ಕೃಷ್ಣೆ ಸಂತ್ರಸ್ತರ ಬೇಡಿಕೆ ಈಡೇರಿಕೆ ಸರ್ಕಾರದ ಆದ್ಯ ಕರ್ತವ್ಯವಾಗಬೇಕು
ಉದಯರಶ್ಮಿ ದಿನಪತ್ರಿಕೆ
ಕೊಲ್ಹಾರ: ಕೃಷ್ಣಾ ಮೇಲ್ದಂಡೆ ಯೋಜನೆಯ ಬಾಧಿತ ಸಂತ್ರಸ್ತರ ಬೇಡಿಕೆಗಳನ್ನು ಈಡೇರಿಸುವಲ್ಲಿ ಸರ್ಕಾರ ಮೀನ-ಮೇಷ ಎಣಿಸಬಾರದು ಎಂದು ಕೊಡೆಕಲ್ ದುರದುಂಡೇಶ್ವರ ಮಠದ ಶಿವಕುಮಾರ ಮಹಾಸ್ವಾಮಿಗಳು ಹೇಳಿದರು.
ಬಾಗಲಕೋಟೆಯಲ್ಲಿ ಕೃಷ್ಣಾ ಮೇಲ್ದಂಡೆ ಯೋಜನೆಯ ಬಾಧಿತ ಸಂತ್ರಸ್ತರ ಹೋರಾಟ ಸಮಿತಿ ನಡೆಸುತ್ತಿರುವ ಅನಿರ್ದಿಷ್ಟಾವಧಿ ಧರಣಿಯಲ್ಲಿ ಪಾಲ್ಗೊಂಡು ಕೊಲ್ಹಾರ ಹಿರೇಮಠದ ನೂತನ ಕಟ್ಟಡ ಜೀರ್ಣೋದ್ದಾರವನ್ನು ವೀಕ್ಷಿಸಿದ ಸಂದರ್ಭ ಮಾದ್ಯಮದವರೊಂದಿಗೆ ಮಾತನಾಡಿದ ಅವರು, ಫಲವತ್ತಾದ ಭೂಮಿ ಕಳೆದುಕೊಂಡಿರುವ ಸಂತ್ರಸ್ತರ ಬೇಡಿಕೆಗಳನ್ನು ಈಡೇರಿಸುವುದು ಸರ್ಕಾರದ ಆದ್ಯ ಕರ್ತವ್ಯವಾಗಬೇಕು.
ಕೃಮೇಯೋ ಬಾಧಿತ ಸಂತ್ರಸ್ತರು ನ್ಯಾಯಯುತ ಪರಿಹಾರ ಕೇಳುತ್ತಿದ್ದಾರೆ, ನೀರಾವರಿಗಾಗಿ ಫಲವತ್ತಾದ ಜಮೀನು ಕಳೆದುಕೊಂಡಿರುವ ಅನ್ನದಾತ ಬೀದಿಗೆ ಬಂದು ಅಹೋರಾತ್ರಿ ಹೋರಾಟ ಆರಂಭಿಸಿರುವುದು ವಿಪರ್ಯಾಸವೆ ಸರಿ!. ಜಗತ್ತಿಗೆ ಅನ್ನ ನೀಡುವ ರೈತಾಪಿ ವರ್ಗದ ಬದುಕು ದುಸ್ಥರವಾಗಿದೆ ಸರ್ಕಾರ ಕೂಡಲೇ ಸಂತ್ರಸ್ತರ ಹೋರಾಟಕ್ಕೆ ಸ್ಪಂದಿಸಬೇಕು ಬಾಧಿತ ಸಂತ್ರಸ್ತರ ಹಾಗೂ ರೈತರ ಹೋರಾಟಕ್ಕೂ ಮಠಾಧೀಶರುಗಳಾದ ನಾವುಗಳು ಸದಾಕಾಲ ಬೆಂಬಲವಾಗಿ ನಿಲ್ಲುತ್ತವೆ ಎಂದು ಅವರು ಹೇಳಿದರು.
ಈ ಸಂದರ್ಭದಲ್ಲಿ ಕೊಲ್ಹಾರ-ಬೇಲೂರು ಹಿರೇಮಠದ ಪ್ರಭುಕುಮಾರ ಶಿವಾಚಾರ್ಯರು, ಪಡದಯ್ಯ ಮಹಾಸ್ವಾಮಿಗಳು, ಕಲಕೇರಿ ಮಡಿವಾಳೇಶ್ವರ ಹಿರೇಮಠದ, ದೇವರ ಹಿಪ್ಪರಗಿ ಜಡೆ ಮಠದ, ನಾವದಗಿ ಬೃಹನ್ ಮಠದ, ನಾಗೂರು ವಿರಕ್ತಮಠದ, ದೇವರ ಹಿಪ್ಪರಗಿ ಪರದೇಶಿ ಅವುಗೇಶ್ವರ, ಚಬನೂರು ರಾಮಲಿಂಗಯ್ಯ, ಶರಣಶಿರಸಗಿ ರುದ್ರಮುನಿ ಶ್ರೀಗಳು ಉಪಸ್ಥಿತರಿದ್ದರು.

