ಉದಯರಶ್ಮಿ ದಿನಪತ್ರಿಕೆ
ಬಸವನಬಾಗೇವಾಡಿ: ಪಟ್ಟಣದ ವಿವಿದೋದ್ಧೇಶ ಪ್ರಾಥಮಿಕ ಗ್ರಾಮೀಣ ಕೃಷಿ ಸಹಕಾರ ಸಂಘದ ಆಡಳಿತ ಮಂಡಳಿಗೆ ಸಾಲಗಾರರ ಸಾಮಾನ್ಯ, ಸಾಲಗಾರ ಹಿಂದುಳಿದ ಅ ವರ್ಗ ಹಾಗೂ ಸಾಲಗಾರರಲ್ಲದ(ಬಿನ್ ಸಾಲಗಾರ) ಕ್ಷೇತಗಳಿಗೆ ಭಾನುವಾರ ಜರುಗಿದ ಚುನಾವಣೆಯಲ್ಲಿ ಸಾಲಗಾರರ ಸಾಮಾನ್ಯ ಕ್ಷೇತ್ರದಿಂದ ಮಲ್ಲೇಶಿ ಬಸಪ್ಪ ಕಡಕೋಳ (ಪಡೆದ ಮತ 1113), ಸಂಗನಗೌಡ ಕಲ್ಲನಗೌಡ ಚಿಕ್ಕೊಂಡ (ಪಡೆದ ಮತ 1111), ಸಂತೋಷ ಬಸಪ್ಪ ಹಾರಿವಾಳ (ಪಡೆದ ಮತ 1082) , ಸಂಗನಬಸಪ್ಪ ಚನ್ನಪ್ಪ ನಾಯಕೋಡಿ (ಪಡೆದ ಮತ 1080), ಮುತ್ತಪ್ಪ ಶಿದ್ರಾಮಪ್ಪ ಉಕ್ಕಲಿ(ಪಡೆದ ಮತ 1028), ಸಾಲಗಾರ ಹಿಂದುಳಿದ ವರ್ಗ ಅ ಕ್ಷೇತ್ರದಿಂದ ಶ್ರೀಶೈಲ ಸಿದ್ದಪ್ಪ ಪರಮಗೊಂಡ(ಪಡೆದ ಮತ 999) , ಸಾಲಗಾರರಲ್ಲದ (ಬಿನ್ ಸಾಲಗಾರ) ಸಾಮಾನ್ಯ ಕ್ಷೇತ್ರದಿಂದ ಈರಣ್ಣ ಭೀಮಪ್ಪ ವಂದಾಲ(ಪಡೆದ ಮತ 23) ಅವರು ಆಯ್ಕೆಯಾಗಿದ್ದಾರೆ ಎಂದು ಚುನಾವಣಾಧಿಕಾರಿ ಎಸ್.ಎಂ.ಹಂಗರಗಿ ಘೋಷಿಸಿದರು.
