ಕಬ್ಬಿನ ಗದ್ದೆಗಳ ಮೇಲಿನ ವಿದ್ಯುತ್ ತಂತಿಗಳನ್ನು ಬದಲಾಯಿಸಲು ರೈತರ ಆಗ್ರಹ
ಉದಯರಶ್ಮಿ ದಿನಪತ್ರಿಕೆ
ದೇವರಹಿಪ್ಪರಗಿ: ವಿದ್ಯುತ್ ಅವಘಡದಿಂದಾಗಿ ಪಟ್ಟಣದ ೪ ಎಕರೆಯಲ್ಲಿ ಬೆಳೆದಿದ್ದ ಕಬ್ಬು ಬೆಂಕಿಗೆ ಆಹುತಿಯಾದ ಘಟನೆ ಶುಕ್ರವಾರ ಸಂಭವಿಸಿದೆ.
ಪಟ್ಟಣದ ಪಾಂಡುರಂಗ ದೇಶಪಾಂಡೆ ಅವರ ಆರು ಎಕರೆ ಜಮೀನಿನಲ್ಲಿ ಕಬ್ಬು ಬೆಳೆಯಲಾಗಿತ್ತು. ಶುಕ್ರವಾರ ಬೆಳಿಗ್ಗೆ ವಿದ್ಯುತ್ ತಂತಿಗಳ ಸ್ಪರ್ಶದಿಂದ ಘಟನೆ ಸಂಭವಿಸಿದ್ದು ಅಗ್ನಿಶಾಮಕ ತಂಡದವರು ಬೆಂಕಿ ನಂದಿಸಲು ಹರಸಾಹಸ ಪಟ್ಟರು. ಕಳೆದ ವರ್ಷವು ಇದೇ ಸಮಯದಲ್ಲಿ ಮೂರು ಎಕರೆಯಲ್ಲಿ ಬೆಳೆದ ಕಬ್ಬು ಬೆಂಕಿಗೆ ಆಹುತಿಯಾಗಿ ಲಕ್ಷಾಂತರ ನಷ್ಟ ಸಂಭವಿಸಿತ್ತು. ಆ ಸಂದರ್ಭದಲ್ಲಿ ಕಬ್ಬಿನ ಗದ್ದೆಯ ಮೇಲೆ ವಿದ್ಯುತ್ ತಂತಿಗಳು ಹಾದು ಹೋಗದಂತೆ ಕ್ರಮ ಕೈಗೊಳ್ಳಲು ರೈತರು ಸೂಚಿಸಿದ್ದರು. ಆದರೆ ಹೆಸ್ಕಾಂ ಯಾವುದೇ ಕ್ರಮ ವಹಿಸದ ಹಿನ್ನೆಲೆಯಲ್ಲಿ ಘಟನೆ ಈ ಬಾರಿಯು ಪುನರಾವರ್ತನೆಯಾದಂತಾಗಿದೆ.
ಹೆಸ್ಕಾಂ ಸಿಬ್ಬಂದಿ ಕೂಡಲೇ ಪಟ್ಟಣ ಸೇರಿದಂತೆ ತಾಲ್ಲೂಕಿನ ಕಬ್ಬಿನ ಗದ್ದೆಗಳ ಮೇಲಿನ ವಿದ್ಯುತ್ ತಂತಿಗಳನ್ನು ಬದಲಾಯಿಸಬೇಕು. ಹಾಗೂ ರೈತರಿಗೆ ಆದ ನಷ್ಟವನ್ನು ತಕ್ಷಣವೇ ತುಂಬಿ ಕೊಡಬೇಕು. ಜೊತೆಗೆ ಸರ್ಕಾರ ಮುಖ್ಯವಾಗಿ ತಾಲ್ಲೂಕು ಕೇಂದ್ರದಲ್ಲಿ ಅಗ್ನಿಶಾಮಕ ಠಾಣೆಯ ಆರಂಭಕ್ಕೆ ಕ್ರಮ ವಹಿಸಬೇಕು ಎಂದು ವೈದ್ಯರಾದ ಆರ್.ಆರ್.ನಾಯಿಕ್, ಮಂಜುನಾಥ ಮಠ, ಪ್ರಗತಿಪರ ರೈತರಾದ ಬಸವರಾಜ ಬಬಲೇಶ್ವರ, ಅಯ್ಯನಗೌಡ ಬಿರಾದಾರ(ಹರನಾಳ), ಪ್ರಭುದೇವ ಹಿರೇಮಠ, ಮಂಜುನಾಥ ಒಂಟೆತ್ತಿನ, ಉದ್ಯಮಿಗಳಾದ ಕೆ.ಎಸ್.ಕೋರಿ, ರಿಯಾಜ್ ಯಲಗಾರ, ಗುರು ಕರಭಂಟನಾಳ, ಉಮೇಶ ಹಳಪಾಣಿ ಆಗ್ರಹಿಸಿದ್ದಾರೆ

