ಶಾಸಕರ ಮನವಿಗೆ ಸ್ಪಂದಿಸಿದ ತಿಕೋಟಾ ಜಾತ್ರೆ ಸಂಘಟಕರು | ಮುಂದೆ ರೇಸ್ ಆಯೋಜಿಸುವುದಿಲ್ಲ ಎಂದು ಪ್ರಕಟಣೆ
ಉದಯರಶ್ಮಿ ದಿನಪತ್ರಿಕೆ
ವಿಜಯಪುರ: ಜಾತ್ರೆಗಳನ್ನು ವಿಜೃಂಭಣೆಯಿಂದ ಆಚರಿಸಬೇಕು. ಆದರೆ, ರೈತರು ಬಸವಣ್ಣ ಎಂದು ಪೂಜಿಸುವ ಎತ್ತುಗಳಿಗೆ ನೋವುಂಟು ಮಾಡುವ ಓಟಗಳನ್ನು ಆಯೋಜನೆಯನ್ನು ತಡೆಯಬೇಕು ಎಂದು ವಿಧಾನ ಪರಿಷತ್ ಶಾಸಕ ಸುನೀಲಗೌಡ ಪಾಟೀಲ ಮನವಿ ಮಾಡಿದ್ದಾರೆ.
ಈ ಮನವಿಗೆ ಸ್ಪಂದಿಸಿದ ತಿಕೋಟಾ ಜಾತ್ರೆ ಸಂಘಟಕರು ಇನ್ನು ಮುಂದೆ ಎತ್ತಿನ ಗಾಡಿಗಳ ರೇಸ್ ಆಯೋಜಿಸುವುದಿಲ್ಲ ಎಂದು ಪ್ರಕಟಿಸುವ ಮೂಲಕ ಶಾಸಕರ ಕರೆಗೆ ಒಪ್ಪಿಗೆ ಸೂಚಿಸಿದ್ದಾರೆ.
ಬುಧವಾರ ತಿಕೋಟಾ ಪಟ್ಟಣದಲ್ಲಿ ನಡೆಯುತ್ತಿರುವ ಶ್ರೀ ಲಕ್ಷ್ಮಿದೇವಿ ಮತ್ತು ಶ್ರೀ ದಾನಮ್ಮದೇವಿ ಜಾತ್ರಾ ಮಹೋತ್ಸವದಲ್ಲಿ ಪಾಲ್ಗೋಂಡು ಶಾಸಕರು ಮಾತನಾಡಿದರು.
ತಿಕೋಟಾ ಜನತೆ ಜಾತ್ರೆಗಳನ್ನು ಶ್ರದ್ಧಾ ಭಕ್ತಿ, ವಿಜೃಂಭಣೆ ಮತ್ತು ಸಾಮರಸ್ಯದಿಂದ ಆಚರಿಸುತ್ತಾರೆ. ರೈತರು ಸಾಕುಪ್ರಾಣಿಗಳನ್ನು ಕುಟುಂಬ ಸದಸ್ಯರಂತೆ ಕಾಣುತ್ತೇವೆ. ಅಲ್ಲದೇ, ಎತ್ತುಗಳನ್ನು ಬಸವಣ್ಣನವರ ಪ್ರತಿರೂಪ ಎಂದು ಪೂಜಿಸುತ್ತೇವೆ. ಮತ್ತೋಂದೆಡೆ ರೇಸ್ ಆಯೋಜಿಸುವ ಮೂಲಕ ಈ ಮೂಕ ಪ್ರಾಣಿಗಳಿಗೆ ನೋವು ಉಂಟ ಮಾಡಲಾಗುತ್ತದೆ. ಅವುಗಳ ಮೂಕರೋಧನೆ ಅರ್ಥ ಮಾಡಿಕೊಂಡು ಇಂಥ ಆಚರಣೆಗಳನ್ನು ಕೈಬಿಡಬೇಕು ಎಂದು ಕರೆ ನೀಡಿದರು.
ಬೇಕಿದ್ದರೆ ಗ್ರಾಮೀಣ ಕ್ರೀಡಾಪಟುಗಳಿಗೆ ಪ್ರೋತ್ಸಾಹ ನೀಡಲು ಕ್ರೀಡಾಕೂಟಗಳನ್ನು ಆಯೋಜಿಸಿ ಎಂದು ಅವರು ಸಲಹೆ ನೀಡಿದರು. ಶಾಸಕರ ಕರೆಗೆ ಓಗೊಟ್ಟ ಜಾತ್ರೆಯ ಸಂಘಟಕರು ಮುಂದಿನ ಸಲದಿಂದ ಎತ್ತುಗಳ ಓಟವನ್ನು ಆಯೋಜಿಸುವುದಿಲ್ಲ ಎಂದು ವೇದಿಕೆಯಲ್ಲಿಯೇ ಪ್ರಕಟಿಸಿದರು.
ಇದೇ ವೇಳೆ ಸಾಮೂಹಿಕ ವಿವಾಹದಲ್ಲಿ ದಾಂಪತ್ಯ ಜೀವನಕ್ಕೆ ಕಾಲಿಟ್ಟ ನವಜೋಡಿಗಳಿಗೆ ಸುನೀಲಗೌಡ ಪಾಟೀಲ ಶುಭ ಕೋರಿದರು.
ಈ ಸಂದರ್ಭದಲ್ಲಿ ಶ್ರೀ ಗುರುಪ್ರಸಾದ ಮಹಾಸ್ವಾಮಿಗಳು, ಶ್ರೀ ಶಿವಬಸವ ಶಿವಾಚಾರ್ಯ ಸ್ವಾಮಿಗಳು, ಶ್ರೀ ಚನ್ನಮಲ್ಲಿಕಾರ್ಜುನ ಸ್ವಾಮಿಗಳು, ಮುಖಂಡರಾದ ವಿ. ಎಂ. ಪಾಟೀಲ, ಸಿ. ಬಿ. ಪಾಟೀಲ, ನಿಂಗಪ್ಪ ಗುರ್ಕಿ, ಸಿದ್ಧರಾಮಯ್ಯ ಲಕ್ಕುಂಡಿಮಠ, ಸಂಗಮೇಶ ತಾಳಿಕೋಟಿ, ಪ್ರಭು ತಾಳಿಕೋಟಿ, ಮಹೇಶ ಗಣಿ, ಚನ್ನಪ್ಪ ಕೋರಿ, ಪ್ರಭಾವತಿ ನಾಟಿಕಾರ, ಸಿದ್ದರಾಮ ಪೂಜಾರಿ, ರಾಮು ಹೊನವಾಡ, ರಾವತ ಕಂಬಾರ, ಸದಾಶಿವ ಮಂಗಸೂಳಿ, ನಾಗೇಂದ್ರ ಕೋಷ್ಠಿ ಮುಂತಾದವರು ಉಪಸ್ಥಿತರಿದ್ದರು.

