ಉದಯರಶ್ಮಿ ದಿನಪತ್ರಿಕೆ
ಸಿಂದಗಿ: ಉತ್ತರ ಕರ್ನಾಟಕ ಭಾಗದ ಮಹತ್ವಾಕಾಂಕ್ಷಿ ನೀರಾವರಿ ಯೋಜನೆಯಾದ ಕ್ರಷ್ಣಾ ಮೇಲ್ದಂಡೆ ಯೋಜನೆ ಹತ್ತು, ಹಲವು ಸವಾಲುಗಳ ನಡುವೆ ದಶಕಗಳಿಂದ ಕುಂಟುತ್ತಾ ಸಾಗಿದ್ದು, ಬೆಳಗಾವಿ ಅಧಿವೇಶನದಲ್ಲಿ ಚರ್ಚಿಸಿ ಯೋಜನೆ ಪೂರ್ಣಗೊಳಿಸಬೇಕು ಎಂದು ವಕೀಲರ ಸಂಘದ ಅಧ್ಯಕ್ಷ ಎಸ್.ಬಿ.ಪಾಟೀಲ ಗುಂದಗಿ ಹೇಳಿದರು.
ಪಟ್ಟಣದ ಆಡಳಿತ ಸೌಧದ ಮುಂಭಾಗದಲ್ಲಿ ಸಿಂದಗಿ ವಕೀಲರ ಸಂಘದ ವತಿಯಿಂದ ಆಲಮಟ್ಟಿ ಆಣೆಕಟ್ಟು ಮೇಲೆತ್ತರಕ್ಕೆರಿಸುವಂತೆ ಒತ್ತಾಯಿಸಿ ಪ್ರತಿಭಟಿಸಿ ರಾಜ್ಯಪಾಲರಿಗೆ ಗ್ರೇಡ್-೨ ತಹಶೀಲ್ದಾರ್ ಮೂಲಕ ಮನವಿ ಸಲ್ಲಿಸಿ ಮಾತನಾಡಿದ ಅವರು, ಚುನಾವಣೆ ಸಂದರ್ಭದಲ್ಲಿ ಕೃಷ್ಣಾ ಮೇಲ್ದಂಡೆ ಯೋಜನೆಗೆ ರೂ.೪೦ ಸಾವಿರ ಕೋಟಿ ಅನುದಾನ ನೀಡುವುದಾಗಿ ಹೇಳಿದ್ದ ಕಾಂಗ್ರೆಸ್ ಸರಕಾರ ಇಲ್ಲಿಯವರೆಗೂ ಅನುದಾನ ನೀಡಿಲ್ಲ. ಯೋಜನೆಯ ಬಗ್ಗೆ ಸಂಪೂರ್ಣ ನಿರ್ಲಕ್ಷ್ಯ ವಹಿಸಿಕೊಂಡು ಬರುತ್ತಿದೆ. ಕೂಡಲೇ ಯೋಜನೆ ಪೂರ್ಣಗೊಳಿಸಲು ಕ್ರಮ ವಹಿಸಬೇಕು. ಎಂದು ಒತ್ತಾಯಿಸಿದ್ದಾರೆ.
ಈ ವೇಳೆ ನ್ಯಾಯವಾದಿ ದಾನಪ್ಪಗೌಡ ಚನಗೊಂಡ ಮಾತನಾಡಿ, ಕೃಷ್ಣಾ ಮೇಲ್ದಂಡೆ ಯೋಜನೆ ಪೂರ್ಣಗೊಳಿಸುವಂತೆ ಸರಕಾರಗಳಿಗೆ ಮನವಿ ಸಲ್ಲಿಸಿದರು ಯಾವುದೇ ಪ್ರಯೋಜನವಾಗುತ್ತಿಲ್ಲ. ಆಲಮಟ್ಟಿ ಆಣೆಕಟ್ಟು ಎತ್ತರವನ್ನು ಹೆಚ್ಚಿಸದರೆ ಹೆಚ್ಚುವರಿ ನೀರು ಸಂಗ್ರಹದೊಂದಿಗೆ ಉತ್ತರ ಕರ್ನಾಟಕ ಭಾಗದ ನೀರಿನ ಸಮಸ್ಯೆಗೆ ಪರಿಹಾರ ಸಿಗಲಿದೆ. ಮತ್ತು ಈ ಭಾಗದ ಜನರ ಕನಸು ನನಸಾಗುವ ಸೂಚನೆಯೇ ಕಾಣುತ್ತಿಲ್ಲ ಎಂದು ವಿಷಾದ ವ್ಯಕ್ತಪಡಿಸಿದರು. ಒಂದು ವೇಳೆ ಸರಕಾರವು ಬೇಡಿಕೆಗಳಿಗೆ ಸ್ಪಂದಿಸದಿದ್ದರೆ ಉಗ್ರಹೋರಾಟ ನಡೆಸುವುದು ಅನಿವಾರ್ಯವಾಗಲಿದೆ ಎಂದು ಎಚ್ಚರಿಕೆ ನೀಡಿದರು.
ಈ ವೇಳೆ ವಕೀಲರಾದ ಎಸ್.ಎ.ಗಾಯಕವಾಡ, ಎಸ್.ಬಿ.ಖಾನಾಪುರ, ಎಸ್.ಎಂ.ಪಾಟೀಲ, ಎಮ್.ಎನ್.ನಾಯ್ಕೋಡಿ, ಪಿ.ಎಮ್.ಬಡಿಗೇರ, ಆರ್.ಎಂ.ಯಾಳಗಿ, ವಿ.ಎಂ.ಬಡಿಗೇರ, ಎಸ್.ಕೆ.ಪೂಜಾರಿ, ಬಿ.ಎಸ್.ಚಾವರ, ಬಿ.ಸಿ.ತಳವಾರ, ಶ್ವೇತಾ, ಎಂ.ಎಸ್.ಬಿರಾದಾರ, ವಿ.ಎಲ್.ಮೋಪಗಾರ, ಎಮ್.ಎಸ್.ಪಾಟೀಲ, ಸಿ.ಎ.ಚಿಕ್ಕೋಡಿ, ಕೆ.ಎಚ್.ಚವ್ಹಾಣ, ಎ.ಜಿ.ಮಸಾರಕಲ್ಲ, ಜಿ.ಜಿ. ಮಾರ್ಸನಳ್ಳಿ, ಎ.ಕೆ.ಕನ್ನೂರ, ಎಲ್.ಎನ್.ಮಣೂರ, ಪಿ.ಸಿ.ಬಿರಾದರಾ, ಎಂ.ಪಿ.ದೊಡಮನಿ, ಕೆ.ಎಸ್.ಬಿರಾದಾರ, ಸಿ.ಎಂ.ಸೂರ್ಯವಂಶಿ, ಎಸ್.ಎಂ.ಕಾಚೂರ ಸೇರಿದಂತೆ ಅನೇಕರಿದ್ದರು.

