ಉದಯರಶ್ಮಿ ದಿನಪತ್ರಿಕೆ
ದೇವರಹಿಪ್ಪರಗಿ: ಯಾಳವಾರ ಗ್ರಾಮದಲ್ಲಿ ನಡೆದ ವಿವಿಧ ಕಟ್ಟಡಗಳ ಉದ್ಘಾಟನೆ ಸಮಾರಂಭದಲ್ಲಿ ಶಾಸಕ ರಾಜುಗೌಡ ಪಾಟೀಲ ಕುದುರಿಸಾಲವಾಡಗಿ ಇವರು ಕರ್ನಾಟಕ ರಾಜ್ಯದಲ್ಲಿ ಆಡಳಿತ ನಡೆಸುತ್ತಿರುವ ಕಾಂಗ್ರೆಸ್ ಪಕ್ಷದ ಸರ್ಕಾರ ಗ್ಯಾರಂಟಿ ಯೋಜನೆಗಳಿಗೆ ಹಣ ಹೊಂದಿಸಲು ಪರದಾಡುತ್ತಿದೆ ಎಂದು ಸರ್ಕಾರದ ವಿರುದ್ಧ ಮಾಡಿರುವ ಆಪಾದನೆ ಅವರಿಗೆ ಶೋಭೆ ತರುವಂತದ್ಧಲ್ಲ ಎಂದು ಜಿಲ್ಲಾ ಕಾಂಗ್ರೆಸ್ ಸಮಿತಿಯ ಉಪಾಧ್ಯಕ್ಷ ಸಂಗನಗೌಡ ಹರನಾಳ ಹೇಳಿದ್ದಾರೆ.
ಪಟ್ಟಣದಲ್ಲಿ ಗುರುವಾರ ಈ ಕುರಿತು ಪತ್ರಿಕಾ ಪ್ರಕಟಣೆ ನೀಡಿ, ಯಾಳವಾರ ಗ್ರಾಮದಲ್ಲಿ ಅಧ್ಯಕ್ಷತೆ ವಹಿಸಿ ವಿವಿಧ ಕಟ್ಟಡ ಉದ್ಘಾಟನೆ ನೆರವೇರಿಸಿದ ನಂತರ ರಾಜ್ಯ ಸರ್ಕಾರದ ಕುರಿತು ಹೇಳಿದ ಹೇಳಿಕೆ ಸಂಪೂರ್ಣ ಸತ್ಯಕ್ಕೆ ದೂರವಾಗಿದ್ದು ಕರ್ನಾಟಕದ ಎಲ್ಲಾ ಬಡ ಜನತೆಗೆ ಗ್ಯಾರಂಟಿ ಯೋಜನೆಗಳ ಅಡಿಯಲ್ಲಿ ಪ್ರತಿಯೊಬ್ಬ ಫಲಾನುಭವಿಗಳಿಗೆ ಮನೆ ಮನೆಗೆ ಮುಟ್ಟಿಸುವ ಕೆಲಸ ನಿರಂತರವಾಗಿ ಕಾಂಗ್ರೆಸ್ ಪಕ್ಷ ಸರ್ಕಾರ ನಡೆಸುತ್ತಿದ್ದು, ಬಡವರ ನಿರ್ಗತಿಕರ ಕಣ್ಣೀರು ಒರಿಸುವ ಕೆಲಸ ಸರ್ಕಾರ ಮಾಡುತ್ತಿದೆ.
ವಿಜಯಪುರ ಜಿಲ್ಲೆಯ ಎಲ್ಲ ವಿಧಾನಸಭಾ ಕ್ಷೇತ್ರಗಳು ಸೇರಿದಂತೆ ರಾಜ್ಯಾದ್ಯಂತ ಅಭಿವೃದ್ಧಿ ಕಾರ್ಯಗಳು ಭರದಿಂದ ಸಾಗುತ್ತಿವೆ, ಮಾನ್ಯ ಶಾಸಕರು ತಾವು ಮುದ್ದೇಬಿಹಾಳ, ಬಬಲೇಶ್ವರ, ಇಂಡಿ,ಸಿಂದಗಿ, ಬಸವನ ಬಾಗೇವಾಡಿ, ಅಲ್ಲದೆ ವಿಜಯಪುರ ನಗರಕ್ಕೂ ಸಹಿತ ಬಂದು ನೋಡಿಕೊಂಡು ಹೋಗಬಹುದು, ವಿಜಯಪುರ ನಗರಕ್ಕೆ ಬೇರೆ ಪಕ್ಷದ ಶಾಸಕರು ಇದ್ದರು ಸಹಿತ ಅಭಿವೃದ್ಧಿ ಕಾರ್ಯಗಳಿಗೆ ಕೊರತೆಯಿಲ್ಲ. ಕುಣಿಯಲು ಬಾರದಿದ್ದರೆ ನೆಲ ಡೊಂಕು ಎಂಬುವ ಹಾಗೆ ತಮಗೆ ಸರಿಯಾಗಿ ಆಡಳಿತ ನಡೆಸಲು ಬರದೇ ಇದ್ದರೆ ಸರಕಾರದ ಮೇಲೆ ಇಲ್ಲ ಸಲ್ಲದ ಆರೋಪ ಮಾಡುವುದು ಸರಿಯಲ್ಲ .
