ಉದಯರಶ್ಮಿ ದಿನಪತ್ರಿಕೆ
ವಿಜಯಪುರ: ಎಚ್‌ಐವಿ ಮುಕ್ತ ಜಿಲ್ಲೆಯನ್ನಾಗಿ ರೂಪಿಸಲು ಹಲವಾರು ಜಾಗೃತಿ ಕಾರ್ಯಕ್ರಮಗಳನ್ನು ಹಾಗೂ ವಿವಿಧ ಚಟುವಟಿಕೆಗಳನ್ನು ಹಮ್ಮಿಕೊಳ್ಳಬೇಕು ಎಂದು ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಅರವಿಂದ ಎಸ್ ಹಾಗರಗಿ ಅವರು ಹೇಳಿದರು.
ರಾಜ್ಯ ಏಡ್ಸ ಪ್ರಿವೆಷನ್ಸ್ ಸೊಸೈಟಿ ಬೆಂಗಳೂರು, ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಜಿಲ್ಲಾ ಏಡ್ಸ್ ನಿರೋಧಕ ಮತ್ತು ನಿಯಂತ್ರಣ ಘಟಕ ಹಾಗೂ ವಿವಿಧ ಸ್ವಯಂ ಸೇವಾ ಸಂಸ್ಥೆಗಳು, ರೆಡ್ ರಿಬ್ಬನ ಕ್ಲಬ್ ಇವರ ಸಹಯೋಗದಲ್ಲಿ ವಿಶ್ವ ಏಡ್ಸ್ ದಿನಾಚರಣೆ ಅಂಗವಾಗಿ ಮಂಗಳವಾರ ನಗರದ ಗಗನ ಮಹಲ ಆವರಣದಲ್ಲಿ ಹಮ್ಮಿಕೊಂಡ ವಿಶ್ವ ಏಡ್ಸ್ ದಿನ-೨೦೨೪ ಕಾರ್ಯಕ್ರಮಕ್ಕೆ ಚಾಲನೆ ಅವರು ಮಾತನಾಡಿದರು.
ಜಿಲ್ಲೆಯ ವಿವಿಧ ಕೇಂದ್ರಗಳಲ್ಲಿ ಆಪ್ತ ಸಮಾಲೋಚನೆಯ ಮೂಲಕ ಸೋಂಕಿತರಲ್ಲಿ ಆತ್ಮಸ್ಥೈರ್ಯವನ್ನು ತುಂಬಬೇಕು ಎಂದು ಹೇಳಿದರು.
ಜಿಲ್ಲಾಧಿಕಾರಿ ಟಿ.ಭೂಬಾಲನ್ ಅವರು ಮಾತನಾಡಿ, ವಿವಿಧ ಸಂಘ-ಸಂಸ್ಥೆಗಳ ಸಹಯೋಗದಲ್ಲಿ ಏಡ್ಸ್ ರೋಗವನ್ನು ತಡೆಗಟ್ಟುವಲ್ಲಿ ಜಾಗೃತಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದ್ದು, ಏಡ್ಸ್ ನಿಯಂತ್ರಣಕ್ಕೆ ಸರ್ಕಾರ ಜಾರಿಗೆ ತಂದಿರುವ ಯೋಜನೆಗಳ ಸಮರ್ಪಕ ಅನುಷ್ಠಾನಕ್ಕೆ ಕಟಿಬದ್ಧರಾಗಿ ಕಾರ್ಯನಿರ್ವಹಿಸಬೇಕು. ಕರಪತ್ರ, ಪೋಸ್ಟರ್, ಬ್ಯಾನರ್, ಗೋಡೆಬರಹದ ಮೂಲಕ ಏಡ್ಸ್ ರೋಗದ ಬಗ್ಗೆ ಅರಿವು ಮೂಡಿಸಬೇಕು ಎಂದು ಹೇಳಿದರು.
ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕಾಧಿಕಾರಿ ರಿಷಿ ಆನಂದ ಮಾತನಾಡಿ, ಏಡ್ಸ್ ಜಾಗೃತಿ ಹಾಗೂ ಏಡ್ಸ ರೋಗದ ನಿಯಂತ್ರಣ ಕಾರ್ಯಕ್ರಮಗಳನ್ನು ರೂಪಿಸಬೇಕು ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಜಿಲ್ಲಾ ಏಡ್ಸ್ ನಿಯಂತ್ರಣಾಧಿಕಾರಿ ಡಾ. ಮಲ್ಲನಗೌಡ. ಬಿ. ಬಿರಾದಾರ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿ ಡಾ.ಸಂಪತ್ ಗುಣಾರಿ, ಪೀಟರ್ ಅಲೆಕ್ಝಾಂಡರ್, ಡಾ. ಪ್ರಕಾಶ ರಾಠೋಡ, ಫಾದರ್ ಟಿಯೊಲ್ ಮಚಾದೊ, ಸುನಿಲ್ ಕಾಂಬಳೆ, ಡಿ.ಎಸ್.ಪಿ, ಗಂಗಯ್ಯ ಹಿರೇಮಠ, ಡಾ. ಎಲ್.ಹೆಚ್. ಬಿದರಿ, ಡಾ. ಜಾನ್‌ಕಟವಟೆ, ಸುರೇಶ ಹೊಸಮನಿ ಇತರರು ಉಪಸ್ಥಿತರಿದ್ದರು.
ಏಡ್ಸ್ ಜಾಗೃತಿ ಜಾಥಾ
ವಿಶ್ವ ಏಡ್ಸ್ ದಿನ-೨೦೨೪ರ ಅಂಗವಾಗಿ ಕೇಂದ್ರ ಬಸ್ ನಿಲ್ದಾಣದಿಂದ ಕೆ.ಸಿ ಮಾರ್ಕೆಟ್ ಮಾರ್ಗವಾಗಿ ಗಗನ ಮಹಲವರೆಗೆ ಜಾಗೃತಿ ಜಾಥಾ ನಡೆಯಿತು. ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಶಂಕರ ಮಾರಿಹಾಳ ಅವರು ಚಾಲನೆ ನೀಡಿದರು.
ವಿವಿಧ ಪದವಿ ಹಾಗೂ ನರ್ಸಿಂಗ್ ಕಾಲೇಜಿನ ವಿದ್ಯಾರ್ಥಿಗಳು ಜಾಥಾದಲ್ಲಿ ಪಾಲ್ಗೊಂಡಿದ್ದರು.