ಉದಯರಶ್ಮಿ ದಿನಪತ್ರಿಕೆ
ದೇವರಹಿಪ್ಪರಗಿ: ಸಾಂಪ್ರದಾಯಿಕ ಛಟ್ಟಿ ಜಾತ್ರೆಯ ಅಂಗವಾಗಿ ರಾವುರಾಯನು ಪಲ್ಲಕ್ಕಿ ಉತ್ಸವದ ಮೂಲಕ ಮಲ್ಲಯ್ಯನ ದೇವಸ್ಥಾನ ಪ್ರವೇಶಿಸಿ ಮರಳಿ ಸ್ವಸ್ಥಾನಕ್ಕೆ ಮರಳುವುದರೊಂದಿಗೆ ಜಾತ್ರೆ ಸಂಪನ್ನಗೊಂಡಿತು.
ಪಟ್ಟಣದಲ್ಲಿ ಪ್ರತಿವರ್ಷ ಛಟ್ಟಿ ಅಮವಾಸ್ಯೆಯ ನಂತರ ಜರುಗುವ ರಾವುತರಾಯನ ಪಲ್ಲಕ್ಕಿ ಉತ್ಸವಕ್ಕೆ ಸೋಮವಾರ ಚಾಲನೆ ನೀಡಲಾಯಿತು. ಮಲ್ಲಯ್ಯನ ದೇವಸ್ಥಾನ ತಲುಪಿದ ರಾವುತರಾಯನು ಪಲ್ಲಕ್ಕಿ ಉತ್ಸವ ಸೇರಿದಂತೆ ಸಾಂಪ್ರದಾಯಿಕ ಆಚರಣೆಗಳ ನಂತರ ದೇವಸ್ಥಾನದಲ್ಲಿ ಆಸೀನನಾದನು. ಶನಿವಾರ ಛಟ್ಟಿ ಅಂಗವಾಗಿ ಕಾರ್ತಿಕೋತ್ಸವ ಹಾಗೂ ಮಹಾಪ್ರಸಾದ ನೆರವೇರಿಸಲಾಯಿತು. ನಂತರ ಪಲ್ಲಕ್ಕಿ ಉತ್ಸವದ ಮೂಲಕ ಭಾನುವಾರ ಮರಳಿ ಪಟ್ಟಣದ ತನ್ನ ದೇವಸ್ಥಾನಕ್ಕೆ ಮರಳಿದನು.
ಸಾಂಪ್ರದಾಯಿಕವಾಗಿ ರಾವುತರಾಯನು ಮಲ್ಲಯ್ಯನ ದೇವಸ್ಥಾನದಲ್ಲಿ ಷಷ್ಠಿಯವರೆಗೆ ಅಂದರೆ ಆರು ದಿನಗಳವರೆಗೆ ಇದ್ದು ನಂತರ ಮರಳಿ ತನ್ನ ಮೂಲದೇವಸ್ಥಾನಕ್ಕೆ ಮರಳುವನು. ಈ ಛಟ್ಟಿ ಜಾತ್ರೆಯ ಅಂಗವಾಗಿ ಪ್ರತಿ ವರ್ಷ ಜಾನುವಾರಗಳ ಬೃಹತ್ ಪ್ರದರ್ಶನ, ಮಾರಾಟ ಮೇಳ ಹಾಗೂ ಅತ್ಯುತ್ತಮ ರಾಸುಗಳಿಗೆ ಬಹುಮಾನ ವಿತರಣೆಗಳು ಪ್ರತಿವರ್ಷದಂತೆ ಈ ಬಾರಿ ವಿಜಯಪುರ ರಸ್ತೆಯಲಿರುವ ಗುರುಬಾಳಪ್ಪ ಯರಗಲ್ ಇವರ ಜಮೀನಿನಲ್ಲಿ ಜರುಗಿತು.
ಕಾರಣಿಕರ ಹೇಳಿಕೆಗಳು
ಪ್ರತಿವರ್ಷವು ಛಟ್ಟಿ ಜಾತ್ರೆಯ ಸಂದರ್ಭದಲ್ಲಿ ಶೀಡಗಟ್ಟಿ ಎಂಬ ಸ್ಥಳದಲ್ಲಿ ಕಾರಣಿಕರು ಹೇಳಿಕೆಗಳನ್ನು ಹೇಳುವ ಪದ್ಧತಿಯಿದ್ದು, ಈ ವರ್ಷ ಅವರು ಹೇಳಿದಂತೆ, “ಕಾಲಮಾನ ಬಹಳ ಕಷ್ಟ ಬಂದು, ಬಿಳಿ ಕಾಳು ಮೇಲಾಯಿತು, ಹತ್ತಿ ಸಣ್ಣಾಯಿತು, ನಂತರ ಗೋಧಿ, ಕುಸುಬೆ, ಅಗಸೆ ಬೆನ್ನು ಹತ್ತಿದವು. ರೈತನಿಗೆ ಮುಂದೆ ಕಷ್ಟಬಂತು. ಯಾರು ನನ್ನಂತೆ(ದೇವರಂತೆ) ಇರುವುರೋ, ಅವರ ಪರ ನಾನಿರುವೆ. ಧರ್ಮ ಹಿಡಿದು ನಡೆದವರನ್ನು ಅಂಗೈಯಲ್ಲಿ ಲಿಂಗದಂತೆ ಕಾಪಾಡುವೆ. ಅಲಕ್ಷಿಸಿದವರನ್ನು ತೊಗರಿ ಚಿಪಾಟಿಯಂತೆ ಮಾಡುವೆ ನೆನಪಿರಲಿ. ಖಂಡಿತ ಮುಂದಿನ ಸಲ ಇದೇ ಮಳೆ, ಇದೇ ಬೆಳೆ. ಐದು ದಿನ ಸಪ್ತಾಹ ಮಾಡಿದರೆ ಎಲ್ಲರ ಸಂರಕ್ಷಣೆ ಮಾಡುವೆ ಎಂದು ನುಡಿಯಲಾಯಿತು.

