ವಿಜಯಪುರದಲ್ಲಿ ಪವಾಡ ಪುರುಷ ಕೋಳಕೂರ ಸಿದ್ಧಬಸವೇಶ್ವರ ೫೯೭ನೇ ಜಯಂತೋತ್ಸವ
ಉದಯರಶ್ಮಿ ದಿನಪತ್ರಿಕೆ
ವಿಜಯಪುರ: ಪ್ರತಿ ವರ್ಷ ಸಿದ್ಧಬಸವೇಶ್ವರ ಜಯಂತೋತ್ಸವ ಹಮ್ಮಿಕೊಂಡು ಬಡಾವಣೆಯ ಜನತೆಗೆ ಜ್ಞಾನ ದಾಸೋಹದೊಂದಿಗೆ ಅನ್ನದಾಸೋಹಗೈಯುತ್ತಿರುವ ಸಿ.ಎಂ.ಮಾಲಿಪಾಟೀಲರ ಭಕ್ತಿಸೇವೆ ಶ್ಲಾಘನೀಯ ಎಂದು ಮನಗೂಳಿ ಹಿರೇಮಠದ ಅಭಿನವ ಸಂಗನಬಸವ ಶಿವಾಚಾರ್ಯ ಸ್ವಾಮೀಜಿ ಹೇಳಿದರು.
ನಗರದ ರಾಜಕುಮಾರ ಬಡಾವಣೆಯಲ್ಲಿ ಉದ್ಯಮಿ ಸಿ.ಎಂ.ಮಾಲಿಪಾಟೀಲರು ಏರ್ಪಡಿಸಿದ ಪವಾಡ ಪುರುಷ ಕೋಳಕೂರ ಸಿದ್ಧಬಸವೇಶ್ವರ ೫೯೭ನೇ ಜಯಂತೋತ್ಸವ ಕಾರ್ಯಕ್ರಮದ ಸಾನಿಧ್ಯ ವಹಿಸಿ ಅವರು ಮಾತನಾಡಿದರು.
ಮನೆಯಲ್ಲಿ ಪಾಲಕರು ಸದಾಚಾರ ರೂಡಿಸಿಕೊಳ್ಳಬೇಕು. ಏಕೆಂದರೆ ಮಕ್ಕಳು ಪಾಲಕರನ್ನೇ ಅನುಸರಿಸುವುದರಿಂದ ನಮ್ಮ ನಡೆ-ನುಡಿ ಶುದ್ಧವಾಗಿರಬೇಕು. ಮಕ್ಕಳಿಗೆ ಶಿಕ್ಷಣದೊಂದಿಗೆ ಸಂಸ್ಕಾರವನ್ನೂ ನೀಡಬೇಕು. ನಮ್ಮ ದೇಶದ ಸಂಸ್ಕೃತಿ ಶ್ರೇಷ್ಠವಾಗಿದೆ. ಅದನ್ನು ಉಳಿಸಿಕೊಂಡು ಬೆಳೆಸುವ ಹೊಣೆ ನಮ್ಮೆಲ್ಲರದು ಎಂದು ಶ್ರೀಗಳು ನುಡಿದರು.
ಹೊನವಾಡ ದ ಬಾಬುರಾವ ಮಹಾರಾಜರು ಪವಾಡ ಪುರುಷ ಕೋಳಕೂರ ಸಿದ್ಧಬಸವೇಶ್ವರರ ಕುರಿತು ವಿವರಿಸಿದರು.
ಮಾಜಿ ಶಾಸಕ ರಾಜು ಆಲಗೂರ, ಎಸ್.ಜಿ.ಲಕ್ಕುಂಡಿಮಠ, ಹರೀಶಗೌಡ ಪಾಟೀಲ, ಜಿ.ಬಿ.ಜಿದ್ದಿಮನಿ, ನಾಡಗೌಡ, ಹೊಸಮನಿ, ಗುರುಬಸಯ್ಯ ಹಿರೇಮಠ ವೇದಿಕೆ ಮೇಲಿದ್ದರು.
ಅಂಬಾದಾಸ ಜೋಶಿ, ಮಾಳವಿಕ ಜೋಶಿ ಸಂಗೀತ ಸೇವೆಗೈದರು.
ಈರಣ್ಣ ಪಟ್ಟಣಶೆಟ್ಟಿ, ಶಿವರುದ್ರ ಬಾಗಲಕೋಟ, ಪ್ರಾಚಾರ್ಯ ಮಹಾದೇವ ರೆಬಿನಾಳ, ನಿವೃತ್ತ ಡಿವೈಎಸ್ಪಿ ಚೌಕಿಮಠ ಸೇರಿದಂತೆ ಹಲವರನ್ನು ಸನ್ಮಾನಿಸಲಾಯಿತು.
ಇದೇ ಸಂದರ್ಭದಲ್ಲಿ ಸಿ.ಎಂ.ಮಾಲಿಪಾಟೀಲ ದಂಪತಿಯನ್ನು ಶ್ರೀಗಳು ಸೇರಿದಂತೆ ಗಣ್ಯರು ಸನ್ಮಾನಿಸಿ ಗೌರವಿಸಿದರು.
ಮಹಾದೇವ ರೆಬಿನಾಳ ನಿರೂಪಿಸಿ, ವಂದಿಸಿದರು.
ಲೇಖಕ, ವಾಗ್ಮಿ ಮಂಜುನಾಥ ಜುನಗೊಂಡ, ರಮೇಶ ಬಿರಾದಾರ, ಧರೆಪ್ಪ ಸಿಧ್ನಾಥ ಸೇರಿದಂತೆ ಅನೇಕರಿದ್ದರು.

“೧೫ ನೆಯ ಶತಮಾನದಲ್ಲಿ ತಮ್ಮ ಶರೀರ ದಂಡಿಸಿ ಪವಾಡಗಳನ್ನು ಮೆರೆದ ಕೋಳಕೂರು ಸಿದ್ಧಬಸವೇಶ್ವರ ಆಶೀರ್ವಾದ ಸಿಗಲೆಂದು ಸಗರ ನಾಡಿನ ಈ ಪವಾಡ ಪುರುಷರ ಚರಿತ್ರೆಯನ್ನು ಬಸವ ನಾಡಿನಲ್ಲಿ ಪಸರಿಸುತ್ತಿರುವುದು ಸ್ತುತ್ಯಾರ್ಹ ಕಾರ್ಯವಾಗಿದೆ.
– ಅಭಿನವ ಸಂಗನಬಸವ ಶಿವಾಚಾರ್ಯರು*
ಮನಗೂಳಿ ಹಿರೇಮಠ

“ಈ ಜಯಂತೋತ್ಸವ ಕಾರ್ಯದಲ್ಲಿ ನನ್ನ ಹೆಚ್ಚುಗಾರಿಕೆಯೇನಿಲ್ಲ. ನನ್ನ ಆರಾಧ್ಯ ದೈವ ಸಿದ್ಧಬಸವೇಶ್ವರ ಶ್ರೀಗಳು ದಯಪಾಲಿಸಿದ್ದನ್ನೇ ಅವರಿಗೆ ಭಕ್ತಿಯಿಂದ ಸಮರ್ಪಿಸುವ ಪಾತ್ರ ನಾನು. ಈ ಕಾರ್ಯದಲ್ಲಿ ಬಡಾವಣೆ ಜನತೆಯ ಸಹಕಾರ ಮರೆಯುವಂತಿಲ್ಲ.”
– ಸಿ.ಎಂ.ಮಾಲಿಪಾಟೀಲ
ಉದ್ಯಮಿ, ವಿಜಯಪುರ

