ಲಿಂ. ರುದ್ರಮುನಿ ಶಿವಾಚಾರ್ಯರ ೪೭ನೇ ಪುಣ್ಯಾರಾಧನೆ | ಪುರಾಣ ಪ್ರವಚನ ಮಹಾಮಂಗಲ
ಉದಯರಶ್ಮಿ ದಿನಪತ್ರಿಕೆ
ಸಿಂದಗಿ: ಇಂದಿನ ಮಕ್ಕಳಿಗೆ ಶಿಕ್ಷಣದ ಜೊತೆಗೆ ಸಂಸ್ಕಾರ ಮತ್ತು ಸಂಸ್ಕೃತಿ ನೀಡಬೇಕಾಗಿರುವುದು ಅನಿವಾರ್ಯ. ನಾವೆಲ್ಲರೂ ಹೃದಯ ಶ್ರೀಮಂತಿಕೆ ಬೆಳೆಸಿಕೊಳ್ಳೋಣ. ಧರ್ಮವನ್ನು ಎಲ್ಲರೂ ಸೇರಿ ಉಳಿಸೋಣ ಎಂದು ಮಾಜಿ ಶಾಸಕ ರಮೇಶ ಭೂಸನೂರ ಹೇಳಿದರು.
ತಾಲೂಕಿನ ಯಂಕಂಚಿ ಗ್ರಾಮದ ಕುಂಟೋಜಿ ಹಿರೇಮಠದಲ್ಲಿ ಲಿಂ. ರುದ್ರಮುನಿ ಶಿವಾಚಾರ್ಯರ ೪೭ನೇ ಪುಣ್ಯಾರಾಧನೆ ನಿಮಿತ್ತ ಹಮ್ಮಿಕೊಂಡ ಉಜ್ಜಯಿನಿ ಶ್ರೀಮದ್ ಸಿದ್ದಲಿಂಗ ಜಗದ್ಗುರುಗಳ ಪುರಾಣ ಪ್ರವಚನ ಕಾರ್ಯಕ್ರಮದ ಮಹಾಮಂಗಲ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು, ವರ್ಷದಿಂದ ವರ್ಷಕ್ಕೆ ಸನಾತನ ಧರ್ಮವನ್ನು ಮಠಮಾನ್ಯಗಳು ಉಳಿಸಿ ಬೆಳೆಸುತ್ತಿವೆ. ಮಠಗಳಲ್ಲಿ ಸಂಸ್ಕಾರ, ಸಂಸ್ಕೃತಿ ಇಂದಿನ ಯುವ ಪೀಳಿಗೆಗೆ ದೊರೆಯುತ್ತಿದೆ ಎಂದರು.
ಈ ವೇಳೆ ಬಿಜೆಪಿ ಮಂಡಲ ಅಧ್ಯಕ್ಷ ಸಂತೋಷ ಪಾಟೀಲ ಡಂಬಳ, ಯಶವಂತರಾಯಗೌಡ ರೂಗಿ ಮಾತನಾಡಿ, ಶ್ರೀಗಳು ಯಂಕಂಚಿ ಗ್ರಾಮವನ್ನು ಕೈಲಾಸವನ್ನಾಗಿ ಮಾಡಿದ್ದಾರೆ. ನಮ್ಮ ನಡೆ ನುಡಿ, ಸಂಸ್ಕಾರ ಎಲ್ಲಿ ಎಂದರೆ ಅದು ಯಂಕಂಚಿ ಕುಂಟೋಜಿ ಮಠದಲ್ಲಿದೆ. ಎಲ್ಲರೂ ಸೇರಿಕೊಂಡು ಶ್ರೀಮಠವನ್ನು ಎತ್ತರಕ್ಕೆ ಬೆಳೆಸುವ ಕಾರ್ಯಮಾಡೋಣ. ರೈತರ ಸಮಸ್ಯೆಗಳಿಗೆ ಸ್ಪಂದಿಸುವ ಗುಣ ಸ್ವಭಾವ ಶ್ರೀಗಳಲ್ಲಿದೆ. ಇಂತಹ ಶ್ರೀಗಳನ್ನು ಪಡೆದ ನಾವೇ ಪುಣ್ಯವಂತರು. ಸನಾತನ ಹಿಂದೂ ಧರ್ಮವನ್ನು ಉಳಿಸಿ ಬೆಳೆಸಬೇಕು. ಮಠಾಧೀಶರ ಮಾತುಗಳನ್ನು