ಉದಯರಶ್ಮಿ ದಿನಪತ್ರಿಕೆ
ಬಸವನಬಾಗೇವಾಡಿ: ಸ್ಥಳೀಯ ಅಯ್ಯಪ್ಪ ಸ್ವಾಮಿ ಭಕ್ತರು ನಿಷ್ಠೆಯಿಂದ ತಮ್ಮ ಕೆಲಸದಲ್ಲಿ ತೊಡಗುವುದರೊಂದಿಗೆ ಧಾರ್ಮಿಕ. ಸಾಮಾಜಿಕ ಕಾರ್ಯದಲ್ಲಿ ತೊಡಗಿಕೊಳ್ಳುವ ಮೂಲಕ ಇತರರಿಗೆ ಪ್ರೇರಣೆಯಾಗಿದ್ದಾರೆ ಎಂದು ಸಹಕಾರ ಮಹಾಮಂಡಳ ನಿರ್ದೇಶಕ ಈರಣ್ಣ ಪಟ್ಟಣಶೆಟ್ಟಿ ಹೇಳಿದರು.
ಪಟ್ಟಣದ ಅಯ್ಯಪ್ಪ ಸ್ವಾಮಿ ದೇವಸ್ಥಾನದ ಆವರಣದಲ್ಲಿ ಸೋಮವಾರ ಸಂಜೆ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ಶಬರಿಮಲೈ ಅಯ್ಯಪ್ಪ ಸೇವಾ ಸಮಾಜಂ ತಾಲೂಕು ಘಟಕದ ಉದ್ಘಾಟಿಸಿ ಮಾತನಾಡಿದ ಅವರು, ಅಯ್ಯಪ್ಪ ಸ್ವಾಮಿ ಭಕ್ತರು ಸಂಘಟಿತರಾಗಿ ಸಂಘಟನೆ ಮೂಲಕ ವಿವಿಧ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಬೇಕು. ಮಕ್ಕಳಿಗೆ ಉನ್ನತ ಸಂಸ್ಕಾರದ ಮಹತ್ವ ತಿಳಿಸಿಕೊಡಬೇಕು ಎಂದರು.
ಸಾನಿಧ್ಯ ವಹಿಸಿದ್ದ ಅಯ್ಯಪ್ಪ ಸೇವಾ ಸಮಾಜಂ ರಾಜ್ಯ ಘಟಕದ ಸಂಘಟನಾ ಕಾರ್ಯದರ್ಶಿ ದತ್ತಾತ್ರೆಯ ಶಿಂತ್ರೆ ಮಾತನಾಡಿ, ಸೇವಾ ಸಮಾಜ ಸಂಘಟನೆ ಸದಸ್ಯರು ಇತರರಿಗೆ ಮಾದರಿಯಾಗುವಂತಹ ಕಾರ್ಯದಲ್ಲಿ ತೊಡಗಿಕೊಳ್ಳಬೇಕು. ಶಿಸ್ತು, ಸಮಯಪ್ರಜ್ಞೆ, ಸೇವೆಯ ಮಹತ್ವ ಅರಿತುಕೊಂಡು ಅದರಂತೆ ಕಾರ್ಯ ನಿರ್ವಹಿಸಬೇಕು ಎಂದರು.
ಸ್ಥಳೀಯ ವಿರಕ್ತಮಠದ ಸಿದ್ಧಲಿಂಗ ಸ್ವಾಮೀಜಿ ಮಾತನಾಡಿ, ಪಟ್ಟಣದಲ್ಲಿ ಸೇವಾ ಸಮಾಜಂ ಸಂಘಟನೆ ಉದ್ಘಾಟನೆಗೊಂಡಿದ್ದು ಸಂತಸ ತಂದಿದೆ. ಅಯ್ಯಪ್ಪ ಸ್ವಾಮಿ ಭಕ್ತರು ತಮ್ಮ ಭಕ್ತಿ ಪ್ರದರ್ಶನದೊಂದಿಗೆ ಸಮಾಜದ ಕಾಳಜಿ ವಹಿಸಿ ಸಮಾಜ ಸೇವೆ ಮಾಡಲು ಮುಂದಾಗಿರುವುದು ಶ್ಲಾಘನೀಯ ಎಂದರು.
ಅಧ್ಯಕ್ಷತೆ ವಹಿಸಿದ್ದ ಸಂಘಟನೆಯ ಗೌರವಾಧ್ಯಕ್ಷ ಡಾ. ರಮೇಶ ಗುರುಸ್ವಾಮಿ, ಜಿಲ್ಲಾ ಘಟಕದ ಅಧ್ಯಕ್ಷ ಶಿವಾನಂದ ಮಸಬಿನಾಳ, ತಾಲೂಕು ಘಟಕದ ಅಧ್ಯಕ್ಷ ಮಲ್ಲಿಕಾರ್ಜುನ ಪಟ್ಟಣಶೆಟ್ಟಿ, ಶರಣು ಬಸ್ತಾಳ ಮಾತನಾಡಿದರು.
ಮಹಾದೇವ ಗುರುಸ್ವಾಮಿ, ಕುಮಾರ ಬಾಗಲಕೋಟ, ವಿಠಲ ಮೋಸಲಗಿ, ಪರಶುರಾಮ ಬಾಗಲಕೋಟ, ಚಿದಾನಂದ ಗುರುಸ್ವಾಮಿ ಇದ್ದರು. ದತ್ತಾತ್ರೇಯ ಶಿಂತ್ರೆ ಅವರು ಸಾಸನ ಧ್ವಜವನ್ನು ಮಲ್ಲಿಕಾರ್ಜುನ ಪಟ್ಟಣಶೆಟ್ಟಿ ಅವರಿಗೆ ಹಸ್ತಾಂತರಿಸುವ ಮೂಲಕ ತಾಲೂಕು ಘಟಕದ ಅಧಿಕಾರ ನೀಡಿದರು.
ಇದೇ ಸಂದರ್ಭದಲ್ಲಿ ಎಲ್ಲ ಸದಸ್ಯರಿಗೆ ಗುರುತಿನ ಚೀಟಿ ವಿತರಿಸಲಾಯಿತು.

