ಉದಯರಶ್ಮಿ ದಿನಪತ್ರಿಕೆ
ದೇವರಹಿಪ್ಪರಗಿ: ಪುರಾಣ ಕೇವಲ ಆಧ್ಯಾತ್ಮೀಕ, ಧಾರ್ಮಿಕ ಆಚಾರ ವಿಚಾರಗಳಿಗೆ ಸೀಮಿತವಲ್ಲ. ಇದು ಜಾನಪದ ಜಗತ್ತಿನ ಸೊಗಡನ್ನು ಪರಿಚಯಿಸಬಲ್ಲದು ಎನ್ನಲು ಭಾನುವಾರದ ರೈತರು ಹಂತಿ ಕಟ್ಟಿ ಜೋಳದ ರಾಶಿ ಮಾಡುವ ರೂಪಕ ಸಾಕ್ಷಿಯಾಯಿತು.
ಪಟ್ಟಣದ ವೀರಭದ್ರೇಶ್ವರ ಕಾರ್ತಿಕೋತ್ಸವದ ಅಂಗವಾಗಿ ಕಳೆದ ೧೨ ದಿನಗಳಿಂದ ಜರುಗುತ್ತಿರುವ ಕಲಬುರ್ಗಿ ಶರಣಬಸವೇಶ್ವರ ಮಹಾಪುರಾಣ ಅಂಗವಾಗಿ ಶರಣ ಬಸವೇಶ್ವರ ಜೀವನದ ವಿವಿಧ ಘಟ್ಟಗಳನ್ನು ಪರಿಚಯಿಸುವ ಸಂದರ್ಭಕ್ಕೆ ಅನುಸಾರವಾಗಿ ಭಾನುವಾರ ನಾಡಿನ ಜಾನಪದ ಸಂಸ್ಕೃತಿಯ ಪ್ರತೀಕವಾದ ಹಂತಿ ಹಬ್ಬದ ರೂಪಕವನ್ನು ಭಕ್ತರು ಮುಖ್ಯವಾಗಿ ಪಟ್ಟಣದ ರೈತ ಸಮುದಾಯ ಹಾಗೂ ಮಹಿಳೆಯರು ವಿವಿಧ ಹಂತಿಹಾಡುಗಳನ್ನು ಹೇಳಿ ಹಂತಿ ಕಟ್ಟಿ ಜೋಳದ ರಾಶಿ ಮಾಡುವುದರ ಮೂಲಕ ಸಾಂಪ್ರದಾಯಿಕ ಕೃಷಿ ಪದ್ಧತಿಯನ್ನು ನೆನಪಿಸಿದರು.
ರೈತರು ಸುಗ್ಗಿಯ ಕಾಲದಲ್ಲಿ ಸಂಭ್ರಮಿಸುತ್ತಿದ್ದ ದಿನಗಳನ್ನು ನೆನಪಿಸುವಂತೆ ಪ್ರತ್ಯಕ್ಷ ಹಂತಿ ಮಾಡುವು ಮೂಲಕ ತಮ್ಮ ಬದುಕಿನ ಸೊಗಡನ್ನು ಪುನಃ ಮೆಲಕು ಹಾಕುವಂತಾಯಿತು ಹಾಗೂ ಇಂದಿನ ಮಕ್ಕಳು ಹಾಗೂ ಯುವಕರಿಗೆ ಪರಿಚಯಿಸುವಂತಾಯಿತು. ವಿಶೇಷವಾಗಿ ಹಂತಿಹಬ್ಬದ ಎತ್ತುಗಳ ವೇಷದಾರಿಗಳು ಸಹ ನೋಡುಗರ ಗಮನ ಸೆಳೆದರು. ಜೊತೆಗೆ ಹಂತಿ ಹಬ್ಬದ ಸಂದರ್ಭಕ್ಕೆ ತಕ್ಕಂತೆ ಪುರಾಣಿಕರಾದ ಬಸವನ ಬಾಗೇವಾಡಿಯ ಒಡೆಯರ ಹಿರೇಮಠದ ಶಿವಪ್ರಕಾಶ ಶ್ರೀಗಳ ಆಧ್ಯಾತ್ಮಿಕ ವಿಚಾರಗಳು ಮೆರುಗು ತಂದವು.
ಕಾರ್ತಿಕೋತ್ಸವ ಸಮಿತಿಯ ಅಧ್ಯಕ್ಷ ಸಿ.ಕೆ.ಕುದರಿ, ಗುರುಬಸಪ್ಪ ಹಳಿಮನಿ, ಶ್ರೀಶೈಲ ದೇಸಾಯಿ, ನಿಂಗಪ್ಪ ಹಳಿಮನಿ, ರಾಮಗೊಂಡ ಅವುಟಿ, ಅಪ್ಪಣ್ಣ ಹಡಗಲಿ, ಕಾಸಪ್ಪ ಸರೂರ, ಚನ್ನಯ್ಯ ಮಲ್ಲಿಕಾರ್ಜುನಮಠ, ಯಲಗೂರೇಶ ದೇವೂರ, ಕಾಸಣ್ಣ ಮಿಂಚನಾಳ, ಗೋಲ್ಲಾಳ ದಾನಗೊಂಡ, ಚನ್ನಪ್ಪ ದೇಸಾಯಿ, ಮಲ್ಲು ಸೌದಿ, ವಿನೋದ ನಾಶೀಮಠ, ನಿಂಬೆಣ್ಣಪ್ಪ ಧುತ್ತರಗಾಂವಿ, ಗುರಪ್ಪ ಸಜ್ಜನ, ಶ್ರೀಶೈಲ ಯಾಳಗಿ, ದಿನೇಶ ಪಾಟೀಲ, ಶರಣಪ್ಪ ಕುಳಗೇರಿ, ಶರಣಪ್ಪ ಕೋಟಿನ, ರಮೇಶ ಮಶಾನವರ, ರವಿ ಯಾಳಗಿ, ಬಾಬುಗೌಡ ಪಾಟೀಲ, ಪಿ.ಎಸ್.ಮಿಂಚನಾಳ ಜೆ.ಆರ್.ಬಿರಾದಾರ ಸೇರಿದಂತೆ ಮಹಿಳೆಯರು, ಮಕ್ಕಳು ಇದ್ದರು.