ಎಲ್ಲರೂ ಪಾಲಿಸಬೇಕು. ಭಕ್ತಿ-ಭಾವ ಏನಾದರು ಇನ್ನೂ ಉಳಿದಿದೆ ಎಂದರೆ ಅದು ಗ್ರಾಮೀಣ ಪ್ರದೇಶದಲ್ಲಿ ಮಾತ್ರ. ಮಠಮಾನ್ಯಗಳು ಹಮ್ಮಿಕೊಳ್ಳುವ ಪುರಾಣ ಪ್ರವಚನ ನಮಗೆ ದಾರಿದೀಪ ಎಂದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಬಿಜೆಪಿ ಜಿಲ್ಲಾಧ್ಯಕ್ಷ ಆರ್.ಎಸ್.ಪಾಟೀಲ ಕೂಚಬಾಳ ಮಾತನಾಡಿ, ವ್ಯಕ್ತಿ ಶಕ್ತಿಯಾದಾಗ ಸಾಧಕನಾಗುತ್ತಾನೆ. ಮಠಗಳಲ್ಲಿ ಆದ್ಯಾತ್ಮಿಕ ಜ್ಞಾನವನ್ನು ಉಣಬಡಿಸುವ ಕಾರ್ಯ ಶ್ಲಾಘನೀಯ. ಹಾಳಾಗುವ ಆತ್ಮ ಭಗವಂತ ದೇಹದಲ್ಲಿ ಇಟ್ಟಿದ್ದಾನೆ. ಮನಸ್ಸು ಮತ್ತು ಆತ್ಮ ಸಂಶೋಧನೆ ಮಾಡುತ್ತಿರಿರುವುದು ಮಠಗಳಲ್ಲಿ ಎಂದು ಹೇಳಿದರು.
ಇದೇ ಸಂದರ್ಭದಲ್ಲಿ ಆಫಜಲಪೂರ ವಿಶ್ವಾರಾಧ್ಯ ಮಳೇಂದ್ರ ಶಿವಾಚಾರ್ಯರು, ಆಲಮೇಲದ ಚಂದ್ರಶೇಖರ ಶಿವಾಚಾರ್ಯರು, ಯಂಕಂಚಿ ಶ್ರೀಮಠದ ಅಭಿನವ ರುದ್ರಮುನಿ ಶಿವಾಚಾರ್ಯರು, ಕಡದಾಳ ಶ್ರೀಗಳು, ಅಗರಖೇಡ ಶ್ರೀಗಳು, ಸೂರ್ಯಕಾಂತ ಶಾಸ್ತ್ರಿಗಳು ಚಿದಾನಂದ ಶಾಸ್ತ್ರಿಗಳು, ಸಂತೋಷ ಶಾಸ್ತ್ರಿಗಳು, ಶಂಭುಲಿಂಗ ಶಾಸ್ತ್ರಿಗಳು, ಶರಣಯ್ಯ ಶಾಸ್ತ್ರಿಗಳು, ಶಂಕರಯ್ಯ ಶಾಸ್ತ್ರಿಗಳು, ಬಿಜೆಪಿ ಮುಖಂಡ ಶ್ರೀಶೈಲಗೌಡ ಬಿರಾದಾರ ಮಾಗಣಗೇರಿ, ಡಾ.ಅನಿಲ ನಾಯಕ, ನಿಂಗನಗೌಡ ಪಾಟೀಲ ಡಂಬಳ, ಆನಂದ ಚೌಧರಿ, ಶರಣಗೌಡ ಬಿರಾದಾರ, ಬಸವರಾಜ ಹೂಗಾರ, ಚಂದ್ರಶೇಖರ ಹೂಗಾರ, ಚಂದ್ರಶೇಖರ ನಾಗರಬೆಟ್ಟ, ಮಲ್ಲನಗೌಡ ಪಾಟೀಲ ಇಬ್ರಾಹಿಂಪೂರ, ಸಂಗನಗೌಡ ಪಾಟೀಲ ಅಗಸಬಾಳ, ಕಸಾಪ ಅಧ್ಯಕ್ಷ ಶಿವಾನಂದ ಬಡಾನೂರ, ಶಂಕರಗೌಡ ಬಿರಾದಾರ ಸೇರಿದಂತೆ ಶ್ರೀಮಠದ ಭಕ್ತರು, ಸುತ್ತಮುತ್ತಲಿನ ಗ್ರಾಮಸ್ಥರು ಇದ್ದರು.

