ತಾಲೂಕು ಮಟ್ಟದ ಪ್ರತಿಭಾ ಕಾರಂಜಿಯಲ್ಲಿ ಬಿಇಒ ವಸಂತ ರಾಠೋಡ ಅಭಿಮತ
ಉದಯರಶ್ಮಿ ದಿನಪತ್ರಿಕೆ
ನಿಡಗುಂದಿ: ಮಕ್ಕಳಲ್ಲಿ ಸುಪ್ತವಾಗಿ ಹುದುಗಿರುವ ಸೃಜನಾತ್ಮಕ ಸಾಂಸ್ಕೃತಿಕ ಕಲಾ ಚಟುವಟಿಕೆಗಳನ್ನು ಹೊರಹಾಕಲು ಪೂರಕವಾಗಿರುವ “ಪ್ರತಿಭಾ ಕಾರಂಜಿ-ಕಲೋತ್ಸವ” ಕಾರ್ಯಕ್ರಮ ಮಕ್ಕಳಿಗೆ ವೇದಿಕೆ ಮೇಲೆ ನಿಲ್ಲುವ ಆತ್ಮಸ್ಥೈರ್ಯ ತುಂಬುತ್ತದೆ. ಅಲ್ಲದೇ ಎಳೆ ಮನದಲ್ಲಿ ದಿಟ್ಟತೆಯ ಸ್ಟೇಜ್ ಕರೇಜ್ ದ ಕವರೇಜ್ ಗೆ ಸಹಕಾರಿಯಾಗಿದೆ ಎಂದು ಬಸವನ ಬಾಗೆವಾಡಿ ಕ್ಷೇತ್ರ ಶಿಕ್ಷಣಾಧಿಕಾರಿ ವಸಂತ ರಾಠೋಡ ಅಭಿಪ್ರಾಯಿಸಿದರು.
ಸಮೀಪದ ಗೊಳಸಂಗಿ ಗ್ರಾಮದ ಎಸ್.ಆರ್.ಎಡಿಪ್ರೌಢಶಾಲೆ, ಗಂಡು ಮಕ್ಕಳ ಮಾದರಿ ಪ್ರಾಥಮಿಕ ಶಾಲೆ ಹಾಗೂ ಹೆಣ್ಣು ಮಕ್ಕಳ ಶಾಲೆ ಸಹಯೋಗದಲ್ಲಿ ಜಿಪಂ, ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ವಿಜಯಪುರ, ಕ್ಷೇತ್ರಶಿಕ್ಷಣಾಧಿಕಾರಿಗಳ ಹಾಗೂ ಕ್ಷೇತ್ರ – ವಿಭಾಗದ ತಾಲೂಕು ಮಟ್ಟದ ಪ್ರತಿಭಾ ಕಾರಂಜಿ ಹಾಗೂ ಕಲೋತ್ಸವ ಉದ್ಘಾಟನಾ ಸಮಾರಂಭದಲ್ಲಿ ಅವರು ಮಾತನಾಡಿದರು.
ಎಳೆಯ ಬಾಲ-ಬಾಲೆಯರ ಮೊಗ್ಗಿನ ಮನಭಾವದಲ್ಲಿ ಪ್ರತಿಭಾ ಕಾರಂಜಿಯು ಉತ್ಸಾಹದ ಚಿಲುಮೆ ಮೂಡಿಸಿ ದಿಟ್ಟತೆಯಿಂದ ಸ್ಪಧಾ೯ ಮನಭಾವದಲ್ಲಿ ಪ್ರತಿಭಾ ಕಾರಂಜಿಯು ವಿಶಿಷ್ಟ ರೀತಿಯಲ್ಲಿ ಯಶಸ್ವಿಯಾಗುತ್ತಲಿದೆ ಎಂದರು.
ಶಾಲಾ ಹಂತದಲ್ಲಿ ಎಲ್ಲ ಮಕ್ಕಳನ್ನು ಸಕ್ರಿಯವಾಗಿ ತೊಡಗಿಸಿಕೊಳ್ಳಬೇಕಲ್ಲದೇ ಯಾವುದೇ ರೀತಿಯ ತಾರತಮ್ಯ ಮಾಡದೇ ಸೂಕ್ತ ಪ್ರತಿಭೆ ಗುರುತಿಸಿ ಜಿಲ್ಲಾ, ರಾಜ್ಯ ಮಟ್ಟದಲ್ಲಿ ಬೆಳಗುವಂತೆ ಶಿಕ್ಷಕರು ಶ್ರಮಿಸಬೇಕೆಂದು ಬಿಇಒ ವಸಂತ ರಾಠೋಡ ಸಲಹೆ ನೀಡಿದರು.
ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದ ತಾಲೂಕು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸುರೇಶ ಹಾರಿವಾಳ, ಸ್ಪಧಾ೯ ನಿಣಾ೯ಯಕರು ಪ್ರತಿಭೆಯಳ್ಳ ಮಕ್ಕಳನ್ನು ಗುರುತಿಸಿ ಪ್ರೋತ್ಸಾಹಿಸಬೇಕೆಂದರು.
