ಉದಯರಶ್ಮಿ ದಿನಪತ್ರಿಕೆ
ಚಡಚಣ: ಆಲೋಚನೆಗಳ ವಿನಿಮಯ ಮತ್ತು ಕಾರ್ಯಕ್ರಮಗಳು, ಸೇವೆಗಳು ಮತ್ತು ಚಟುವಟಿಕೆಗಳ ಮಾಹಿತಿಯನ್ನು ಹಂಚಿಕೊಳ್ಳುವ ಮೂಲಕ ವಿದ್ಯಾರ್ಥಿಗಳ ಸರ್ವತೋಮುಖ ಅಭಿವೃದ್ಧಿ ಸಾಧ್ಯ ಎಂದು ಪಟ್ಟಣದ ಶ್ರೀ ಸಂಗಮೇಶ್ವರ ಕಲಾ, ವಾಣಿಜ್ಯ ಹಾಗೂ ವಿಜ್ಞಾನ ಮಹಾವಿದ್ಯಾಲಯದ ಪ್ರಾಚಾರ್ಯ ಡಾ.ಎಸ್.ಬಿ.ರಾಠೋಡ ಹೇಳಿದರು.
ಎರಡೂ ಮಹಾವಿದ್ಯಾಲಯಗಳ ಒಡಂಬಡಿಕೆಯ ಪ್ರಕಾರ ಕನ್ನಡ ವಿಭಾಗ ಆಯೋಜಿಸಿದ ಕಾರ್ಯಕ್ರಮದಲ್ಲಿ ಇಂಡಿ ಪಟ್ಟಣದ ಜಿ.ಆರ್. ಗಾಂಧಿ ಕಲಾ ಹಾಗೂ ವೈ.ಎ. ಪಾಟೀಲ ವಾಣಿಜ್ಯ ಮಹಾವಿದ್ಯಾಲಯದ ವಿದ್ಯಾರ್ಥಿಗಳು ಮತ್ತು ಪ್ರಾಧ್ಯಾಪಕರು ಕಾಲೇಜಿಗೆ ಭೇಟಿ ನೀಡಿದ ಪ್ರಯುಕ್ತ ಜರುಗಿದ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಅವರು ಮಾತನಾಡುತ್ತಿದ್ದರು.
ಕನ್ನಡ ವಿಭಾಗದ ಮುಖ್ಯಸ್ಥ ಡಾ. ಎಂ. ಎಸ್. ಮಾಗಣಗೇರಿ ಮಾತನಾಡಿ, ವಿದ್ಯಾರ್ಥಿ ಮತ್ತು ಶಿಕ್ಷಕರ ವಿನಿಮಯ ಕಾರ್ಯಕ್ರಮವು ಜಾಗತಿಕ ಪೌರತ್ವವನ್ನು ಬೆಳೆಸಲು, ಅಂತರ್ ಸಾಂಸ್ಕೃತಿಕ ತಿಳುವಳಿಕೆಯನ್ನು ಉತ್ತೇಜಿಸಲು ಮತ್ತು ಹೆಚ್ಚುತ್ತಿರುವ ಅಂತರ ಸಪರ್ಕಿತ ಜಗತ್ತಿನಲ್ಲಿ ಅಭಿವೃದ್ಧಿ ಹೊಂದಲು ಅಗತ್ಯವಿರುವ ಕೌಶಲ್ಯ ಮತ್ತು ದೃಷ್ಟಿಕೋನಗಳನ್ನು ಬೇಳೆಸಿಕೊಳ್ಳಲು ಸಹಕಾರಿಯಾಗಿದೆ ಎಂದರು. ಇಂಡಿ ಪಟ್ಟಣದ ಜಿ.ಆರ್. ಗಾಂಧಿ ಕಲಾ ಹಾಗೂ ವೈ.