’ಜಯ್ ನುಡಿ’ (ವ್ಯಕ್ತಿತ್ವ ವಿಕಸನ ಲೇಖನ ಮಾಲಿಕೆ)
ಲೇಖನ
– ಜಯಶ್ರೀ.ಜೆ. ಅಬ್ಬಿಗೇರಿ
ಇಂಗ್ಲೀಷ್ ಉಪನ್ಯಾಸಕರು
ಬೆಳಗಾವಿ, ಮೊ: ೯೪೪೯೨೩೪೧೪೨
ಉದಯರಶ್ಮಿ ದಿನಪತ್ರಿಕೆ
ಜೀವನವೆಂಬುದು ಬಗೆಹರಿಸುವ ಸಮಸ್ಯೆಯಲ್ಲ. ಅದು ವಾಸ್ತವದ ಅನುಭವ. ಪ್ರತಿಯೊಬ್ಬರೂ ಒಂದಲ್ಲ ಒಂದು ಹಂತದಲ್ಲಿ ವಾಸ್ತವವನ್ನು ನಿರ್ಲಕ್ಷಿಸಲು ಪ್ರಯತ್ನಿಸುತ್ತಾರೆ. ಕೆಲವೊಮ್ಮೆ ಅಸಮಾಧಾನ ಅಥವಾ ಅಹಿತಕರವಾದ ಸಂಗತಿಯನ್ನು ಒಪ್ಪಿಕೊಳ್ಳದಿರುವುದು ಸುಲಭ. ವಾಸ್ತವನ್ನು ಎದುರಿಸುವುದು ಕಷ್ಟ. ನಾವು ಎದುರಿಸಲು ಸಿದ್ಧರಿರದಿದ್ದರೂ ಅದನ್ನು ಎದುರಿಸುವುದು ನಮ್ಮ ಪ್ರಸ್ತುತ ಸಂದರ್ಭದಲ್ಲಿ ಅಗತ್ಯವಿದೆ. ಏಕೆಂದರೆ ನೆಮ್ಮದಿಯನ್ನು ಪಡೆಯಲು ಅದುವೇ ಅತ್ಯುತ್ತಮ ಮಾರ್ಗ. ಉಜ್ವಲ ಭವಿಷ್ಯವನ್ನು ಹೊಂದಲು ಕೆಲಸ ಮಾಡುವುದು ಕಷ್ಟವಲ್ಲ ಎನಿಸಬಹುದು. ಆದರೆ ಬದುಕಿನಲ್ಲಿ ಅತಿ ದೊಡ್ಡ ಸಾಲೆಂದರೆ ವಾಸ್ತವವನ್ನು ಅರಿಯುವುದು. ಪ್ರಸ್ತುತ ಪರಿಸ್ಥಿತಿಯನ್ನು ಹೇಗೆ ಸ್ವೀಕರಿಸುವುದು? ನಿಮ್ಮ ಭಾವನೆಗಳನ್ನು ಆರೋಗ್ಯಕರ ಮತ್ತು ಸಹಾನುಭೂತಿಯ ರೀತಿಯಲ್ಲಿ ನಿಭಾಯಿಸುವುದು ನಿಜಕ್ಕೂ ತುಸು ಕಠಿಣವೆನಿಸುತ್ತದೆ. ಸಂತೋಷಕರ ಜೀವನ ನಿರ್ಮಿಸಲು ವಾಸ್ತವತೆಯಲ್ಲಿ ಬದುಕುವುದು ಮುಖ್ಯವಾಗಿದೆ. ಐರಿಸ್ ಮುರ್ಡೊಕ್ ಹೇಳಿದಂತೆ ‘ನಾವು ಕಾಲ್ಪನಿಕ ಜಗತ್ತಿನಲ್ಲಿ ವಾಸಿಸುತ್ತಿದ್ದೇವೆ. ಭ್ರಮೆಯ ಜಗತ್ತಿನಲ್ಲಿ ಜೀವನದ ಸತ್ಯವನ್ನು ಕಂಡುಕೊಳ್ಳುವುದೇ ದೊಡ್ಡ ಕೆಲಸ..’ ‘ರಿಯಾಲಿಟಿ ಲೀವ್ಸ್ ಅ ಲಾಟ್ ಟು ದಿ ಇಮ್ಯಾಜಿನೇಷನ್’ ಎಂಬ ಜಾನ್ ಲೆನ್ನನ್ ಅವರ ಮಾತಿದೆ.
ವಾಸ್ತವ ಎಂದರೇನು?