ಚುನಾವಣೆಯಲ್ಲಿ ಕೋಮುವಾದಿ ಪಕ್ಷ ಬಿಜೆಪಿಯನ್ನು ವಿರೋಧಿಸಿ ಚುನಾವಣೆ ನಂತರ ನೀವು ಮತ್ತೆ ಕೋಮುವಾದಿ ಪಕ್ಷದ ಜೊತೆ ಕೈಜೋಡಿಸಿ ನಿಮ್ಮ ಕೋಮುವಾದಿ ಪ್ರದರ್ಶನ ಮಾಡಿದ್ದು, ದೇವರಹಿಪ್ಪರಗಿ ಕ್ಷೇತ್ರದ ಜನತೆ ಕಣ್ಣು ತುಂಬಿಕೊಂಡಿದ್ದಾರೆ. ನಿಮ್ಮ ಮೈತ್ರಿ ಪಕ್ಷ ಬಿಜೆಪಿ ಹಿಂದೆ ಮಾಡಿಟ್ಟಿರುವ ಸಾಲವನ್ನು ತೀರಿಸಲು ನಮ್ಮ ಕಾಂಗ್ರೆಸ್ ಸರ್ಕಾರ ತೀರಿಸುತ್ತಿದ್ದು, ಈ ನಾಡಿನ ಬಡವರ ಕಲ್ಯಾಣಕ್ಕಾಗಿ ಗ್ಯಾರಂಟಿ ಯೋಜನೆಗಳ ಮುಖಾಂತರ ಅಭಿವೃದ್ಧಿ ಮಾಡಲು ನಮ್ಮ ಕಾಂಗ್ರೆಸ್ ಸರ್ಕಾರ ಗಟ್ಟಿಯಾಗಿ ನಿಂತಿದೆ
ಶಾಸಕರೇ, ಯಾಳವಾರ ಕಾರ್ಯಕ್ರಮದಲ್ಲಿ ಕರ್ನಾಟಕ ಸಾಬೂನು ಮತ್ತು ಮಾರ್ಜಕಗಳ ನಿಗಮದ ಅಧ್ಯಕ್ಷ ಸಿ.ಎಸ್.ನಾಡಗೌಡ ಮೂಲಕ ಕ್ಷೇತ್ರಕ್ಕೆ ಅಗತ್ಯವಾದ ಅನುದಾನ ಪಡೆಯುವ ಅವಕಾಶಗಳಿದ್ದು, ತಾವು ಈ ಕುರಿತು ಕ್ರಮವಹಿಸಬಹುದಾಗಿತ್ತು. ಆದರೆ ನೀವು ಅನಗತ್ಯವಾಗಿ ಗಾಳಿಯಲ್ಲಿ ಗುಂಡು ಹೊಡೆದ ಹಾಗೆ ಮಾತನಾಡಿ ಇಲ್ಲ ಸಲ್ಲದ ಆರೋಪ ಮಾಡಿದ್ದಿರಿ. ನಿಮ್ಮಿಂದ ಕ್ಷೇತ್ರದ ಅಭಿವೃದ್ಧಿ ಸಾಧ್ಯವಿಲ್ಲ ಎಂದಾದರೆ ರಾಜೀನಾಮೆ ನೀಡಿ ಮನೆಯಲ್ಲಿ ಕೂರುವುದು ಉತ್ತಮ. ಆದರೆ ಯಾವುದೇ ಕಾರಣಕ್ಕೂ ಸರ್ಕಾರ ಹಾಗೂ ಗ್ಯಾರಂಟಿ ಯೋಜನೆಗಳ ಕುರಿತು ಅಪಪ್ರಚಾರ ಸಲ್ಲದು. ಕ್ಷೇತ್ರದ ಅಭಿವೃದ್ಧಿ ಕುರಿತು ಚಿಂತನೆ ಮಾಡಿ ಒಳ್ಳೆಯದು ಅದು ಬಿಟ್ಟು ಸಾರ್ವಜನಿಕ ಕಾರ್ಯಕ್ರಮಗಳ ವೇದಿಕೆಯಲ್ಲಿ ಟೀಕೆ ಮಾಡುವುದು ನಿಮ್ಮ ಸ್ಥಾನಕ್ಕೆ ಗೌರವ ತರುವಂತದ್ಧಲ್ಲ ಎಂದಿದ್ದಾರೆ.

