ನಾಗಠಾಣದಲ್ಲಿ ನಡೆದ ಚಿಂತನಗೋಷ್ಠಿ ಉದ್ಘಾಟಿಸಿದ ಇಸ್ರೋ ವಿಜ್ಞಾನಿ ಸಂಜೀವ ಗೌರ ಅಭಿಮತ
ಉದಯರಶ್ಮಿ ದಿನಪತ್ರಿಕೆ
ವಿಜಯಪುರ: ಭಾರತದ ಬಾಹ್ಯಾಕಾಶ ತಂತ್ರಜ್ಞಾನವು ನಿರಂತರ ಪ್ರಯೋಗ, ಹೊಸ ಅನ್ವೇಷಣೆ ಮತ್ತು ಆವಿಷ್ಕಾರಗಳ ಮೂಲಕ ಮನುಕುಲದ ಸಮಸ್ಯೆಗಳ ಪರಿಹಾರ ಮತ್ತು ಮಾನವಕಲ್ಯಾಣದ ಗುರಿಯನ್ನು ಹೊಂದಿದೆ ಎಂದು ಹಾಸನ ಎಂಸಿಎಫ್ ಇಸ್ರೋ ಕೇಂದ್ರದ ಹಿರಿಯ ವಿಜ್ಞಾನಿ ಸಂಜೀವ ಚಂದ್ರಶೇಖರ ಗೌರ ಹೇಳಿದರು.
ಗುರುವಾರದಂದು ತಾಲೂಕಿನ ನಾಗಠಾಣ ಗ್ರಾಮದ ಶ್ರೀ ಮಲ್ಲಿಕಾರ್ಜುನ ಹಿರಿಯ ಪ್ರಾಥಮಿಕ ಮತ್ತು ಪ್ರೌಢ ಶಾಲೆಯಲ್ಲಿ ಹಮ್ಮಿಕೊಂಡ ‘ಬಾಹ್ಯಾಕಾಶದಲ್ಲಿ ಭಾರತದ ಹೆಜ್ಜೆಗಳು’ ಕುರಿತ ಚಿಂತನಗೋಷ್ಠಿಯನ್ನು ಉದ್ಘಾಟಿಸಿ ಮಾತನಾಡಿದರು.
ಸಂಪರ್ಕ, ಆರೋಗ್ಯ, ಶಿಕ್ಷಣ, ಕೃಷಿ, ಪರಿಸರ, ಹವಾಮಾನ ಬದಲಾವಣೆ ಅಧ್ಯಯನ ಹೀಗೆ ಹತ್ತು ಹಲವು ಕ್ಷೇತ್ರಗಳಿಗೆ ಇಸ್ರೋ ಸೇವೆ ಒದಗಿಸುತ್ತಿದೆ. ಶಿಸ್ತುಬದ್ದ ಅಧ್ಯಯನದೊಂದಿಗೆ ಜ್ಞಾನ ಗಳಿಸಿಕೊಂಡು ಮಕ್ಕಳು ಬದುಕಿನಲ್ಲಿ ಯಶಸ್ಸು ಪಡೆಯಲು ಸಾಧ್ಯ. ಸೌಲಭ್ಯಗಳ ಕೊರತೆ ಇದ್ದಾಗಲೂ ಸತತ ಪ್ರಯತ್ನ, ಪರಿಶ್ರಮ, ನಿರ್ಧಿಷ್ಟ ಗುರಿಯೊಂದಿಗೆ ಮುನ್ನಡೆದಾಗ ಗ್ರಾಮೀಣ ಭಾಗದ ಮಕ್ಕಳು ಕೂಡ ವಿಜ್ಞಾನಿಯಾಗಿ, ದೇಶಸೇವೆ ಸಲ್ಲಿಸಲು ಸಾಧ್ಯ.
ಕಡಿಮೆ ವೆಚ್ಚ, ಉತ್ತಮ ಗುಣಮಟ್ಟಕ್ಕಾಗಿ ಇಸ್ರೋ ಹೆಸರುವಾಸಿಯಾಗಿದ್ದು, ಅದು ನಾವೀನ್ಯತೆಯ ಸಂಸ್ಕೃತಿಯನ್ನು ಸಹ ಬೆಳೆಸಿಕೊಂಡಿದೆ ಎಂದು ಹೇಳಿದರು.
