
ನ್ಯಾಯವಾದಿಗಳಾದ ಶ್ರೀಶೈಲ ಗೊಬ್ಬೂರು, ಎಸ್.ಎಂ. ಪೊಲೀಸಪಾಟೀಲ, ಬಿ.ಎಂ.ಪಾಟೀಲ್.ಸಿ, ಚಂದ್ರಶೇಖರ ವಾಲಿ, ಎಸ್ ಎಂ. ಅಲದಿ ದೇಸಾಯಿ, ಎಂ ಎಸ್ ಬಗಲಿ (ಕವಲಗಿ), ಶಿವರಾಜ್ ಗೌಡ ಬಿರಾದಾರ, ಬಾಬು ಹಿಪ್ಪರಗಿ, ವಕೀಲರ ಸಂಘದ ಆಡಳಿತ ಮಂಡಳಿ ಸದಸ್ಯರಾದ ಬಿ.ಡಿ.ಬಿರಾದಾರ, ಬಿ. ಏ.ಹಳ್ಳಿ, ವಿ.ಎನ್.ಪಾಟೀಲ್ (ಟಕ್ಕೆ) ಇನ್ನೂ ಅನೇಕ ಜನ ವಕೀಲರು ಉಪಸ್ಥಿತರಿದ್ದು, ಅಪಾರ ಜಿಲ್ಲಾಧಿಕಾರಿ ಸೋಮಲಿಂಗ ಗೆಣ್ಣೂರ ಅವರಿಗೆ ಮನವಿ ಸಲ್ಲಿಸಿದರು.