ಪಟ್ಟಣದ ಬಸವ ತತ್ವ ಪ್ರಾಥಮಿಕ ಶಾಲೆಯಲ್ಲಿ ಭಾನುವಾರ ಬೆಳಗ್ಗೆಯಿಂದ ಸಂಜೆ ನಾಲ್ಕು ಗಂಟೆಯವರೆಗೆ ಜರುಗಿದ ಚುನಾವಣೆಯಲ್ಲಿ ಸಾಲಗಾರರ ಸಾಮಾನ್ಯ ಕ್ಷೇತ್ರದಿಂದ ಸ್ಪರ್ಧಿಸಿದ ಏಳು ಜನ ಅಭ್ಯರ್ಥಿಗಳಿಗೆ 1679 ಒಟ್ಟು ಮತದಾರರಲ್ಲಿ 1329 ಮತದಾರರು (ಶೇ.79.18) ಮತ ಚಲಾಯಿಸಿದ್ದರು. ಸಾಲಗಾರರಲ್ಲದ(ಬಿನ್ ಸಾಲಗಾರ) ಕ್ಷೇತ್ರದಿಂದ ಸ್ಪರ್ಧಿಸಿದ ಅಭ್ಯರ್ಥಿಗಳಿಗೆ 32 ಒಟ್ಟು ಮತದಾರರಲ್ಲಿ 29 ಮತದಾರರು (ಶೇ.90.63) ಮತ ಚಲಾಯಿಸಿದ್ದರು. ಮತದಾನ ಮುಕ್ತಾಯವಾದ ನಂತರ ಮತಎಣಿಕೆ ಆರಂಭಗೊಂಡು ಚುನಾವಣೆಯ ಫಲಿತಾಂಶ ಹೊರಬೀಳುತ್ತಿದ್ದಂತೆ ಮಾಜಿ ಅಧ್ಯಕ್ಷ ಸಂಗನಗೌಡ ಚಿಕ್ಕೊಂಡ ಅವರ (ಫೆನಲ್) ಗುಂಪಿಗೆ ಮತದಾರರು ಜಯಮಾಲೆಯ ತೀರ್ಪು ನೀಡಿದ್ದರಿಂದ ಮತಗಟ್ಟೆ ಮುಂಭಾಗ ಜಮಾಯಿಸಿದ್ದ ಇವರ ಅಪಾರ ಬೆಂಬಲಿಗರು ಪಟಾಕ್ಷಿ ಸಿಡಿಸಿ ಸಿಹಿ ಹಂಚಿ ಸಂಭ್ರಮಿಸಿದರು.
ವಿವಿಧೋದ್ಧೇಶ ಪ್ರಾಥಮಿಕ ಗ್ರಾಮೀಣ ಕೃಷಿ ಸಹಕಾರ ಸಂಘದ ಆಡಳಿತ ಮಂಡಳಿಯ ಹನ್ನೆರಡು ಸದಸ್ಯ ಬಲ ಹೊಂದಿದೆ. 12 ಸದಸ್ಯ ಸ್ಥಾನದಲ್ಲಿ ಸಾಲಗಾರ ಹಿಂದುಳಿದ ವರ್ಗ ಬ ಕ್ಷೇತ್ರದಿಂದ ನಿಂಗಪ್ಪ ದುಂಡಪ್ಪ ಕುಳಗೇರಿ, ಸಾಲಗಾರ ಪರಿಶಿಷ್ಟ ಜಾತಿ ವರ್ಗ ಕ್ಷೇತ್ರದಿಂದ ಸುರೇಶ ಹಣಮಂತ ನಾಯಕ, ಸಾಲಗಾರ ಮಹಿಳಾ ಮೀಸಲು ಕ್ಷೇತ್ರದಿಂದ ಜಯಶ್ರೀ ಜಗನಾಥ ಪಾಟೀಲ, ಮಾದೇವಿ ಪರಮಾನಂದ ಮೈಲೇಶ್ವರ ಒಟ್ಟು ನಾಲ್ಕು ಸದಸ್ಯರು ಅವಿರೋಧವಾಗಿ ಆಯ್ಕೆಯಾಗಿದ್ದರು. ಪರಿಶಿಷ್ಟ ಪಂಗಡ ಮೀಸಲು ಕ್ಷೇತ್ರಕ್ಕೆ ಯಾರೂ ನಾಮಪತ್ರ ಸಲ್ಲಿಸಿಲ್ಲ. ಸಾಲಗಾರರ ಸಾಮಾನ್ಯ ಕ್ಷೇತ್ರದ ಐದು ಸದಸ್ಯ ಸ್ಥಾನಗಳಿಗೆ ಏಳು ಜನ ಅಭ್ಯರ್ಥಿಗಳು, ಸಾಲಗಾರ ಹಿಂದುಳಿದ ಅ ವರ್ಗ ಕ್ಷೇತ್ರದ ಒಂದು ಸದಸ್ಯ ಸ್ಥಾನಕ್ಕೆ ಇಬ್ಬರು ಅಭ್ಯರ್ಥಿಗಳು,ಹಾಗೂ ಸಾಲಗಾರರಲ್ಲದ(ಬಿನ್ ಸಾಲಗಾರ) ಕ್ಷೇತದ ಒಂದು ಸ್ಥಾನಕ್ಕೆ ಇಬ್ಬರು ನಾಮಪತ್ರ ಸಲ್ಲಿಸಿದ್ದರಿಂದ ಈ ಮೂರು ಕ್ಷೇತ್ರಗಳಿಗೆ ಚುನಾವಣೆ ನಿಗದಿಯಾಗಿತ್ತು.
