ಉದಯರಶ್ಮಿ ದಿನಪತ್ರಿಕೆ
ಚಿಕ್ಕಪಡಸಲಗಿ: ಇಲ್ಲಿನ ಶಿವಶರಣ ಹರಳಯ್ಯ ಸ್ಮಾರಕ ಪ್ರೌಢಶಾಲಾ ಮಕ್ಕಳಿಗೆ ಸೋಮವಾರ ಜಂತುಹುಳ ಮಾತ್ರೆ ವಿತರಿಸಲಾಯಿತು.
ಚಿಕ್ಕಲಕ್ಕಿ ಕ್ರಾಸ್ ಸಮುದಾಯ ಆರೋಗ್ಯ ಕೇಂದ್ರದ ವತಿಯಿಂದ ಶಾಲಾ ಮಕ್ಕಳಿಗೆ ಜಂತುಹುಳ ಮಾತ್ರೆ ವಿತರಿಸಿ ನುಂಗಿಸಲಾಯಿತು. ಮಾತ್ರೆಯ ಅರಿವು ಮೂಡಿಸಿ ಮಕ್ಕಳಲ್ಲಿ ಜಾಗೃತಿ ಮೂಡಿಸಲಾಯಿತು.
ವೈದ್ಯಾಧಿಕಾರಿ ಡಾ,ಮುಕುಂದ ಕಾಂಬಳೆ, ಜಂತುಹುಳುಗಳನ್ನು ಹೊಂದಿರುವ ಮಕ್ಕಳು ಕಡ್ಡಾಯವಾಗಿ ಮಾತ್ರೆ ತಗೆದುಕೊಳ್ಳಬೇಕು. ಅಪೌಷ್ಟಿಕತೆ ಮತ್ತು ರಕ್ತಹೀನತೆಯಿಂದ ಬಳಲುತ್ತಿರುವ ಮಕ್ಕಳು ಮಾನಸಿಕ , ದೈಹಿಕ ಬೆಳವಣಿಗೆಗೆ ತುತ್ತಾಗುತ್ತಾರೆ. ಅವರ ದೈಹಿಕ ಸಮತೋಲನ ಕುಂಠಿತವಾಗುತ್ತದೆ. ಕಾರಣ ಜಂತುಹಳುಗಳಿಂದ ತಮ್ಮನ್ನು ತಾವು ರಕ್ಷಿಸಿಕೊಳ್ಳಲು ಮನಸ್ಸು ತೋರಬೇಕು. ಶುದ್ಧ ನೀರು, ಆಹಾರ ತಗೆದುಕೊಳ್ಳಬೇಕು. ಸುತ್ತಲಿನ ಪರಿಸರ ಶುಚಿಯಾಗಿರಿಸಿಕೊಳ್ಳಬೇಕು ಎಂದರು.
ಚಿಕ್ಕಪಡಸಲಗಿ ಸಮುದಾಯ ಆರೋಗ್ಯಾಧಿಕಾರಿ ಆನಂದ ತೇಲಸಂಗ, ಮಕ್ಕಳಿಗೆ ಜಂತುಹುಳು ನಾಶಕ ಮಾತ್ರೆಗಳನ್ನು ಉಚಿತವಾಗಿ ಎಲ್ಲಾ ಶಾಲೆ, ಅಂಗನವಾಡಿ ಕೇಂದ್ರಗಳಲ್ಲಿ ಉಚಿತವಾಗಿ ನೀಡಲಾಗುತ್ತದೆ. ಶಾಲೆಗಳಲ್ಲಿ ದಾಖಲಾದ ಹಾಗೂ ಶಾಲೆಯಿಂದ ಹೊರಗುಳಿದ ಮಕ್ಕಳಿಗೂ ಮಾತ್ರೆ ನೀಡಿ ಅವರ ಆರೋಗ್ಯ ಕಾಪಾಡಲಾಗುತ್ತಿದೆ. ಇದರ ಸದುಪಯೋಗ ಪಡಿಸಿಕೊಳ್ಳಲು ಮುಂದಾಗಬೇಕು. ಅಲ್ಬೆಂಡಝೊಲ್ ಮಾತ್ರೆ ಮಕ್ಕಳಿಗೆ ಹಾಗೂ ವಯಸ್ಕರಿಗೆ ಒಂದು ಸುರಕ್ಷಿತ ಔಷಧವಾಗಿದೆ.ಇದನ್ನು ಅಗಿದು ನುಂಗಬೇಕು. ಉಸಿರುಗಟ್ಟುವುದನ್ನು ತಡೆಗಟ್ಟಲು ಶುದ್ಧ ಕುಡಿಯುವ ನೀರು ಉಪಯೋಗಿಸಬೇಕು ಎಂದರು.
ವಿಶ್ರಾಂತ ಹಿರಿಯ ಶಿಕ್ಷಕ ಬಸವರಾಜ ಅನಂತಪೂರ, ಮಕ್ಕಳು ಯಾವುದೇ ಕಾರಣಕ್ಕೆ ಹಿಂಜರಿಯದೆ ಮಾತ್ರೆ ಸ್ವೀಕರಿಸುವ ಭಾವ ಹೊಂದಬೇಕು. ಅನ್ಯ ಭಾಗ್ಯ ಐಸಿರಿಯ ಮುಂದೆ ಆರೋಗ್ಯ ಭಾಗ್ಯವೇ ಮೇಲು. ಇದನ್ನು ಇಂದಿನ ಯುವ ಮಕ್ಕಳು ಗಂಭೀರವಾಗಿ ಅಥೈ೯ಸಿಕೊಳ್ಳಬೇಕು. ಆರೋಗ್ಯ ಸುರಕ್ಷತೆಗೆ ಸಂಬಂಧಿಸಿದಂತೆ ಆದ್ಯತೆ ನೀಡಬೇಕು ಎಂದರು.
ಪ್ರಭಾರ ಮುಖ್ಯ ಶಿಕ್ಷಕ ಬಸವರಾಜ ಜಾಲೋಜಿ, ಶರೀರದಲ್ಲಿ ಆರೋಗ್ಯ ಧಾಮಿನ ಸಂಪನ್ನತೆ ಇದ್ದರೆ ಮಾತ್ರ ಮನಭಾವ ಸಂತೃಪ್ತಿ ಇರುತ್ತದೆ. ಪ್ರತಿಯೊಬ್ಬರ ಸಾಧನೆ,ಯಶಸ್ವಿನ ಗುಟ್ಟು ಲವಲವಿಕೆ ಭರಿತ ಆರೋಗ್ಯದಲ್ಲಿ ಹುದುಗಿದೆ ಎಂದರು.
ಶಿಕ್ಷಕರಾದ ಈರಪ್ಪ ದೇಸಾಯಿ,ಲೋಹಿತ ಮಿಜಿ೯, ಗುಲಾಬಚಂದ ಜಾಧವ, ಶ್ರೀಶೈಲ ಹುಣಶಿಕಟ್ಟಿ, ಶಿಕ್ಷಕಿಯರಾದ ಪ್ರಮೀಳಾ ತೇಲಸಂಗ, ಸಹನಾ ಕಲ್ಯಾಣಿ ಸೇರಿದಂತೆ ಆಶಾ ಕಾರ್ಯಕರ್ತೆಯರಾದ ಸಾವಿತ್ರಿ ನ್ಯಾಮಗೌಡ, ಮಹಾದೇವಿ ಸನಧಿ,ಶೋಭಾ ಪಾಟೀಲ, ಮಹಾದೇವಿ ಅಂಬಿ ಇತರರಿದ್ದರು.

