ಒಣಗಿ ನೆಲೆಕ್ಕುರುಳುತ್ತಿರವ ಭತ್ತ | ಅಕಾಲಿಕ ಮಳೆಯ ಭಯ | ಲಭ್ಯವಾಗದ ಭತ್ತ ಕಟಾವು ಯಂತ್ರಗಳು | ಸಂಕಷ್ಟದಲ್ಲಿ ರೈತರು
ಉದಯರಶ್ಮಿ ದಿನಪತ್ರಿಕೆ
ವರದಿ: ಇಲ್ಯಾಸ್ ಪಟೇಲ್. ಬಳಗಾನೂರ
ಯಾದಗಿರಿ: ಭತ್ತ ಕಟಾವಿಗೆ ಯಂತ್ರ ಸಿಗದೆ ಗಿರಿನಾಡು ಯಾದಗಿರಿ ಜಿಲ್ಲಾದ್ಯಂತ ಅನೇಕ ಗ್ರಾಮಾಂತರ ಪ್ರದೇಶಗಳಲ್ಲಿ ರೈತರು ಸಂಕಷ್ಟ ಅನುಭವಿಸುತ್ತಿರುವುದು ಎದ್ದು ಕಾಣುತ್ತಿದೆ.
ರೈತರು ಬೆಳೆದ ಭತ್ತ ಗದ್ದೆಯಲ್ಲಿಯೇ ಒಣಗಿ ನೆಲೆಕ್ಕುರುಳುತ್ತಿವೆ. ಅಕಾಲಿಕ ಮಳೆಯಿಂದ ಬೆಳೆದ ಭತ್ತದ ಬೆಳೆ ನೀರಿನಲ್ಲಿಯೇ ಕೊಳೆತು ಹೋಗುತ್ತದೆ ಎಂಬ ಭಯ ಕೃಷಿಕರನ್ನು ಕಾಡುತ್ತಿದೆ. ಅಕಾಲಿಕ ಮಳೆ ಭತ್ತ ಕಟಾವು ವಿಳಂಬಕ್ಕೆ ಕಾರಣವಾದರೆ, ಇನ್ನೊಂದು ಕಡೆ ಹಲವಾರು ಪ್ರದೇಶಗಳಲ್ಲಿ ಭತ್ತ ಕಟಾವು ಆರಂಭಗೊಂಡಿದ್ದರಿಂದ ಸಾಕಷ್ಟು ಪ್ರಮಾಣದಲ್ಲಿ ಹೊರರಾಜ್ಯ ಹಾಗೂ ಹೊರ ಜಿಲ್ಲೆಗಳಿಂದ ಆಗಮಿಸಿದ ಭತ್ತ ಕಟಾವು ಯಂತ್ರಗಳು ಜಿಲ್ಲೆಯಿಂದ ಹೊರ ಹೋಗಿರುವುದು ಭತ್ತ ಕಟಾವಿಗೆ ದೊಡ್ಡ ಮಟ್ಟದ ಹೊಡೆತ ನೀಡಿದೆ.
ಈಗ ಭತ್ತದ ಬೆಳೆಯ ಕಟಾವು ಆರಂಭವಾಗಿದ್ದು, ಮೊದಲಿನಂತೆ ಕಟಾವು ಮಾಡಲು ಕೂಲಿ ಕಾರ್ಮಿಕರ ಸಮಸ್ಯೆ ಉದ್ಭವಿಸಿದ್ದು, ರೈತರು ಆತಂಕ ಪಡುವಂತಾಗಿದೆ. ಇದರ ಜತೆಗೆ ಚಂಡಮಾರುತದ ಪರಿಣಾಮ ಮೋಡ ಮುಸುಕಿದ ವಾತಾವರಣ ನಿರ್ಮಾಣವಾಗಿದ್ದು ಯಾವಾಗ ಮಳೆ ಸುರಿದು ಬಿಡುತ್ತದೆಯೋ ಎಂಬ ಭಯದಲ್ಲಿ ದಿನ ಕಳೆಯುವಂತಹ ಪರಿಸ್ಥಿತಿ ನಿರ್ಮಾಣವಾಗಿದೆ. ಬಿಸಿಲು ಕಾಣಿಸಿಕೊಂಡರೆ ಭತ್ತದ ಕಟಾವಿಗೆ ಅನುಕೂಲವಾಗುತ್ತದೆ ಎಂಬ ಕಾರಣಕ್ಕಾಗಿ ರೈತರು ಬೆಳಗೆದ್ದರೆ ದೇವರನ್ನು ಪ್ರಾರ್ಥಿಸುವಂತಾಗಿದೆ.
