ಉದಯರಶ್ಮಿ ದಿನಪತ್ರಿಕೆ
ವಿಜಯಪುರ: ಭಗವಂತನಿತ್ತ ಸಂಪತ್ತು ಬಾಳಿನ ನಿಜವಾದ ಸಂಪತ್ತು. ಮನುಷ್ಯ ಜೀವನ ಸುಂದರ ಮತ್ತು ಶುದ್ಧಗೊಳಿಸುವುದೇ ಧರ್ಮದ ಗುರಿ. ಬದುಕಿನ ಹಿರಿಮೆ ಮತ್ತು ರಹಸ್ಯ ಬೋಧಿಸುವುದೇ ನಿಜವಾದ ಧರ್ಮವೆಂದು ಬಾಳೆಹೊನ್ನೂರು ಶ್ರೀ ರಂಭಾಪುರಿ ಡಾ.ವೀರಸೋಮೇಶ್ವರ ಜಗದ್ಗುರು ಅಭಿಪ್ರಾಯಪಟ್ಟರು.
ಅವರು ಶನಿವಾರ ತಾಲೂಕಿನ ಕನ್ನೂರು ಗುರು ಮಠದ ಲಿಂ.ಮಲ್ಲಿಕಾರ್ಜುನ ಶಿವಾಚಾರ್ಯರ ೧೯ನೇ ವರ್ಷದ ಪುಣ್ಯ ಸ್ಮರಣೋತ್ಸವ ಹಾಗೂ ಗುರು ಪರಂಪರೆಯ ಜಾತ್ರಾ ಮಹೋತ್ಸವ ಧರ್ಮ ಸಮಾರಂಭದ ಸಾನ್ನಿಧ್ಯ ವಹಿಸಿ ಆಶೀರ್ವಚನ ನೀಡುತ್ತಿದ್ದರು.
ಸಮಸ್ತ ಜನರ ಭೋಗ ಮೋಕ್ಷಗಳಿಗೆ ಧರ್ಮವೇ ಮೂಲ. ಶ್ರಮದ ಕಾಯಕದಿಂದಲೇ ಮನುಷ್ಯನಿಗೆ ಚೈತನ್ಯ ಪ್ರಾಪ್ತಿಯಾಗುತ್ತದೆ. ಮಾನವ ಪರಿಪೂರ್ಣದೆಡೆಗೆ ಪಯಣಿಸುವುದೇ ನಿಜವಾದ ಸಾಧನೆ. ಅಹಿಂಸಾದಿ ಧ್ಯಾನ ಪರ್ಯಂತರ ದಶ ಧರ್ಮ ಸೂತ್ರಗಳ ಪರಿಪಾಲನೆಯಿಂದ ಮಾನವ ಜೀವನ ಸಾರ್ಥಕಗೊಳ್ಳುವುದೆಂದು ಸಾರಿದ ಶ್ರೀ ಜಗದ್ಗುರು ರೇಣುಕಾಚಾರ್ಯರ ವಿಚಾರ ಧಾರೆಗಳು ಸರ್ವಕಾಲಕ್ಕೂ ಸರ್ವರಿಗೂ ಅನ್ವಯಿಸುತ್ತವೆ. ಹುಟ್ಟು ಎಷ್ಟು ಸಹಜವೋ ಹುಟ್ಟಿದ ಮನುಷ್ಯನಿಗೆ ಮೃತ್ಯು ಬಿಟ್ಟಿದ್ದಲ್ಲ. ಹುಟ್ಟು ಸಾವುಗಳ ಮಧ್ಯದ ಬದುಕನ್ನು ಮನುಷ್ಯ ಸಾರ್ಥಕಪಡಿಸಿಕೊಳ್ಳಬೇಕು. ಲಿಂ.ಮಲ್ಲಿಕಾರ್ಜುನ ಶಿವಾಚಾರ್ಯ ಸ್ವಾಮಿಗಳು ವಾಗ್ಮಿಗಳಾಗಿ ಸಮಾಜ ಚಿಂತಕರಾಗಿ ಗುರುಮಠದ ಅಭಿವೃದ್ಧಿಗೆ ಶ್ರಮಿಸಿದ್ದನ್ನು ಮರೆಯಲಾಗದೆಂದರು.
ಕನ್ನಡ ಕುಲಕೇಸರಿ ಪ್ರಶಸ್ತಿ ಪುರಸ್ಕೃತ ಕ.ಸಾ.ಪ.ಜಿಲ್ಲಾ ಅಧ್ಯಕ್ಷ ಹಾಸೀಂಪೀರ ವಾಲಿಕಾರ ಸಮಾರಂಭ ಉದ್ಘಾಟಿಸಿ ಮಾತನಾಡಿ, ನಡೆದಾಡುವ ದಾರಿಯಲ್ಲಿ ಬಿದ್ದ ಕಲ್ಲು ಮುಳ್ಳುಗಳನ್ನು ಎತ್ತಿ ಹಾಕುವುದೇ ನಿಜವಾದ ಧರ್ಮ. ವೀರಶೈವ ಧರ್ಮದ ಧರ್ಮಾಚಾರ್ಯರು ಜಾತಿ ಜನಾಂಗಗಳ ಗಡಿ ಮೀರಿ ಮಾನವೀಯತೆಯ ಆದರ್ಶ ಮೌಲ್ಯಗಳನ್ನು ಬೋಧಿಸಿದ್ದನ್ನು ಮರೆಯಲಾಗದು. ಲಿಂ.ಮಲ್ಲಿಕಾರ್ಜುನ ಶಿವಾಚಾರ್ಯರು ರೂಪಿಸಿದ ದಾರಿಯಲ್ಲಿ ಇಂದಿನ ಸೋಮನಾಥ ಶಿವಾಚಾರ್ಯರು ಮಠದ ಅಭಿವೃದ್ಧಿಗೆ ಶ್ರಮಿಸುತ್ತಿರುವುದು ಭಕ್ತ ಸಮೂಹಕ್ಕೆ ಸಂತೋಷ ತಂದಿದೆ ಎಂದರು.