ಶಿಕ್ಷಕ ಸಂತೋಷ ಬಂಡೆ ಮಾತನಾಡಿ, ಬಾಹ್ಯಾಕಾಶದಲ್ಲಿ ಭಾರತದ ಸಾಧನೆ, ವಿಜ್ಞಾನಿಗಳ ಪ್ರತಿಭೆ, ಕೌಶಲ್ಯದ ಬಗ್ಗೆ ಗ್ರಾಮೀಣ ಪ್ರದೇಶದ ಮಕ್ಕಳು ಅರ್ಥೈಸಿಕೊಂಡು, ಮುಂದೆ ವಿಜ್ಞಾನಿಯಾಗಿ ದೇಶದ ಪ್ರಗತಿಗೆ ಕೈಜೋಡಿಸಬೇಕು. ಅವರ ನಿರಂತರ ಶ್ರಮ ಮತ್ತು ಪ್ರಯತ್ನ ದೇಶಕ್ಕೆ ಹೆಮ್ಮೆ ತರುವಂತದ್ದು ಎಂದು ಅಭಿಪ್ರಾಯಪಟ್ಟರು.
ಸಂಸ್ಥೆಯ ಅಧ್ಯಕ್ಷ ಶಂಕರ ಹುಣಶ್ಶಾಳ ಅಧ್ಯಕ್ಷತೆ ವಹಿಸಿದ್ದರು. ಕೆಪಿಎಸ್ ಪ್ರೌಢಶಾಲೆಯ ಉಪಪ್ರಾಚಾರ್ಯ ಪ್ರಮೋದ ಮೆಂಚ, ಶಾಲಾ ಮುಖ್ಯ ಶಿಕ್ಷಕ ಸುರೇಶಗೌಡ ಬಿರಾದಾರ, ಕಾರ್ಯದರ್ಶಿ ಸುನಂದಾ ಹುಣಶ್ಶಾಳ, ಶಿಕ್ಷಕ ರಾದ ಎಂ ಎಸ್ ಪಾಪನಾಳಮಠ, ರಾಘು ಮೊಗಳ, ನವೀನ ಬಂಡೆನ್ನವರ, ಜಯಶ್ರೀ ಬಂಗಾರಿ, ಸಚಿನ ಅವಟಿ, ಮಧುಮತಿ ನಿಕ್ಕಂ, ಸರೋಜನಿ ಕಟ್ಟಿಮನಿ, ಆರ್ ಎಸ್ ಭಜಂತ್ರಿ, ಎಸ್ ಎಂ ಬಾಗಲಕೋಟ, ಎಂ ಎಂ ವಾಡೇದ, ಬಿ ಡಿ ನರಳಿ, ಎಂ ವ್ಹಿ ಭಜಂತ್ರಿ, ಕೆ ಡಿ ಹಿಟ್ನಳ್ಳಿ, ವೀರೇಶ ಹುಣಶ್ಶಾಳ ಸೇರಿದಂತೆ ಅನೇಕರು ಉಪಸ್ಥಿತರಿದ್ದರು. ಮಕ್ಕಳು ಇದೇ ಸಂದರ್ಭದಲ್ಲಿ ವಿಜ್ಞಾನಿಗಳ ಜೊತೆ ಸಂವಾದ ನಡೆಸಿದರು. ವಿಜ್ಞಾನಿ ಸಂಜೀವ ಗೌರ ಅವರನ್ನು ಸಂಸ್ಥೆಯ ವತಿಯಿಂದ ಸನ್ಮಾನಿಸಲಾಯಿತು. ಮಕ್ಕಳಾದ ಅನುಶ್ರೀ,
ಶ್ರೀನಿಧಿ ಬಂಡೆ ಅವರು ಭಾರತದ ಸಂವಿಧಾನ ಪೀಠಿಕೆ ವಾಚಿಸಿದರು.

