ಉದಯರಶ್ಮಿ ದಿನಪತ್ರಿಕೆ
ಬಸವನಬಾಗೇವಾಡಿ: ಶೋಷಣೆಗೊಳಗಾದ ಡಾ.ಬಿ.ಆರ್.ಅಂಬೇಡ್ಕರ್ ಅವರು ಜಗತ್ತಿನ ನಾನಾ ಸಂವಿಧಾನಗಳ ಅಧ್ಯಯನ, ವಿವಿಧ ಗ್ರಂಥಗಳ ಅಧ್ಯಯನ ಮಾಡುವ ಮೂಲಕ ವೈವಿಧ್ಯತೆಯಲ್ಲಿ ಏಕತೆ ಹೊಂದಿರುವ ಭಾರತ ದೇಶಕ್ಕೆ ಎಲ್ಲರಿಗೂ ಅನ್ವಯವಾಗುವ ವಿಶಿಷ್ಠ ಸಂವಿಧಾನವನ್ನು ನೀಡುವ ಮೂಲಕ ಸದಾ ಸ್ಮರಣೀಯರಾಗಿದ್ದಾರೆ ಎಂದು ತಹಸೀಲ್ದಾರ ವೈ.ಎಸ್.ಸೋಮನಕಟ್ಟಿ ಹೇಳಿದರು.
ಪಟ್ಟಣದ ಡಾ.ಬಿ.ಆರ್.ಅಂಬೇಡ್ಕರ ವೃತ್ತದಲ್ಲಿ ತಾಲೂಕಾಡಳಿತದಿಂದ ಶುಕ್ರವಾರ ಹಮ್ಮಿಕೊಂಡಿದ್ದ ಸಂವಿಧಾನ ಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರ್ ಅವರ ೬೮ ನೇ ಮಹಾಪರಿನಿರ್ವಾಣ ದಿನಾಚರಣೆ ಕಾರ್ಯಕ್ರಮದಲ್ಲಿ ಡಾ.ಬಿ.ಆರ್.ಅಂಬೇಡ್ಕರ ಪ್ರತಿಮೆಗೆ ಮಾಲಾರ್ಪಣೆ ಮಾಡಿದ ನಂತರ ಮಾತನಾಡಿದ ಅವರು, ದೇಶದಲ್ಲಿ ಭಾಷೆ,ಜಾತಿ,ಪಂಥ,ಮತ, ಲಿಂಗ ವೈವಿಧ್ಯತೆಯನ್ನು ಕಾಣುತ್ತೇವೆ. ಎಲ್ಲರಿಗೂ ಅನ್ವಯವಾಗುವ, ಯಾರಿಗೂ ನೋವು-ಬಾಧೆಯಾಗದಂತಹ ರೀತಿಯ ಸಂವಿಧಾನವನ್ನು ದೇಶಕ್ಕೆ ನೀಡಿದ್ದಾರೆ. ಡಾ.ಅಂಬೇಡ್ಕರ್ ಅವರು ಸಂವಿಧಾನದ ಮೂಲಕ ಹಾಗೂ ಅವರ ಸಂದೇಶಗಳ ಮೂಲಕ ಇನ್ನೂ ಜೀವಂತವಾಗಿದ್ದಾರೆ. ಡಾ.ಅಂಬೇಡ್ಕರ ಅವರು ತಮ್ಮ ಜೀವಿತಾವಧಿಯ ಕೊನೆ ದಿನಗಳಲ್ಲಿ ಬೌದ್ಧ ಮತವನ್ನು ಸ್ವೀಕರಿಸಿದ್ದರು. ಈ ಹಿನ್ನೆಲೆಯಲ್ಲಿ ಅವರ ಪುಣ್ಯ ತಿಥಿಯನ್ನು ಮಹಾಪರಿನಿರ್ವಾಣ ದಿನಾಚರಣೆಯೆಂದು ಎಲ್ಲೆಡೆ ಆಚರಿಸಲಾಗುತ್ತಿದೆ ಎಂದರು.
ದೇಶದ ಸಂವಿಧಾನದಲ್ಲಿ ಎಲ್ಲರೂ ಸಮಾನರು ಎಂಬ ಸಂದೇಶವಿದೆ. ಯಾವದೇ ಬೇಧ-ಭಾವವಿಲ್ಲದೇ ನಾವೆಲ್ಲರೂ ದೇಶದ ಸಂವಿಧಾನದಡಿಯಲ್ಲಿ ಜೀವನ ಮಾಡುತ್ತಿದ್ದೇವೆ. ಮನುಷ್ಯರಿಗಿಂತ ಹೆಚ್ಚು ಒಳ್ಳೆಯ ಪುಸ್ತಕಗಳನ್ನು ಪ್ರೀತಿಸುತ್ತೇನೆ ಎಂದು ಡಾ.ಅಂಬೇಡ್ಕರ್ ಸದಾ ಹೇಳುತ್ತಿದ್ದಾರೆ. ಅವರು ನೀಡಿರುವ ಸಂದೇಶಗಳನ್ನು ಅರಿತುಕೊಂಡು ದೇಶದ ಪ್ರಗತಿಗೆ ನಾವೆಲ್ಲರೂ ಶ್ರಮಿಸೋಣವೆಂದರು.