ಸಾಮಾನ್ಯವಾಗಿ ಈ ಸಮಯದಲ್ಲಿ ಬಿಸಿಲು ಇರುತ್ತಿತ್ತು. ಹೀಗಾಗಿ ಭತ್ತದ ಬೆಳೆ ಗದ್ದೆಯಲ್ಲಿ ಚೆನ್ನಾಗಿ ಒಣಗಿರುತ್ತಿತ್ತು. ಇದರಿಂದ ಕಟಾವು ಮಾಡಲು ಅನುಕೂಲವಾಗುತ್ತಿತ್ತು. ಆದರೆ ಈ ಬಾರಿ ಇನ್ನೂ ಕೂಡ ಮಳೆ ಸುರಿಯುತ್ತಿರುವುದು ಸಂಕಷ್ಟವನ್ನು ತಂದೊಡ್ಡಿದೆ. ಇದರಿಂದ ಭತ್ತದ ಕಟಾವಿಗೆ ತೊಂದರೆಯಾಗುತ್ತಿದೆ. ಸಣ್ಣ ರೈತರು ಕೂಲಿ ಆಳುಗಳ ಮೂಲಕ ಕೊಯ್ಲು ಮಾಡುತ್ತಿದ್ದು, ಅವರಿಗೆ ಸಮಸ್ಯೆಯಾಗುತ್ತಿದೆ. ಕೂಲಿ ಹೆಚ್ಚು ನೀಡಿದರೂ ಕೂಲಿ ಆಳುಗಳು ಸಿಗದ ಪರಿಸ್ಥಿತಿ ನಿರ್ಮಾಣವಾಗಿದೆ.
ಎಕರೆಗಟ್ಟಲೆ ಭತ್ತವನ್ನು ಬೆಳೆದ ರೈತರು ಇತ್ತೀಚೆಗೆ ಕೂಲಿಯಾಳುಗಳ ಸಮಸ್ಯೆಯಿಂದಾಗಿ ಕಟಾವಿಗೆ ಯಂತ್ರಗಳ ಮೊರೆ ಹೋಗಿದ್ದಾರೆ. ಹೀಗಾಗಿ ಕಟಾವಿಗೆ ಯಂತ್ರಗಳಿಗೆ ಬೇಡಿಕೆ ಹೆಚ್ಚಿರುವ ಕಾರಣದಿಂದಾಗಿ ಕಟಾವು ಮಾಡುವ ದರವನ್ನು ಕೂಡ ಅವರ ಮನಸ್ಸಿಗೆ ಬಂದಂತೆ ವಿಧಿಸುತ್ತಿದ್ದು, ಒಂದು ರೀತಿಯಲ್ಲಿ ಸುಲಿಗೆ ಮಾಡುತ್ತಿದ್ದಾರೆ ಎಂಬ ಆರೋಪವೂ ಕೇಳಿ ಬರುತ್ತಿದೆ. ಕಟಾವಿನ ಸಮಯದಲ್ಲಿ ಪ್ರತಿವರ್ಷವೂ ರೈತರು ಇಂತಹ ಸಮಸ್ಯೆಗಳನ್ನು ಎದುರಿಸಲೇ ಬೇಕಾಗುತ್ತದೆ.
ನಿಗದಿ ಪಡಿಸಿದ ಬಾಡಿಗೆ ದರ ಎಷ್ಟು?
ಕಟಾವು ಯಂತ್ರ ಹೊಂದಿರುವ ಮಾಲೀಕರು ಪ್ರತಿ ವರ್ಷವೂ ರೈತರಿಂದ ಹೆಚ್ಚಿನ ದರ ಪಡೆಯುತ್ತಿದ್ದಾರೆ ಎಂಬ ಆರೋಪ ಬಂದಿರುವ ಹಿನ್ನಲೆಯಲ್ಲಿ ಜಿಲ್ಲಾಧಿಕಾರಿ ಡಾ.ಸುಶೀಲಾ. ಬಿ ಅವರ ಅಧ್ಯಕ್ಷತೆಯಲ್ಲಿ ಸುಲಿಗೆ ತಪ್ಪಿಸುವ ಸಲುವಾಗಿ ಮತ್ತು ಕಟಾವಿಗೆ ದರ ನಿಗದಿ ಮಾಡುವ ಕುರಿತಂತೆ ತೀರ್ಮಾನ ತೆಗೆದುಕೊಳ್ಳಲಾಗಿದೆ. ಪ್ರತಿ ಗಂಟೆಗೆ 2,300/ ರೂ ಬಾಡಿಗೆ ಪಡಿಯಬೇಕು ಎಂದು ಸೂಚಿಸಿ ಆದೇಶ ಹೊರಡಿಸುವ ಮೂಲಕ ದರವನ್ನು ನಿಗದಿಗೊಳಿಸಲಾಗಿದೆ. ಇದಕ್ಕೆ ಮೀರಿ ರೈತರಿಂದ ಹೆಚ್ಚಿನ ಹಣ ವಸೂಲಿ ಮಾಡಿದರೆ ಕಟಾವು ಯಂತ್ರದ ಮಾಲೀಕರ ವಿರುದ್ಧ ವಿಪತ್ತು ನಿರ್ವಹಣೆ ಕಾಯ್ದೆ-2005ರ ಪ್ರಕಾರ ಕಾನೂನು ಕ್ರಮ ಕೈಗೊಳ್ಳಲಾಗುವ ಎಚ್ಚರಿಕೆ ನೀಡಲಾಗಿದೆ. ಹೀಗಾಗಿ ರೈತರು ಹೆಚ್ಚಿನ ಬಾಡಿಗೆ ಹಣದ ಬೇಡಿಕೆಯಿಟ್ಟರೆ ದೂರು ನೀಡಬಹುದಾಗಿದೆ.
