ಉದಯರಶ್ಮಿ ದಿನಪತ್ರಿಕೆ
ಚಡಚಣ: ವಿಕಲಚೇತನರಲ್ಲಿರುವ ವಿಶೇಷ ಆಸಕ್ತಿ ಕ್ಷೇತ್ರವನ್ನು ಗುರುತಿಸಿ ಶಿಕ್ಷಣ ಇಲಾಖೆಯಿಂದ ಪ್ರೋತ್ಸಾಹ ಹಾಗೂ ಸಹಕಾರ ನೀಡಲಾಗುವುದು. ಅವರಿಗೆ ಅನುಕಂಪಕ್ಕಿಂತ ಅವಕಾಶಗಳು ಮುಖ್ಯ ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಸುಜಾತಾ ಹುನ್ನೂರ ಹೇಳಿದರು.
ಅವರು ತಾಲೂಕಿನ ಕ್ಷೇತ್ರ ಶಿಕ್ಷಣಾಧಿಕಾರಿಗಳ ಹಾಗೂ ಕ್ಷೇತ್ರ ಸಮನ್ವಯಾಧಿಕಾರಿಗಳ ಕಾರ್ಯಾಲಯ ಹಾಗೂ ಶ್ರೀ ಸಂಗಮೇಶ್ವರ ಶಿಕ್ಷಣ ಸಂಸ್ಥೆಯ ಸಂಯುಕ್ತ ಆಶ್ರಯದಲ್ಲಿ ಸಂಗಮೇಶ್ವರ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಹಮ್ಮಿಕೊಂಡಿರುವ ವಿಶ್ವ ವಿಕಲ ಚೇತನರ ದಿನಾಚರಣೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ವಿಕಲಚೇತನರು ತಮ್ಮಲ್ಲಿರುವ ಕೀಳರಿಮೆ ತೊರೆದು, ಎಲ್ಲರಂತೆ ನಾವೂ ಎಂಬುದನ್ನು ಅರ್ಥ ಮಾಡಿಕೊಳ್ಳಬೇಕು. ಜಿಲ್ಲೆಯ ವಿಕಲಚೇತನರು ಸರ್ಕಾರದ ಸೌಲಭ್ಯ ಸಮರ್ಪಕವಾಗಿ ಸದ್ಬಳಕೆ ಮಾಡಿಕೊಳ್ಳಬೇಕೆಂದರು.
ತಾಲೂಕಿನ ಪ್ರಾಥಮಿಕ ಶಾಲಾ ಶಿಕ್ಷಕರ ಸೊಸೈಟಿಯ ಅಧ್ಯಕ್ಷ ಎಸ್ ಎಸ್ ಪಾಟೀಲ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ವಿಕಲಚೇತನರು ಸಮಾಜದಲ್ಲಿ ಎಲ್ಲರ ಪ್ರೀತಿ ವಿಶ್ವಾಸಕ್ಕೆ ಪಾತ್ರರಾಗಿ ಆತ್ಮವಿಶ್ವಾಸದಿಂದ ಜೀವನ ನಡೆಸುವಂತೆ ಅವಕಾಶ ಕಲ್ಪಿಸುವುದು ಸಮಾಜದ ಜವಾಬ್ದಾರಿ. ಈ ನಿಟ್ಟಿನಲ್ಲಿ ಪ್ರತಿಯೊಬ್ಬರೂ ಕಾರ್ಯಪ್ರವೃತ್ತರಾಗಬೇಕು ಎಂದು ಹೇಳಿದರು.
ಸೋಮನಿಂಗ ಬೋರಗಿ ಸ್ವಾಗತಿಸಿದರು. ಭೀಮಾಶಂಕರ ವಾಘಮೋರೆ ನಿರೂಪಿಸಿದರು. ಅಮೋಗಿ ಮೆಟಗಾರ ವಂದಿಸಿದರು.
ಸಂಗಮೇಶ್ವರ ಪ್ರೌಢ ಶಾಲೆ ಮುಖ್ಯ ಗುರು ಎಚ್ ಆರ್ ಬಗಲಿ, ಕಟಗೇರಿ ಸರ್, ಪ್ರಾಥಮಿಕ ಶಾಲಾ ಮುಖ್ಯ ಗುರುಮಾತೆ ಕಲ್ಪನಾ ಪಾಂಡ್ರೆ,ತಾಲೂಕಾ ವಿಕಲ ಚೇತನ ನೌಕರ ಸಂಘದ ಅಧ್ಯಕ್ಷ ಮಹಾಂತೇಶ ಉಮರಾಣಿ, ಶಿಕ್ಷಕ ರಾಜಶೇಖರ ಬಂಡಿ,ಶಿಕ್ಷಣ ಸಂಯೋಜಕ ಎನ್ ಎಸ್ ಸಿನಖೇಡ,ವಿಕಲ ಚೇತನ ಮಕ್ಕಳು ಹಾಗೂ ಪಾಲಕರು ಉಪಸ್ಥಿತರಿದ್ದರು.
ಕಾರ್ಯಕ್ರಮದ ನಂತರ ಮಕ್ಕಳ ಹಾಗೂ ಪಾಲಕರ ಕ್ರೀಡಾ ಚಟುವಟಿಕೆಗಳು ಎಸ್ ಎಸ್ ಮುಚ್ಚಂಡಿ, ಅಮೋಗಿ ಮೆಟಗಾರ ನಡೆಸಿಕೊಟ್ಟರು.

