ಉದಯರಶ್ಮಿ ದಿನಪತ್ರಿಕೆ
ಮುದ್ದೇಬಿಹಾಳ: ಕಳಪೆ ಗುಣಮಟ್ಟದ ಬೀಜ ವಿತರಿಸಿ ಕ್ರಿಮಿನಲ್ ಪ್ರಕರಣ ಎದುರಿಸುತ್ತಿರುವ ಶ್ರೀ ಅಮರೇಶ್ವರ ಸೀಡ್ಸ್ ಏಜೆನ್ಸಿಯ ಬೀಜಗಳನ್ನು ರಾಜ್ಯಾದ್ಯಂತ ಕೃಷಿ ಇಲಾಖೆ ಪೂರೈಕೆ ಮಾಡಲು ನಿಷೇದಿಸಬೇಕು ಮತ್ತು ಅಮರೇಶ್ವರ ಸೀಡ್ಸ್ ಏಜೆನ್ಸಿಯವರ ಮೇಲೆ ನ್ಯಾಯಾಲಯದಲ್ಲಿ ಕ್ರಿಮಿನಲ್ ಪ್ರಕರಣ ದಾಖಲಾಗಿರುವದರಿಂದ ಈ ಏಜೆನ್ಸಿಯನ್ನು ಕಪ್ಪು ಪಟ್ಟಿಗೆ ಸೇರಿಸಬೇಕು ಎಂದು ಆಗ್ರಹಿಸಿ ಯುವಜನ ಸೇನೆಯ ರಾಜ್ಯಾಧ್ಯಕ್ಷ ಶಿವಾನಂದ ವಾಲಿ ಕೃಷಿ ಆಯುಕ್ತರಿಗೆ ಪತ್ರ ಬರೆದಿದ್ದಾರೆ.
ಪತ್ರದ ಸ್ವೀಕೃತಿ ಪ್ರತಿ ಪತ್ರಿಕೆಗೆ ನೀಡಿದ್ದು, ಇದೇ ಎಜೆನ್ಸಿಯು ೨೦೨೨ ರಲ್ಲಿ ಶೇಂಗಾ ತಳಿಯ ಬೀಜಗಳನ್ನು ಕಕ್ಕೇರಾ ರೈತ ಸಂಪರ್ಕ ಕೇಂದ್ರಕ್ಕೆ ಪೂರೈಸಿದ್ದು ಆ ಬೀಜಗಳನ್ನು ಪ್ರಯೋಗಾಲಯಕ್ಕೆ ಕಳುಹಿಸಲಾಗಿ ಕಡಿಮೆ ಗುಣಮಟ್ಟದ್ದಾಗಿದೆ ಎಂದು ಸಾಬೀತುಪಡಿಸಲಾಗಿದೆ. ಹೀಗಿದ್ದರೂ ತಾಲೂಕು ಸೇರಿದಂತೆ ರಾಜ್ಯದ ಹಲವು ಕಡೆ ಈ ಏಜೆನ್ಸಿಯವರಿಗೆ ಬೀಜ ವಿತರಿಸಲು ಅನುಮತಿ ಕೊಟ್ಟಿರುವದು ಭ್ರಷ್ಟಾಚಾರಕ್ಕೆ ಹಿಡಿದ ಕೈಗನ್ನಡಿಯಾಗಿದೆ. ಈ ಸಾಲಿನ ಮುಂಗಾರು ಹಂಗಾಮಿನಲ್ಲಿ ಇದೇ ಏಜೆನ್ಸಿಯವರು ವಿತರಿಸಿದ ತೊಗರಿ ಬಿತ್ತನೆ ಬೀಜಗಳು ಹೂ ಉದುರಿ ಕಾಳು ಕಟ್ಟದೇ ಇರುವದು ಹಲವು ಅನುಮಾನಗಳಿಗೆ ಎಡೆ ಮಾಡಿ ಕೊಟ್ಟಿದೆ. ಸದರಿ ಏಜೆನ್ಸಿಯವರು ವಿತರಿಸಲು ಶೇಖರಿಸಿದ ಬೀಜಗಳನ್ನು ಕೂಡಲೇ ವಶಕ್ಕೆ ಪಡೆದು ರಾಜ್ಯದಾದ್ಯಂತ ಈ ಏಜೆನ್ಸಿಯನ್ನು ನಿಷೇಧಿಸಬೇಕು. ನ್ಯಾಯಾಲಯದಲ್ಲಿನ ಪ್ರಕರಣ ಇತ್ಯರ್ಥವಾಗುವವರೆಗೂ ಈ ಏಜೆನ್ಸಿಯನ್ನು ಕಪ್ಪುಪಟ್ಟಿಗೆ ಸೇರಿಸಬೇಕು. ಸದರಿ ಬೀಜ ಹಂಚಿಕೆ ಅಕ್ರಮದಲ್ಲಿ ತೊಡಗಿದ ಅಧಿಕಾರಿಗಳ ವಿರುದ್ಧ ಕಾನೂನು ಕ್ರಮ ಜರುಗಿಸಬೇಕು. ಈ ಏಜೆನ್ಸಿ ಗೆ ಬೀಜ ವಿತರಿಸಲು ಅವಕಾಶ ನೀಡಿದ ಅಧಿಕಾರಿಗಳ ವಿರುದ್ಧ ಉನ್ನತಮಟ್ಟದ ತನಿಖೆ ನಡೆಸಬೇಕು ಎಂದು ಪತ್ರದಲ್ಲಿ ತಿಳಿಸಿಸಲಾಗಿದೆ.
