ಉದಯರಶ್ಮಿ ದಿನಪತ್ರಿಕೆ
ಇಂಡಿ: ಕಬ್ಬಿಣದ ಕಡಲೆ ಎನ್ನುವ ಗಣಿತ ವಿಷಯವನ್ನು ಅತ್ಯಂತ ಸುಲಭವಾಗಿ ಅರ್ಥೈಸಿಕೊಳ್ಳಬಹುದು ಎಂಬುದನ್ನು ತೋರಿಸಿದ ಭಾರತದ ಶ್ರೇಷ್ಠ ಗಣಿತಜ್ಞ ರಾಮಾನುಜನ್ ಎಂದು ಅಭಿಯಂತರ ಕಿರಣ್ ದೇಸಾಯಿ ಹೇಳಿದರು.
ಅವರು ಇತ್ತೀಚೆಗೆ ಪಟ್ಟಣದ ದೇಸಾಯಿ ಅಂತರಾಷ್ಟ್ರೀಯ ಶಾಲೆಯಲ್ಲಿ ಹಮ್ಮಿಕೊಂಡಿದ್ದ ರಾಷ್ಟ್ರೀಯ ಗಣಿತ ದಿವಸ ಹಾಗೂ ಗಣಿತ ವಸ್ತು ಪ್ರದರ್ಶನ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಮಾತನಾಡಿದರು.
ರಾಮಾನುಜನ್ ಅವರು ತಮಿಳುನಾಡಿನ ಈರೋಡ್ನಲ್ಲಿ ಡಿಸೆಂಬರ್ ೨೨, ೧೮೮೭ ರಲ್ಲಿ ಜನಿಸಿದರು. ಶ್ರೀನಿವಾಸ ರಾಮಾನುಜನ್ ರವರಿಗೆ ಗಣಿತ ವಿಷಯದೊಂದಿಗೆ ಇದ್ದ ಒಲವು, ಅಪಾರ ಜ್ಞಾನದಿಂದಾಗಿ ಅವರು ಗಣಿತ ಕ್ಷೇತ್ರಕ್ಕೆ ನೀಡಿದ ಕೊಡುಗೆ ಮತ್ತು ಸಾಧನೆಗಳನ್ನು ಗುರುತಿಸಲು ಪ್ರತಿ ವರ್ಷ ಡಿಸೆಂಬರ್ ೨೨ ರಂದು’ ರಾಷ್ಟ್ರೀಯ ಗಣಿತ ದಿನ’ವನ್ನು ಆಚರಣೆ ಮಾಡಲಾಗುತ್ತದೆ ಎಂದು ತಿಳಿಸಿದರು.
ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ಕೀರ್ತಿ ದೇಸಾಯಿ ಹಾಗೂ ಸೀಮಾ ದೇಸಾಯಿ ಅವರು ಗಣಿತ ವಸ್ತು ಪ್ರದರ್ಶನ ವೀಕ್ಷಿಸಿದರು.
ವಿದ್ಯಾರ್ಥಿಗಳಿಂದ ಒಂದರಿAದ ಹತ್ತರವರೆಗಿನ ಸಂಖ್ಯೆಗಳನ್ನು ನೃತ್ಯದ ಮೂಲಕ ನಿರ್ಮಿಸಿ ತೋರಿಸಲಾಯಿತು. ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳು ರಾಮಾನುಜನ್, ಶಕುಂತಲಾ ದೇವಿ, ಆರ್ಯಭಟ ಮುಂತಾದ ಗಣಿತಜ್ಞರ ವೇಷಭೂಷಣಗಳನ್ನು ಧರಿಸಿ, ಅವರಂತೆ ಏಕಪಾತ್ರಾಭಿನಯ ಮಾಡಿ ನಾಡಿಗೆ ಗಣಿತಜ್ಞರ ಕೊಡುಗೆ ಏನು ಎಂಬುದನ್ನು ಪ್ರಚುರಪಡಿಸಿದರು.
ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳು ಗಣಿತಕ್ಕೆ ಸಂಬಂಧಿಸಿದ ಅನೇಕ ಮಾದರಿಗಳನ್ನು ತಯಾರಿಸಿ, ಅವುಗಳ ಬಗ್ಗೆ ವಿವರಣೆ ನೀಡಿ, ಬಹುಮಾನಗಳನ್ನು ಪಡೆದರು.
ವಿದ್ಯಾರ್ಥಿಗಳು ತಯಾರಿಸಿದ ಮಾದರಿಗಳು ಪಾಲಕರಿಂದ ಹಾಗೂ ಅತಿಥಿಗಳಿಂದ ಪ್ರಶಂಸೆ ಗಳಿಸಲ್ಪಟ್ಟವು. ಕಾರ್ಯಕ್ರಮದಲ್ಲಿ ಶಾಲೆಯ ಸಂಸ್ಥಾಪಕ ಅಧ್ಯಕ್ಷ ಸಿದ್ರಾಮಪ್ಪ ದೇಸಾಯಿ, ಪ್ರಾಂಶುಪಾಲೆ ವಿದ್ಯುಲತಾ ಸುತಾರ, ಹಾಗೂ ಶಾಲೆಯ ಸಿಬ್ಬಂದಿಗಳು ಉಪಸ್ಥಿತರಿದ್ದರು.
ಕಾರ್ಯಕ್ರಮದ ನಿರೂಪಣೆಯನ್ನು ಗಣಿತ ವಿಭಾಗದ ಶ್ರೀಮತಿ ನಾಗವೇಣಿ, ಕನ್ನಡ ವಿಭಾಗದ ಶ್ರುತಿ ದಾಶ್ಯಾಳ ಅವರು ನೆರವೇರಿಸಿದರು.
ನಿತ್ಯಜೀವನದಲ್ಲಿ ಗಣಿತ ವಿಷಯದ ಬಳಕೆಯ ಕುರಿತು ಪ್ರವೀಣಕುಮಾರ್ ದೇಸಾಯಿ ಅವರು ಹಾಡಿದ ಹಾಡು ಎಲ್ಲರ ಗಮನ ಸೆಳೆಯಿತು.