ತಾಪಂ ಇಓ ಪ್ರಕಾಶ ದೇಸಾಯಿ, ಡಿವೈಎಸ್ಪಿ ಬಲ್ಲಪ್ಪ ನಂದಗಾವಿ, ಪುರಸಭೆ ಸದಸ್ಯೆ ಜಗದೇವಿ ಗುಂಡಳ್ಳಿ, ಡಿಎಸ್ಎಸ್ ಮುಖಂಡರಾದ ಪರಶುರಾಮ ದಿಂಡವಾರ, ಅಶೋಕ ಚಲವಾದಿ, ಗುರುರಾಜ ಗೂಡಿಮನಿ, ಅರವಿಂದ ಸಾಲವಾಡಗಿ, ಖಾಜಂಬರ ನದಾಫ ಮಾತನಾಡಿದರು. ಡಿಎಸ್ಎಸ್ ಮುಖಂಡ ಮಹಾಂತೇಶ ಸಾಸಾಬಾಳ ಬೌದ್ಧಮಂತ್ರ ಪಠಿಸಿದರು. ಮೊಂಬತ್ತಿ ಹಚ್ಚಿ ಡಾ.ಬಿ.ಆರ್.ಅಂಬೇಡ್ಕರ್ ಅವರಿಗೆ ನಮನಗಳನ್ನು ಸಲ್ಲಿಸಲಾಯಿತು.
ಈ ಸಂದರ್ಭದಲ್ಲಿ ಸಮಾಜ ಕಲ್ಯಾಣ ಇಲಾಖೆಯ ಸಹಾಯಕ ನಿರ್ದೇಶಕಿ ಮಂಜು ಹಿರೇಮನಿ, ಬಿಇಓ ವಸಂತ ರಾಠೋಡ, ಕೃಷಿ ಇಲಾಖೆಯ ಸಹಾಯಕ ಕೃಷಿ ನಿರ್ದೇಶಕ ಎಂ.ಎಚ್.ಯರಝರಿ, ಲೋಕೋಪಯೋಗಿ ಇಲಾಖೆಯ ಎಇಇ ಜಿ.ವ್ಹಿ.ಕಿರಸೂರ, ಸಿಡಿಪಿಓ ಶಿಲ್ಪಾ ಹಿರೇಮಠ, ಹಿಂದುಳಿದ ವರ್ಗಗಳ ಇಲಾಖೆಯ ಕಲ್ಯಾಣಾಧಿಕಾರಿ ಎಸ್.ಬಿ.ನಿಂಬಾಳ, ವ್ಯವಸ್ಥಾಪಕ ಸಿ.ಜಿ.ಬಿರಾದಾರ,ಪಶು ಇಲಾಖೆಯ ಪಂಚಾಕ್ಷರಿ ಸಂಖ, ಪಿಐ ಗುರುಶಾಂತ ದಾಶ್ಯಾಳ, ಪುರಸಭೆ ಮುಖ್ಯಾಧಿಕಾರಿ ಅಪ್ರೋಜ್ಅಹ್ಮದ ಪಟೇಲ, ಪುರಸಭೆ ವ್ಯವಸ್ಥಾಪಕ ಸುರೇಶ ಬಾಗೇವಾಡಿ, ಪುರಸಭೆ ಆರೋಗ್ಯ ನಿರೀಕ್ಷಕ ವಿಜಯಕುಮಾರ ವಂದಾಲ, ರಾಜು ರಾಠೋಡ, ತಹಸೀಲ್ದಾರ ಕಚೇರಿ ಸಿಬ್ಬಂದಿ ಮಂಜುನಾಥ ಹಳ್ಳೂರ, ಮುಖಂಡರಾದ ತಮ್ಮಣ್ಣ ಕಾನಾಗಡ್ಡಿ, ಮಹಾಂತೇಶ ಚಕ್ರವರ್ತಿ, ರಾಜು ದಿಂಡವಾರ, ನಜೀರ ಗಣಿ, ಶ್ರೀಶೈಲ ಬ್ಯಾಕೋಡ ಇತರರು ಇದ್ದರು.
ವಿರೇಶ ಗೂಡ್ಲಮನಿ ನಿರೂಪಿಸಿದರು.