ಕಾರ್ಯಕ್ರಮ ರೂವಾರಿ ಸೋಮನಾಥ ಶಿವಾಚಾರ್ಯ ಸ್ವಾಮಿಗಳು ಪ್ರಾಸ್ತಾವಿಕವಾಗಿ ಮಾತನಾಡಿ, ವೀರಶೈವ ಧರ್ಮ ಅಂತರಂಗ ಮತ್ತು ಬಹಿರಂಗ ಶುದ್ಧಿಗೆ ಆದ್ಯತೆ ಕೊಟ್ಟಿದೆ. ಸುಖದ ಸಾಧನವೇ ಧರ್ಮ. ದೇಹದ ಚಿಂತೆ ಬಿಟ್ಟು ದೇವರ ಚಿಂತೆ ಮಾಡಿದಾಗ ಜೀವನ ಸಾರ್ಥಕಗೊಳ್ಳುತ್ತದೆ. ಲಿಂ.ಮಲ್ಲಿಕಾರ್ಜುನ ಶ್ರೀಗಳವರ ವಿಚಾರ ಧಾರೆಗಳು ನಮ್ಮೆಲ್ಲರಿಗೂ ಸ್ಫೂರ್ತಿ ಉಂಟು ಮಾಡುತ್ತಿವೆ ಎಂದರು.
ಇದೇ ಸಂದರ್ಭದಲ್ಲಿ ದಾಶಾಳ-ತಾಜಪುರ ಹಿರೇಮಠದ ಪಂ.ಶಂಕರಯ್ಯ ಶಾಸ್ತ್ರಿಗಳಿಗೆ ಶಿವತತ್ವ ಚಿಂತಾಮಣಿ, ವಿಜಯಪುರದ ಸಾವಯವ ಕೃಷಿ ತಜ್ಞೆ ಕವಿತಾ ಮಿಶ್ರಾ ಇವರಿಗೆ ಕೃಷಿ ಮಹಿಳಾ ರತ್ನ ಪ್ರಶಸ್ತಿ ಪ್ರದಾನ ಮಾಡಿ ಗೌರವಿಸಲಾಯಿತು.
ಹತ್ತಳ್ಳಿ ಗುರುಪಾದ ಶಿವಾಚಾರ್ಯರು ಅಧ್ಯಕ್ಷತೆ ವಹಿಸಿದ್ದರು. ಬೊಮ್ಮನಹಳ್ಳಿ ಗುರುಶಾಂತ ಶಿವಾಚಾರ್ಯರು ನೇತೃತ್ವ ವಹಿಸಿದ್ದರು. ಕಡೇನಂದಿಹಳ್ಳಿ ರೇವಣಸಿದ್ಧೇಶ್ವರ ಶಿವಾಚಾರ್ಯರು ಉಪದೇಶಾಮೃತ ನೀಡಿದರು. ಮನಗೂಳಿ ಅಭಿನವ ಸಂಗನಬಸವ ಶಿವಾಚಾರ್ಯರು, ಜಮಖಂಡಿಯ ಶಿವಲಿಂಗ ಪಂಡಿತಾರಾಧ್ಯ ಶಿವಾಚಾರ್ಯರು, ಕನ್ನೂರು ಶಿವಸಿದ್ಧಲಿಂಗ ಶಿವಯೋಗಿ ಮಹಾರಾಜರು ಸಮಾರಂಭದಲ್ಲಿ ಪಾಲ್ಗೊಂಡಿದ್ದರು.
ಮಡಿವಾಳಯ್ಯ ಶಾಸ್ತ್ರಿಗಳು ಜೇರಟಗಿ ಸರ್ವರನ್ನು ಸ್ವಾಗತಿಸಿದರು. ಗೌಡಗಾಂವ ಶಿವರುದ್ರಯ್ಯ ಗವಾಯಿಗಳು ಹಾಗೂ ಜೇರಟಗಿ ಶಾಂತಕುಮಾರ ಇವರಿಂದ ಸಂಗೀತ ಸೇವೆ ಜರುಗಿತು. ಅಮರಯ್ಯಸ್ವಾಮಿ ಜಾಲಿಬೆಂಚಿ ಹಾಗೂ ರಮೇಶ ಬೋಗಾರ ನಿರೂಪಿಸಿದರು.