ವಾಸ್ತವ ಎಂದರೆ ತೀರ ಸಾಮಾನ್ಯದ ನಿಜ ಸಂಗತಿ. ವಾಸ್ತವಕ್ಕೆ ಯಾವುದೇ ಬಣ್ಣವಿಲ್ಲ. ಅದು ಸತ್ಯವೆಂಬ ತಳಹದಿಯ ಮೇಲೆ ಇರುತ್ತದೆ. ಸತ್ಯವೆಂಬುದು ಕಹಿ ಎಂಬ ಭಾವ ತರಿಸುತ್ತದೆ. ಕಹಿಯಾದರೂ ಬಹು ಕಾಲದ ಜೀವನದ ದೇಹದ ಆರೋಗ್ಯಕ್ಕೆ ಒಳ್ಳೆಯದು. ವಾಸ್ತವ ಕಹಿ ಎನಿಸಿದರೂ ಸಿಹಿ ತರುವ ಫಲ ನೀಡುವುದೆಂದು ಅದರತ್ತ ವಾಲುವುದು ಸೂಕ್ತ. ಆಂದರೆ ವಾಸ್ತವ ಔಷಧಿಯಂತೆ ಕಹಿಯಾದರೂ ಶರೀರಕ್ಕೆ ಆರೋಗ್ಯದಾಯಕ.
ಭ್ರಮೆ
ನಾವು ಗಾಯಕ್ಕಿಂತ ಹೆಚ್ಚಾಗಿ ಭಯಪಡುತ್ತೇವೆ; ಮತ್ತು ನಾವು ವಾಸ್ತವಕ್ಕಿಂತ ಹೆಚ್ಚು ಭ್ರಮೆಯಿಂದ ಹೆಚ್ಚು ಬಳಲುತ್ತಿದ್ದೇವೆ ವಾಸ್ತವಿಕ ನೆಲೆಗಟ್ಟಿನ ಮೇಲೆ ಯೋಚಿಸದೇ ಇರುವುದು ಭ್ರಮೆ. ಬದುಕನ್ನು ಬಹುಪಾಲು ಜನರು ಭ್ರಮೆಯಲ್ಲಿ ಕಳೆದು ಬಿಡುತ್ತಾರೆ. ಬದುಕಿನ ನೋವು ಸಂಕಟಗಳಿಗೆ ಭಾವನಾತ್ಮಕವಾಗಿ ಬೆಸೆದುಕೊಂಡು ವಾಸ್ತವವನ್ನು ತಿಳಿಯಲು ಯತ್ನಿಸುವುದೇ ಇಲ್ಲ. ವಾಸ್ತವಿಕತೆಯನ್ನು ಇರುವಂತೆ ಎದುರಿಸಬೇಕು.. ಭ್ರಮೆಯಲ್ಲಿ ಬದುಕುವವರಿಗೆ ವಾಸ್ತವ ಅಷ್ಟು ಸರಿಯಾಗಿ ಅರ್ಥವಾಗುವುದಿಲ್ಲ. ವಾಸ್ತವಿಕತೆಯಿಂದ ದೂರ ಸರಿದರೆ ಬದುಕಿನತ್ತ ಹೆಜ್ಜೆ ಹಾಕುವುದು ದುಸ್ತರವಾಗುವುದು. ಬದುಕಿನಲ್ಲಿ ನಡೆಯುವ ಅನೇಕ ಅವಘಡಗಳಿಗೆ ಭ್ರಮೆ ಕಾರಣ.
ಹಾಗಾದರೆ ಭ್ರಾಮಕತೆಯಿಂದ ಹೊರ ಬಂದು ವಾಸ್ತವ ಬದುಕನ್ನು ಎದುರಿಸುವುದು ಹೇಗೆ ಎಂಬ ಪ್ರಶ್ನೆ ಸುಳಿಯುತ್ತದೆ. ಉತ್ತರದ ರೂಪದಲ್ಲಿ ಕೆಲ ಮಾರ್ಗಗಳು ಇಲ್ಲಿವೆ.
ಒಪ್ಪಿಕೊಳ್ಳಿ
ನಮ್ಮ ಉದ್ದೇಶವು ನಮ್ಮ ವಾಸ್ತವವನ್ನು ಸೃಷ್ಟಿಸುತ್ತದೆ. ವಾಸ್ತವವನ್ನು ಇದ್ದಂತೆ ಎದುರಿಸಿ ನೀವು ಬಯಸಿದಂತೆ ಅಲ್ಲ. ಪ್ರಸ್ತುತ ಪರಿಸ್ಥಿತಿಯನ್ನು ಒಪ್ಪಿಕೊಳ್ಳಲು ನೀವು ಅದನ್ನು ಇಷ್ಟಪಡಬೇಕು. ಅಥವಾ ನಡೆದ ಪರಿಸ್ಥಿತಿಗಳನ್ನು ಬೆಂಬಲಿಸುತ್ತೀರಿ ಎಂದಲ್ಲ. ಪ್ರಸ್ತುತ ಜೀವನವನ್ನು ಸ್ವೀಕರಿಸಲು ನಿರಾಕರಿಸುವುದು. ನಿಮ್ಮ ಮಾನಸಿಕ ಮತ್ತು ದೈಹಿಕ ಆರೋಗ್ಯದ ಮೇಲೆ ಹಾನಿ ಉಂಟಾಗಬಹುದು. ನಿಮ್ಮ ಯೋಗಕ್ಷೇಮದ ಮೇಲೆ ಪರಿಣಾಮ ಬೀರುವ ಪರಿಸ್ಥಿತಿಯಲ್ಲಿ ನೀವು ಇದ್ದರೆ ನಿಮ್ಮ ಭಾವನೆಗಳನ್ನು ನಿಭಾಯಿಸಲು ನೀವು ನಿರಾಕರಣೆಯನ್ನು ಬಳಸುತ್ತಿರಬಹುದು. ಭ್ರಮೆ ಅನ್ನೋದು ಅಸಮತೋಲನವನ್ನು ತಂದೊಡ್ಡುತ್ತದೆ. ಆ ಅಸಮತೋಲನ ಬದುಕಿನ ಹೀನ ಸ್ಥಿತಿಗೆ ಮುನ್ನುಡಿ ಬರೆಯಬಹುದು. ಜೀವನದಲ್ಲಿ ಮಾಡಿದ ತಪ್ಪುಗಳನ್ನು ದಾಟಿ ಮತ್ತೊಮ್ಮೆ ಬಲವಾಗಿ ನಿಲ್ಲಲು ವಾಸ್ತವವನ್ನು ಒಪ್ಪಿಕೊಳ್ಳಿ.
