ಉದಯರಶ್ಮಿ ದಿನಪತ್ರಿಕೆ
ಬಸವನಬಾಗೇವಾಡಿ: ಪಟ್ಟಣದ ವಿವಿಧೋದ್ದೇಶ ಪ್ರಾಥಮಿಕ ಗ್ರಾಮೀಣ ಕೃಷಿ ಸಹಕಾರಿ ಸಂಘದ ಆಡಳಿತ ಮಂಡಳಿಯ ವಿವಿಧ ಸ್ಥಾನಗಳಿಗಾಗಿ ಡಿ. 8 ರವಿವಾರದಂದು ಜರುಗಲಿರುವ ಚುನಾವಣೆ ಕಣ ರಂಗೇರಿದೆ.
ವಿವಿಧೋದ್ದೇಶ ಪ್ರಾಥಮಿಕ ಗ್ರಾಮೀಣ ಕೃಷಿ ಸಹಕಾರಿ ಸಂಘದ ಆಡಳಿತ ಮಂಡಳಿಯ ಸಾಲಗಾರ ಸಾಮಾನ್ಯ, ಸಾಲಗಾರ ಹಿಂದುಳಿದ ಅ ವರ್ಗ/ಸಾಲಗಾರ ಮಹಿಳಾ ಹಾಗೂ ಸಾಲಗಾರರಲ್ಲದ (ಬಿನ್ ಸಾಲಗಾರ) ಸೇರಿದಂತೆ ಒಟ್ಟು 12 ಸ್ಥಾನಗಳಲ್ಲಿ ಸಾಲಗಾರ ಹಿಂದುಳಿದ ವರ್ಗ ಬ ದಿಂದ ನಿಂಗಪ್ಪ ದುಂಡಪ್ಪ ಕುಳಗೇರಿ, ಸಾಲಗಾರ ಪರಿಶಿಷ್ಟ ಜಾತಿಯಿಂದ ಸುರೇಶ ಹಣಮಂತ ನಾಯಕ, ಸಾಲಗಾರ ಮಹಿಳಾ ಮೀಸಲು ಸ್ಥಾನದಿಂದ ಜಯಶ್ರೀ ಜಗನಾಥ ಪಾಟೀಲ, ಮಾದೇವಿ ಪರಮಾನಂದ ಮೈಲೇಶ್ವರ ಸೇರಿದಂತೆ ಒಟ್ಟು ನಾಲ್ಕು ಸದಸ್ಯರು ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ಪರಿಶಿಷ್ಟ ಪಂಗಡ ಮೀಸಲು ಸ್ಥಾನಕ್ಕೆ ಯಾರು ನಾಮಪತ್ರ ಸಲ್ಲಿಸಿಲ್ಲ ಎನ್ನಲಾಗಿದೆ.
ಇನ್ನೂ ಉಳಿದ ಸಾಮಾನ್ಯ 5 ಸದಸ್ಯರ ಸ್ಥಾನಕ್ಕೆ ಮಲ್ಲೇಶಿ ಬಸಪ್ಪ ಕಡಕೋಳ, ಮುತ್ತಪ್ಪ ಸಿದ್ರಾಮಪ್ಪ ಉಕ್ಕಲಿ, ಮುರಗೇಶ ಮಲ್ಲಪ್ಪ ಸಜ್ಜನ, ವೀರಣ್ಣ ಚಂದ್ರಾಮಪ್ಪ ಪಟ್ಟಣಶೆಟ್ಟಿ, ಸಂಗನಗೌಡ ಕಲ್ಲನಗೌಡ ಚಿಕ್ಕೊಂಡ, ಸಂಗನಬಸಪ್ಪ ಚನ್ನಪ್ಪ ನಾಯ್ಕೊಡಿ, ಸಂತೋಷ ಬಸಪ್ಪ ಹಾರಿವಾಳ ಏಳು ಜನ ನಾಮಪತ್ರ ಸಲ್ಲಿಸಿದ್ದಾರೆ. ಹಿಂದುಳಿದ ವರ್ಗ ಅ ಮೀಸಲು ಒಂದು ಸ್ಥಾನಕ್ಕೆ ಶಿವಪ್ಪ ಈಶ್ವರಪ್ಪ ವಾಡೇದ, ಶ್ರೀಶೈಲ ಸಿದ್ದಪ್ಪ ಪರಮಗೊಂಡ, ನಾಮಪತ್ರ ಸಲ್ಲಿಸಿದ್ದಾರೆ. ಸಾಲಗಾರರಲ್ಲದ (ಬಿನ್ನ ಸಾಲಗಾರ) ಒಂದು ಸ್ಥಾನಕ್ಕೆ ಈರಣ್ಣ ಭೀಮಪ್ಪ ವಂದಾಲ ಹಾಗೂ ನಂದೀಶ ಬಸನಗೌಡ ಪಾಟೀಲ ಇಬ್ಬರು ನಾಮಪತ್ರ ಸಲ್ಲಿಸಿದ್ದಾರೆ. ಈ ಒಟ್ಟು 7 ಸ್ಥಾನಗಳಿಗೆ 11 ಜನ ಸದಸ್ಯರು ನಾಮಪತ್ರ ಸಲ್ಲಿಸಿದ್ದಾರೆ. ಡಿ.8 ರಂದು 7 ಸ್ಥಾನಗಳಿಗೆ ಚುನಾವಣೆ ನಡೆಯಲಿದೆ. ಮತದಾನ ಸ್ಥಳೀಯ ಬಸವ ತತತ್ವ ಪ್ರಾಥಮಿಕ ಶಾಲೆಯಲ್ಲಿ ನಡೆಯಲಿದೆ. ಅದೇ ದಿನ ಫಲಿತಾಂಶ ಹೊರಬೀಳಲಿದೆ ಆದರೆ ಅದೃಷ್ಟ ಲಕ್ಷ್ಮೀ ಯಾರ ಕೈ ಹಿಡಿಯುತ್ತಾಳೆ ಎನ್ನುವುದನ್ನ ಕಾದು ನೋಡಬೇಕಾಗಿದೆ.
ಬಾರಿ ಪ್ರಚಾರ: ವಿವಿಧೋದ್ದೇಶ ಪ್ರಾಥಮಿಕ ಗ್ರಾಮೀಣ ಕೃಷಿ ಸಹಕಾರಿ ಸಂಘದ ಮುಂದಿನ ಐದು ವರ್ಷದ ಆಡಳಿತ ಮಂಡಳಿಯ ಸದಸ್ಯರ ಚುನಾವಣೆ ಹಿನ್ನಲೆಯಲ್ಲಿ ಪಟ್ಟಣದಲ್ಲಿ ಅಟೋಗಳಲ್ಲಿ ಧ್ವನಿವರ್ದಕದ ಮೂಲಕ ಪ್ರಚಾರ ನಡೆಸುವ ಜೊತೆಗೆ ಮತದಾರರ ಮನೆಗಳಿಗೆ ತೆರಳಿ ಅಭ್ಯರ್ಥಿಗಳು ಮತ ಯಾಚಿಸುತ್ತಿದ್ದಾರೆ. ವಾಟ್ಸ್ ಗ್ರೂಫಿನಲ್ಲಿಯೂ ಪ್ರಚಾರ ಮಾಡಲಾಗುತ್ತಿದೆ. ಮತದಾರ ಪ್ರಭು ಯಾರಿಗೆ ಜೈ ಎನ್ನುತ್ತಾನೆ ಎನ್ನುವದನ್ನು ಕಾದು ನೋಡಬೇಕಷ್ಟೇ.