ಈ ಮೂರು ಕ್ಷೇತ್ರಗಳಿಗೆ ಜರುಗಿದ ಚುನಾವಣೆಯ ಕಣ ಈ ಸಲ ರಂಗೇರಿತ್ತು. ಚುನಾವಣೆಗೆ ಸ್ಪರ್ಧಿಸಿದ್ದ ಅಭ್ಯರ್ಥಿಗಳು ಅಟೋದಲ್ಲಿ ಧ್ವನಿವರ್ದಕದ ಮೂಲಕ ಪ್ರಚಾರ ಮಾಡುವ ಜೊತೆಗೆ ಮತದಾರರ ಮನೆಗಳಿಗೆ ತೆರಳಿ ಮತಯಾಚಿಸಿದ್ದರು. ವಾಟ್ಸ್ ಗ್ರುಫಿನಲ್ಲಿಯೂ ಪ್ರಚಾರ ಮಾಡಲಾಗಿತ್ತು. ಕಳೆದ ಐದು ಅವಧಿಯಿಂದ ಸಹಕಾರಿ ಸಂಘದ ಅಧ್ಯಕ್ಷರಾಗಿರುವ ಸಂಗನಗೌಡ ಕಲ್ಲನಗೌಡ ಚಿಕ್ಕೊಂಡ ಅವರ (ಫೆನಲ್) ಗುಂಪಿಗೆ ಮತದಾರರು ಮಣೆ ಹಾಕುವ ಮೂಲಕ ಮುಂದಿನ ಐದು ವರ್ಷದ ಆಡಳಿತ ಮಂಡಳಿಗೆ ಹಳೆ ಗುಂಪಿನ ಸದಸ್ಯರನ್ನು ಪುನರಾಯ್ಕೆಯಾಗುವಂತೆ ಮಾಡಿದ್ದು ವಿಶೇಷ. ನಂತರ ಆಯ್ಕೆಯಾದ ನೂತನ ಆಡಳಿತ ಮಂಡಳಿ ನಿರ್ದೇಶಕರು ತಮ್ಮ ಬೆಂಬಲಿಗರೊಂದಿಗೆ ಮೆರವಣಿಗೆ ಮೂಲಕ ಪಟ್ಟಣದ ಆರಾಧ್ಯ ದೈವ ಮೂಲನಂದೀಶ್ವರ(ಬಸವೇಶ್ವರ) ದೇವರ ದೇವಸ್ಥಾನಕ್ಕೆ ತೆರಳಿ ದೇವರ ದರ್ಶನ ಪಡೆದುಕೊಂಡರು.
ಈ ಸಂದರ್ಧದಲ್ಲಿ ಸಂಗನಗೌಡ ಚಿಕ್ಕೊಂಡ ಮಾತನಾಡಿ, ಮತದಾರರು ನಮ್ಮ ಮೇಲೆ ವಿಶ್ವಾಸವಿಟ್ಟು ನಮ್ಮ ಪೆನಲ್ ಆಯ್ಕೆ ಮಾಡಿರುವದಕ್ಕೆ ಅವರಿಗೆ ಕೃತಜ್ಞತೆ ಸಲ್ಲಿಸುತ್ತೇನೆ. ಕಳೆದ ಐದು ಅವಧಿಯಿಂದ ನಾನೇ ಅಧ್ಯಕ್ಷನಾಗಿ ಸಂಘದ ಅಭಿವೃದ್ದಿ ಶ್ರಮಿಸಿದ್ದೇನೆ. ಮುಂಬರುವ ದಿನಗಳಲ್ಲಿ ಸಂಘದ ಇನ್ನಷ್ಟು ಅಭಿವೃದ್ದಿಗೆ ಬದ್ಧನಾಗಿದ್ದೇನೆ ಎಂದರು.

