ಉದಯರಶ್ಮಿ ದಿನಪತ್ರಿಕೆ
ದೇವರಹಿಪ್ಪರಗಿ: ಶಿಕ್ಷಣದ ಜೊತೆಗೆ ಸಂಸ್ಕಾರ ನೀಡಬೇಕಾಗಿದ್ದು ಹಾಗೂ ಪಡೆಯಬೇಕಾಗಿದ್ದು ಇಂದು ಅತೀ ಅಗತ್ಯವಾಗಿದೆ ಎಂದು ಬಾಲಗಾಂವ ಗುರುದೇವಾಶ್ರಮದ ಅಮೃತಾನಂದ ಶ್ರೀಗಳು ಹೇಳಿದರು.
ತಾಲ್ಲೂಕಿನ ಮಣೂರ ಗ್ರಾಮದ ಶ್ರೀವೆಂಕಟೇಶ್ವರ ದೇವಸ್ಥಾನದ ಜಾತ್ರಾಮಹೋತ್ಸವ ಅಂಗವಾಗಿ ಶುಕ್ರವಾರ ಜರುಗಿದ ಧರ್ಮಸಭೆಯಲ್ಲಿ ಪಾಲ್ಗೊಂಡು ಮಾತನಾಡಿದರು.
ಇಂದು ಯುವಜನತೆ ಪ್ಯಾಷನ್ ಹೆಸರಲ್ಲಿ ದಾರಿ ತಪ್ಪುತ್ತಿದೆ. ಹಣೆಗೆ ವಿಭೂತಿ, ಕುಂಕುಮ ಹಚ್ಚುವಂತ ನಮ್ಮ ಪರಂಪರೆ ಪ್ಯಾಷನ್ ಆಗಲಿ, ಇಂದು ನಾವು ಮಾಡುವ ನಮ್ಮ ಕಾರ್ಯಗಳಿಂದಲೇ ಪ್ರತಿಫಲ ಪಡೆಯುತ್ತಿದ್ದೇವೆ. ನಮ್ಮ ಅಗತ್ಯತೆಗಳಿಗೆ ಜಗದ ಪರಿಸರ ಮಲೀನಗೊಳಿಸಿ ಸ್ವಚ್ಛತೆಗಾಗಿ ಹೊಸ ಅವಿಷ್ಕಾರಗಳಿಗೆ ಅಣಿಯಾಗುತ್ತಿದ್ದೇವೆ. ನೆನಪಿರಲಿ ನಮ್ಮೇಲ್ಲ ರೋಗಗಳಗೆ ಶುದ್ಧಗಾಳಿಯೇ ಸಿದ್ಧ ಔಷಧ ಎಂದು ಮನುಷ್ಯನ ಮನಸ್ಥಿತಿಗಳ ಕುರಿತು ವಿವರಿಸಿ, ಸುಂದರ ಶಾಂತಿಮಯ ಜೀವನಕ್ಕಾಗಿ ವಿದ್ಯಾರ್ಥಿಗಳು ಶಿಕ್ಷಣದ ಜೊತೆಗೆ ಪೂಜೆ, ಧ್ಯಾನ, ತಪಗಳಂತಹ ಆಧ್ಯಾತ್ಮೀಕ ಆಚರಣೆಗಳನ್ನು ಅಳವಡಿಸಿಕೊಳ್ಳಬೇಕು ಎಂದರು.
ವೀರಗೋಟ ಅಡವಿಲಿಂಗ ಸ್ವಾಮೀಜಿ ಸಾನಿಧ್ಯ ವಹಿಸಿ ಮಾತನಾಡಿ, ಮಾನವ ಮೂಲತಃ ಸ್ವಾರ್ಥಿ, ತನ್ನ ಉಳಿವಿಗಾಗಿ ಜಗವನ್ನೇ ದುರುಪಯೋಗ ಪಡಿಸಿಕೊಂಡು ಇಡೀ ಜೀವಿಸಂಕುಲದಲ್ಲಿ ಅತ್ಯಂತ ದುಃಖಿಯಾಗಿ ಕಾಣುತ್ತಿದ್ದಾನೆ ಎಂದರು.
ದೇವೂರ ಹಿರೇಮಠದ ಮರುಳಾರಾಧ್ಯಶ್ರೀಗಳು ಹಾಗೂ ಬಸವನ ಸಂಗೋಳಗಿಯ ಅಭಿನವ ಸಿದ್ಧರತ್ನ ಮದಗೋಂಡೇಶ್ವರ ಸ್ವಾಮೀಜಿ ಆಶೀರ್ವಚನ ಹಾಗೂ ಸಂಗೀತ ಸೇವೆ ನೀಡಿದರು.
ಅಖಿಲ ಭಾರತ ಶರಣಸಾಹಿತ್ಯ ಪರಿಷತ್ ತಾಲ್ಲೂಕು ಅಧ್ಯಕ್ಷ ಎಸ್.ಎನ್.ಬಸವರೆಡ್ಡಿ ಮಾತನಾಡಿದರು. ವೆಂಕಟೇಶ್ವರ ದೇವಸ್ಥಾನ ಸೇವಾ ಸಮಿತಿ ಅಧ್ಯಕ್ಷ ಎಲ್.ಆರ್.ಅಂಗಡಿ ಜಾತ್ರಾ ಮಹೋತ್ಸವ ಅಧ್ಯಕ್ಷತೆ ವಹಿಸಿದ್ದರು.
ಇದೇ ಸಂದರ್ಭದಲ್ಲಿ ಕ್ರೀಡಾರಂಗದಲ್ಲಿ ವಿಶೇಷ ಸಾಧನೆ ಮಾಡಿದ ವಿದ್ಯಾರ್ಥಿಗಳನ್ನು ಸನ್ಮಾನಿಸಲಾಯಿತು.
ಮಣೂರ ಗ್ರಾಮ ಪಂಚಾಯಿತಿ ಅಧ್ಯಕ್ಷ ಕೇಸು ರಾಠೋಡ, ಬಾಬುಗೌಡ ಪಾಟೀಲ, ಪಿ.ಎಚ್.ಜಾಧವ, ಸುಭಾಸ್ ಹರವಾಳ, ವಿಲಾಸ ಕುಮಟಗಿ, ಸುರೇಶ ಪ್ಯಾಟಿ, ಅಂಬಣ್ಣ ಆನೆಗೊಂದಿ, ಭೀಮಣ್ಣ ವಾಲಿಕಾರ, ರಾಮಣ್ಣ ಕುಮಟಗಿ, ಚಂದ್ರಶೇಖರ ಪ್ಯಾಟಿ, ಮೋಹನ ಸಜ್ಜನ, ಪ್ರಕಾಶ ನಾಯಿಕ್, ಎಸ್.ಎಸ್.ಸೊನ್ನದ, ಆರ್.ವ್ಹಿ.ಜಾಧವ, ಗುರುಪಾದ ದೇವೂರ ಸೇರಿದಂತೆ ದೇವೂರ, ಮಣೂರ ಗ್ರಾಮದ ಭಕ್ತರು, ಶಾಲಾ ಕಾಲೇಜುಗಳ ವಿದ್ಯಾರ್ಥಿಗಳು, ಸಿಬ್ಬಂದಿ ಇದ್ದರು.