ಎ. ಪಾಟೀಲ ವಾಣಿಜ್ಯ ಮಹಾವಿದ್ಯಾಲಯದ ಪ್ರಾಧ್ಯಾಪಕ ಪ್ರೊ. ಶ್ರೀಶೈಲ ಸಣ್ಣಕ್ಕಿ ಮಾತನಾಡಿ, ಪ್ರಾಚೀನ ಕನ್ನಡ ಸಾಹಿತ್ಯವನ್ನು ಇಡಿಯಾಗಿ ನೋಡಿದರೆ ಅದರೊಳಗೆ ಧರ್ಮ, ಅಧರ್ಮದ ವಿವೇಚನೆ ಇದೆ. ಆತ್ಮದ ಉದ್ದಾರಕ್ಕೆ ಮನುಷ್ಯ ಸ್ವೀಕರಿಸಬೇಕಾದ ಜೀವನ ಮೌಲ್ಯಗಳ ಗುರುತುಗಳು ಹಲವು ಬಗೆಯಲ್ಲಿ ವ್ಯಕ್ತವಾಗಿವೆ. ‘ಈ ಸಂಸ್ಕೃತಿಯೊಳ್ ಧರ್ಮಾಧರ್ಮ ಸ್ಥಿತಿಯೆ ವಲಂ ಸ್ವರ್ಗನರಕ ಸುಖದುಃಖಕರಂ’ ಎಂಬ ಪಂಪನ ಮಾತಿನಲ್ಲಿ ಧರ್ಮ ಮತ್ತು ಅಧರ್ಮದ ಆಚರಣೆಯಿಂದ ಜೀವಿ ಪಡೆದುಕೊಳ್ಳುವ ಸ್ಥಿತಿಯ ಸೂಚನೆಯಿದೆ. ಈ ಹಿನ್ನೆಲೆಯಲ್ಲಿ ಪಂಪ ತನ್ನ ಕೃತಿ ಆದಿಪುರಾಣವನ್ನು ’ಧಾರ್ಮಿಕ ಕಾವ್ಯ’ ಎಂದು ಕರೆದುಕೊಂಡಂತೆ ಕಾಣುತ್ತದೆ ಎಂದು ಹೇಳಿದರು.
ಪ್ರೊ. ಮಹಾಂತೇಶ ಜನವಾಡ ಮಾತನಾಡಿ ವಿನಿಮಯ ಕಾರ್ಯಕ್ರಮವು ವಿಶಿಷ್ಟ ಸಂಸ್ಕೃತಿಯನ್ನು ಆನಂದಿಸುವುದರ ಜೊತೆಗೆ ಸ್ಥಳೀಯ ಜೀವನದ ಅಧ್ಯಯನವನ್ನು ಅನುಭವಿಸುವ ಅವಕಾಶ ಮಾಡಿಕೊಡುತ್ತದೆ. ಎರಡೂ ಕಾಲೇಜುಗಳ ಪರಸ್ಪರ ಶಿಕ್ಷಣ ವ್ಯವಸ್ಥೆ, ಸಂಸ್ಕೃತಿ, ಸಂಪ್ರದಾಯಗಳು ಮತ್ತು ಜೀವನಶೈಲಿಯ ಒಳನೋಟವನ್ನು ಪಡೆಯಲು, ವಿವಿಧ ಜನಾಂಗೀಯ ಗುಂಪುಗಳ ಸೂಕ್ಷ್ಮತೆ, ಮೆಚ್ಚುಗೆ ಮತ್ತು ತಿಳುವಳಿಕೆಯನ್ನು ಬೆಳೆಸುತ್ತದೆ ಎಂದು ಹೇಳದರು. ಕಾರ್ಯಕ್ರಮದಲ್ಲಿ ಡಾ. ಪಿ. ಕೆ. ರಾಠೋಡ, ಡಾ. ಮಯೂರ್ ಕುದುರಿ, ಪ್ರೊ. ಶಂಕರ ಕಡೂರ, ಡಾ. ಮುರುಗೇಶ್ ಕೆ. ಎಂ., ಪ್ರೋ ಬಸವರಾಜ ನೀಲವಾಣಿ, ಇಂಡಿ ಮಹಾವಿದ್ಯಾಲಯದ ವಿದ್ಯಾರ್ಥಿಗಳು ಹಾಗೂ ಸಂಗಮೇಶ್ವರ ಮಹಾವಿದ್ಯಾಲಯದ ವಿದ್ಯಾರ್ಥಿಗಳು ಭಾಗವಹಿಸಿದ್ದರು. ಪ್ರೊ. ಎಸ್. ಎಫ್. ಬಿರಾದಾರ ನಿರೂಪಿಸಿ ವಂದಿಸಿದರು.

