ಉದಯರಶ್ಮಿ ದಿನಪತ್ರಿಕೆ
ದೇವರಹಿಪ್ಪರಗಿ: ವಿದ್ಯಾರ್ಥಿಗಳು ತಮ್ಮ ಸಮಗ್ರ ಜೀವನದಲ್ಲಿ ಶಿಸ್ತು ಅಳವಡಿಸಿಕೊಂಡಾಗ ಮಾತ್ರ ಅವರಿಂದ ಸಾಧನೆ ಮೂಡಿಬರಲು ಸಾಧ್ಯ ಎಂದು ಮುಖ್ಯಶಿಕ್ಷಕ ಎ.ವ್ಹಿ.ವಡ್ಡೋಡಗಿ ಹೇಳಿದರು.
ಪಟ್ಟಣದ ಡಿಬಿಇ ಪ್ರೌಢಶಾಲೆಯಲ್ಲಿ ಗುರುವಾರ ಜರುಗಿದ ವಾರ್ಷಿಕ ಸ್ನೇಹ ಸಮ್ಮೇಳನದಲ್ಲಿ ಕ್ರೀಡೆಗಳಲ್ಲಿ ವಿಜೇತರಾದ ವಿದ್ಯಾರ್ಥಿಗಳಿಗೆ ಪಾರಿತೋಷಕ ಹಾಗೂ ಪ್ರಮಾಣಪತ್ರ ವಿತರಿಸಿ ಮಾತನಾಡಿದರು.
ಮಕ್ಕಳಿಗೆ ಬಾಲ್ಯದಿಂದಲೇ ಶಿಸ್ತು, ಸಂಯಮ, ಸದ್ವೀಚಾರ, ಸನ್ನಡತೆಗಳನ್ನು ಪರಿಚಯಿಸಿ ಅವರು ಜೀವನದಲ್ಲಿ ಅಳವಡಿಸಿಕೊಳ್ಳಲು ಶಿಕ್ಷಕರು ಹಾಗೂ ಪಾಲಕರು ಮಾರ್ಗದರ್ಶನ ಮಾಡಬೇಕು. ಆಗ ಮಾತ್ರ ಅವರಿಂದ ಶಿಕ್ಷಣದಲ್ಲಿ ಸಾಧನೆ ಸಾಧ್ಯ ಎಂದರು.
ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್ ಅಧ್ಯಕ್ಷ ಎಸ್.ಎನ್.ಬಸವರೆಡ್ಡಿ ಮಾತನಾಡಿ, ಇಂದು ವಿದ್ಯಾರ್ಥಿಗಳಲ್ಲಿ ಸ್ಪರ್ಧಾಮನೋಭಾವ ಅಗತ್ಯವಾಗಿದೆ ಎಂದರು.
ಯುವಧುರೀಣ ಶಂಕರಗೌಡ ಪಾಟೀಲ ಮಾತನಾಡಿ, ವಿದ್ಯಾರ್ಥಿ ಜೀವನ ಹಾಗೂ ಸಮಯ ಅತ್ಯಂತ ಅಮೂಲ್ಯ, ತಾವು ಉತ್ತಮ ವಿಚಾರಗಳನ್ನು ಮೈಗೂಡಿಸಿಕೊಳ್ಳಬೇಕು ಎಂದು ವಿದ್ಯಾರ್ಥಿಗಳಿಗೆ ಕಿವಿಮಾತು ಹೇಳಿದರು.
ವಿದ್ಯಾರ್ಥಿಗಳಾದ ಪ್ರಜ್ವಲ್ ಕುರಿ, ಕಾವೇರಿ ಗೊಲ್ಲರ, ಸೃಷ್ಟಿ ಹಯ್ಯಾಳ, ಅಶ್ವಿನಿ ಗೊಲ್ಲರ, ರೇಖಾ ದೇವೂರ, ರೇಣುಕಾ ಮಸಬಿನಾಳ, ಸುಶ್ಮೀತಾ ಅವಟಿ ಶೈಕ್ಷಣಿಕ ಚಟುವಟಿಕೆಗಳ ಕುರಿತು ಅನಿಸಿಕೆ ವ್ಯಕ್ತಪಡಿಸಿದರು. ನಂತರ ಜಮಖಂಡಿಯಲ್ಲಿ ಜರುಗಿದ ಅಂತರ ಪ್ರೌಢಶಾಲೆಗಳ ಕ್ರೀಡಾಕೂಟದಲ್ಲಿ ವಿಜೇತರಾದ ವಿದ್ಯಾರ್ಥಿಗಳಿಗೆ ಪಾರಿತೋಷಕ ಹಾಗೂ ಪ್ರಮಾಣಪತ್ರ ವಿತರಿಸಲಾಯಿತು.
ಪಟ್ಟಣ ಪಂಚಾಯಿತಿ ಸದಸ್ಯ ಸಿಂಧೂರ ಡಾಲೇರ, ಮುಖ್ಯಶಿಕ್ಷಕರಾದ ರಾಘವೇಂದ್ರ ಎಂ. ಎಸ್ (ದೇವೂರ), ಪಿ.ಡಿ.ರಾಠೋಡ(ಸಾತಿಹಾಳ), ನಾಮ ನಿರ್ದೇಶಿತ ಸದಸ್ಯ ಹುಸೇನ್ ಕೊಕಟನೂರ, ನಮ್ಮ ಕರ್ನಾಟಕ ಸೇನೆ ಸಂಘಟನೆಯ ಅಧ್ಯಕ್ಷ ಹಸನ್ ನದಾಫ್, ಸಿಬ್ಬಂದಿ ಪ್ರಕಾಶ ಚಿಕ್ಕಲಕಿ, ಅವಿನಾಶ ರಂಜಣಗಿ, ಪಿ.ಡಿ.ರಾಠೋಡ, ಸಿ.ಕೆ.ಚವ್ಹಾಣ, ಕೆ.ಎಮ್.ಪೂಜಾರಿ, ಎಸ್.ಸಿ.ದಾಶ್ಯಾಳ, ಶ್ರೀಶೈಲ ಸಜ್ಜನ ಸಹಿತ ವಿಧ್ಯಾರ್ಥಿಗಳು, ಪಾಲಕರು ಇದ್ದರು.