ಉದಯ ರಶ್ಮಿ ಹೈಲೆಟ್ಸ್
- ಸುಮಾರು 1,02,744 ಹೆಕ್ಟರ್ ಪ್ರದೇಶಗಳಲ್ಲಿ ಭತ್ತ ಬೆಳೆಯಲಾಗಿದೆ.
- ಭತ್ತ ಕಟಾವು ಯಂತ್ರ ಸಿಗದೇ ಪರದಾಡುತ್ತಿರುವ ರೈತರು.
- ಮಾರುಕಟ್ಟೆಯಲ್ಲಿ ಉತ್ತಮ ಬೆಲೆ ಇಲ್ಲಯಿಲ್ಲದೆ ಸಂಕಷ್ಟ.
- ರೈತರು ಬೆಳಗೆದ್ದರೆ ದೇವರನ್ನು ಪ್ರಾರ್ಥಿಸುವಂತಾಗಿದೆ.

“ಈಗಾಗಲೇ ಭತ್ತ ಬೆಳೆ ಕೈಗೆ ಬಂದಾದರಿ, ಆದ್ರ ಭತ್ತ ಕಟಾವು ಮಾಡಲು ಯಂತ್ರಗಳು ಸಿಗುತ್ತಿಲ್ಲರೀ, ಇಂತಹ ಸಮಯದಾಗ ಮಳೆ ಗಾಳಿದರೇ ಗೊತ್ತೇ ಆಗಲ್ಲರೀ, ಯಾವಾಗ ಬರ್ತಾದ ಏನೂ ಗೊತ್ತೇ ಆಗುವುದಿಲ್ಲರೀ, ಕೈಗೆ ಬಂದ ತುತ್ತು ಬಾಯಿ ಬರ್ತಾದ ಇಲ್ಲ ಅಂದಾಗ ಆಗ್ಯಾದ್ ರೀ, ನಮ್ಮ ಪರಿಸ್ಥಿತಿ ನಮ್ಗೆ ಗೊತ್ತರೀ, ಯಾರ್ ಮುಂದ್ ನಮ್ಮ ಗೋಳು ಹೇಳಬೇಕ ಅಂದಾಂಗ್ ಆಗ್ಯಾದ್ರೀ. ಆ ದೇವರೇ ಕಾಪಾಡಬೇಕ್ರಿ.”
_ ಮಹಿಬೂಬಪಟೇಲ್ ಕಾಚೂರ
ರೈತರು

“ಜಿಲ್ಲಾಧಿಕಾರಿಗಳು ಈಗಾಗಲೇ ದರ ನಿಗದಿಮಾಡಿದ್ದು, ಆದರೂ ದಲ್ಲಾಳಿಗಳು ಹಾಗೂ ಯಂತ್ರದ ಮಾಲೀಕರು ಕೆಲವು ಭಾಗಗಳಲ್ಲಿ ಸುಮಾರು 4,000ರೂ ಗಂಟೆಗೆ ಹೆಚ್ಚಿನ ಸುಲುಗಿ ಮಾಡುತ್ತಿದ್ದಾರೆ. ರೈತರಿಂದ ಕೇಳಿ ಬರುತ್ತಿದೆ. ಅಂತವರ ವಿರುದ್ದ ಕಠಿಣ ಕಾನೂನು ಕ್ರಮಕೈಗೊಳ್ಳಲು ಮುಂದಾಗಬೇಕು, ಹಾಗೂ ರೈತ ಮುಖಂಡರ ಜೊತೆ ಸಭೆಯನ್ನು ನಡಿಸಿ ಜಾಗೃತಿ ಮೂಡಿಸಬೇಕು.
_ ಹಮೀದ್, ಹುಣಚ್ಯಾಳ
ರೈತ ಸಂಘ ಹಸಿರು ಸೇನೆ ಅಧ್ಯಕ್ಷರು, ಕೆಂಭಾವಿ ವಲಯ