ಅತಿಥಿಗಳಾಗಿ ಮಾತನಾಡಿದ ಸಹಕಾರ ಮಹಾಮಂಡಲದ ನಿದೇ೯ಶಕ ಐ.ಸಿ.ಪಟ್ಟಣಶೆಟ್ಟರ, ಪ್ರತಿಭಾ ಕಾರಂಜಿ ಎಂದರೆ ಮಕ್ಕಳಿಗೆ ಎಲ್ಲಿಲ್ಲದ ಖುಷಿ.ಪ್ರತಿಯೊಬ್ಬ ಭಾಗಿಯಾಗಿರುವ ಮಕ್ಕಳನ್ನು ಸೂಕ್ತವಾಗಿ ಗುರುತಿಸಿ ನಿರ್ಣಯ ಕೈಗೊಳ್ಳಬೇಕು ಎಂದರು.
ಇಂದು ಅಲ್ಲಲ್ಲಿ ಅನಾರೋಗ್ಯದ ತಾಂಡವಾಡುತ್ತಿದೆ. ಕಾರಣ ಮಕ್ಕಳಿಗೆ ಬಾಲ್ಯದಲ್ಲೇ ಕ್ರಿಯಾಶೀಲರಾಗುವಂತೆ ಪಾಠಗಳ ಜೊತೆಗೆ ಆಟೋತ್ಸವದಲ್ಲಿ ಸಂತಸದಿಂದ ತೋಡಗಿಸಿಕೊಳ್ಳಬೇಕು. ಮಕ್ಕಳಲ್ಲಿ ಹುದುಗಿರುವ ಪ್ರತಿಭೆ ಪ್ರಾಮಾಣಿಕ ಬದ್ದತೆಯಿಂದ ಅನಾವರಣೊಳಿಸಬೇಕು ಎಂದರು.
ಹಿರಿಯ ನ್ಯಾಯವಾದಿ ಬಿ.ಕೆ.ಕಲ್ಲೂರ ಮಾತನಾಡಿದರು.
ಗ್ರಾಮ ಪಂಚಾಯತ್ ಅಧ್ಯಕ್ಷ ಕೇಶವ ಪವಾರ ಅಧ್ಯಕ್ಷತೆ ವಹಿಸಿದ್ದರು.
ಅತಿಥಿಗಳಾಗಿ ಕ್ಷೇತ್ರ ಸಮನ್ವಯಾಧಿಕಾರಿ ಸುನೀಲ ನಾಯಕ, ಸುರೇಶ ಬಿರಾದಾರ, ಸಿ.ಟಿ.ಮಾದರ, ಅಮರೇಶ ನಾಡಗೌಡ, ರಮೇಶ ಬೆಳ್ಳುಬ್ಬಿ ಮಲ್ಲನಗೌಡ ಪಾಟೀಲ, ಎಸ್.ಎಮ್.ದಳವಾಯಿ, ಹೆಚ್.ಜಿ.ಗುಳೇದಗುಡ್ಡ, ಬಿ.ಎಸ್.ಪಾರ್ವತಿಮಠ, ಶಿವಾನಂದ ಮಂಗಾನವರ, ಎಎಲ್.ಗಂಗೂರ ಎಸ್.ಎನ್.ಮಿಣಜಗಿ ಸೇರಿದಂತೆ ಎಸ್.ಡಿ.ಎಂ.ಸಿ ಅಧ್ಯಕ್ಷರು, ಪ್ರಾಥಮಿಕ, ಪ್ರೌಢಶಾಲೆಯ ಸಂಘದ ಅಧ್ಯಕ್ಷರು, ಪದಾಧಿಕಾರಿಗಳು, ತಾಲೂಕಿನ ಇ.ಸಿ.ಓ,, ಬಿ.ಆರ್.ಪಿ, ಸಿ.ಆರ್.ಪಿ, ಬಿ.ಆಯ್.ಇ.ಆರ್.ಟಿ ಅಧಿಕಾರಿಗಳು ಭಾಗವಹಿಸಿದರು.
ಗ್ರಾಮದ ವಿವಿಧ ಶಾಲಾ ಮುಖ್ಯಸ್ಥರು, ಸಿಬ್ಬಂದಿಗಳು, ಸಂಘ, ಸಂಸ್ಥೆಗಳ ಪ್ರಮುಖರು, ಗ್ರಾಮಸ್ಥರು ಇತರರಿದ್ದರು.
ತಾಲೂಕಿನ ವಿವಿಧ ಶಾಲೆಗಳ ಶಿಕ್ಷಕರು, ಶಿಕ್ಷಕಿಯರು ತಮ್ಮ ಶಾಲಾ ಮಕ್ಕಳೊಂದಿಗೆ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.
ಬಿ.ಆರ್.ಪಿ. ಭಾರತಿ ಪಾಟೀಲ ನಿರೂಪಿಸಿದರು. ತಾಲೂಕು ದೈಹಿಕ ಶಿಕ್ಷಣ ಪರಿವೀಕ್ಷಕ ಎಸ್.ಎಸ್.ಅವಟಿ ವಂದಿಸಿದರು.

