ಉದಯರಶ್ಮಿ ದಿನಪತ್ರಿಕೆ
ಮುದ್ದೇಬಿಹಾಳ: ಎಲ್ಲರ ಮನಗೆದ್ದ ದಿ ಕರ್ನಾಟಕ ಕೋ ಅಪ್ ಬ್ಯಾಂಕ್ ಈ ಹಂತಕ್ಕೆ ಬೆಳೆಯಲು ಹಿರಿಯರು ಸಾಕಷ್ಟು ಶ್ರಮಿಸಿದ್ದಾರೆ. ಬರುವ ದಿನಗಳಲ್ಲಿ ಈ ಬ್ಯಾಂಕಿನ ಆಡಳಿತ ಮಂಡಳಿಯ ನಿರ್ದೇಶಕರ ಚುನಾವಣೆ ಇದ್ದು ಒಳ್ಳೆಯವರನ್ನು ಆರಿಸಿ ತರುವಂತೆ ಬ್ಯಾಂಕ್ ನ ಮತದಾರರಲ್ಲಿ ಬ್ಯಾಂಕ್ ನ ಅಧ್ಯಕ್ಷ ಸತೀಶ ಓಸ್ವಾಲ ಮನವಿ ಮಾಡಿಕೊಂಡರು.
ಪಟ್ಟಣದ ದಿ ಕರ್ನಾಟಕ ಕೋ ಅಪ್ ಬ್ಯಾಂಕ್ ನಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು ಪಾಟೀಲ, ಓಸ್ವಾಲ್, ನಾಗಠಾಣ, ಕಳಸಾ, ಮೋಟಗಿ, ಮೋಮಿನ, ಕಪಟಕರ, ನಾವದಗಿ, ಕುಂಟೋಜಿ, ನಾಯನೇಗಲಿ, ಝಳಕಿ, ರಕ್ಕಸಗಿ, ಶಿವಯೋಗಿಮಠ, ಸಜ್ಜನ, ನಾಶಿ ಸೇರಿದಂತೆ ಎಲ್ಲ ಸಮಾಜದ ಮನೆತನಗಳ ಹಿರಿಯರು ಶ್ರಮಿಸಿ ಸುಸಜ್ಜಿತ ಕಟ್ಟಡದೊಂದಿಗೆ ಒಳ್ಳೆಯ ಬ್ಯಾಂಕ್ ನ್ನು ನಿರ್ಮಿಸಿದ್ದಾರೆ. ಅವರ ಮಾರ್ಗದರ್ಶನದಲ್ಲಿ ನಾವು ನಮ್ಮ ಅವಧಿಯನ್ನು ಪೂರ್ಣಗೊಳಿಸಿದ್ದೇವೆ. ನಮ್ಮನ್ನು ಆಯ್ಕೆ ಮಾಡಿದ ಎಲ್ಲ ಚುನಾಯಿತರಿಗೆ ಈ ಮೂಲಕ ಅಭಿನಂದನೆಗಳನ್ನು ಸಲ್ಲಿಸುತ್ತೇವೆ. ಬರುವ ದಿನಗಳಲ್ಲಿ ಒಳ್ಳೆಯ ನಿರ್ದೇಶಕರನ್ನು ಆಯ್ಕೆ ಮಾಡಿ ನಮ್ಮೂರಿನ ಹೆಮ್ಮೆಯ ಬ್ಯಾಂಕನ್ನು ಇನ್ನಷ್ಟು ಬೆಳೆಸಲು ಸಹಕರಿಸಬೇಕು ಎಂದರು.
ನಿರ್ದೇಶಕ ವೆಂಕನಗೌಡ ಪಾಟೀಲ ಮಾತನಾಡಿ, ಬ್ಯಾಂಕಿನ ಅಭಿವೃದ್ಧಿಗಾಗಿ ನಾವು ಪ್ರಾಮಾಣಿಕವಾಗಿ ಪ್ರಯತ್ನ ಮಾಡಿದ್ದೇವೆ. ನಮ್ಮ ಆಡಳಿತದ ಅವಧಿಯಲ್ಲಿ ಕಡಿಮೆ ಬಡ್ಡಿ ದರ ನಿಗದಿ, ವಾಹನ ಸಾಲ, ವಯಕ್ತಿಕ ಸಾಲ, ಲಾಕರ್‌ಗಳು ಹೀಗೆ ರಾಷ್ಟ್ರೀಕೃತ ಬ್ಯಾಂಕುಗಳ ಸಮನಾಗಿ ಈ ಬ್ಯಾಂಕಿನ್ನು ತಂದು ನಿಲ್ಲಿಸಿದ್ದೇವೆ. ಬರುವ ದಿನಗಳಲ್ಲಿ ಬ್ಯಾಂಕನ್ನು ಇನ್ನಷ್ಟು ಬೆಳೆಸಲು ಎಲ್ಲರೂ ಶ್ರಮಿಸೋಣ ಎಂದರು.
ನಿರ್ದೇಶಕರಾದ ಎಸ್.ಎಸ್.ಮಾಲಗತ್ತಿ ವಕೀಲರು, ನಾಗಭೂಷಣ ನಾವದಗಿ, ಗುರುಲಿಂಗಪ್ಪಗೌಡ ಪಾಟೀಲ, ಪ್ರಧಾನ ವ್ಯವಸ್ಥಾಪಕ ಮಲ್ಲಿಕಾರ್ಜುನ ಬಿದರಕುಂದಿ ಮಾತನಾಡಿದರು. ಉಪಾಧ್ಯಕ್ಷ ಸಿ.ಎಲ್.ಬಿರಾದಾರ, ರಾಜು ಕರಡ್ಡಿ, ರವಿ ಕಮತ, ಮುತ್ತು ಕಡಿ, ಪ್ರಭುರಾಜ ಕಲಬುರ್ಗಿ, ಸುನೀಲ ಇಲ್ಲೂರ ಇದ್ದರು.