ಸ್ವೀಕರಿಸಿ
ಕ್ಷಣಕ್ಷಣಕ್ಕೂ ಬದಲಾಗುತ್ತಿರುವ ಜಗತ್ತು ಇದು. ಇಲ್ಲಿ ಎಲ್ಲರೂ ನಮ್ಮವರಲ್ಲ. ಅಗತ್ಯಕ್ಕೆ ತಕ್ಕಂತೆ ಸುತ್ತಮುತ್ತಲಿನ ಬದುಕು ಬದಲಾಗುತ್ತಲೇ ಇರುತ್ತದೆ. ಅದೆಷ್ಟೋ ಸಂಗತಿಗಳು ತನ್ನಷ್ಟಕ್ಕೆ ತಾನೆ ತನ್ನ ಪಾಡಿಗೆ ಸಂಭವಿಸುತ್ತಲೇ ಇರುತ್ತವೆ. ವಾಸ್ತವದಲ್ಲಿ ನಡೆದ ಘಟನೆಗಳು ಮುಖ್ಯವಾಗುವುದಿಲ್ಲ. ನೋವುಗಳಿಗೆ ನಾವು ಹೇಗೆ ಪ್ರತಿಕ್ರಿಯಿಸುತ್ತೇವೆ ವ್ಯಾಖ್ಯಾನಿಸುತ್ತೇವೆ ಸ್ಪಂದಿಸುತ್ತೇವೆ ಸ್ವೀಕರಿಸುತ್ತೇವೆ ಎಂಬುದು ಮುಖ್ಯವಾಗಿರುತ್ತದೆ. ನೋವಿಲ್ಲದವರೂ ಯಾರೂ ಇಲ್ಲ. ಅವುಗಳನ್ನು ತೋರಿಸುವ ವಿಧಾನ ಬೇರೆ ಬೇರೆ . ಕೆಲವರು ತಮ್ಮ ಆಪ್ತರ ಬಳಿ ಕಣ್ಣೀರು ಹಾಕುತ್ತಾರೆ. ಮತ್ತು ಗೊತ್ತಿಲ್ಲದವರ ಬಳಿ ನಗುವಾಗುತ್ತಾರೆ. ಹೀಗೆ ನೋವು ನಲಿವಾಗಬೇಕು. ಜನರನ್ನು ಗುರುತಿಸುವ ಕಲೆ ಕಲಿತುಕೊಳ್ಳಬೇಕು. ಏಕೆಂದರೆ ಜನರು ಎಲ್ಲ ಪರಿಸ್ಥಿತಿಯಲ್ಲಿ ಒಂದೇ ಸವiನಾಗಿರುವುದಿಲ್ಲ. ವಾಸ್ತವತೆ ಅರ್ಥೈಸಿಕೊಳ್ಳುವುದೆಂದರೆ ಸೋಲನ್ನು ನೆನಪಿಟ್ಟುಕೊಳ್ಳಬೇಕು. ಗೆಲುವಿಗಾಗಿ ಶ್ರಮಿಸಬೇಕು. ಎಕಾರ್ಟ್ ಟೋಲೆಯವರ ಹೇಳಿಕೆಯಂತೆ,’ಸ್ವೀಕಾರವು ನಿಷ್ಕ್ರೀಯ ಸ್ಥ್ಥಿತಿಯಂತೆ ಕಾಣುತ್ತದೆ. ಆದರೆ ವಾಸ್ತವದಲ್ಲಿ ಅದು ಈ ಜಗತ್ತಿನಲ್ಲಿ ಹೊಸದನ್ನು ತರುತ್ತದೆ. ಆ ಶಾಂತಿ, ಸೂಕ್ಷ್ಮ ಶಕ್ತಿಯ ಕಂಪನ, ಪ್ರಜ್ಞೆ.’
ನೀರೀಕ್ಷಿಸದಿರಿ
ನಿರೀಕ್ಷೆಯಂತೆ ಎಲ್ಲವೂ ನಡೆಯಲು ಸಾಧ್ಯವಿಲ್ಲ. ನಮ್ಮ ನಿರೀಕ್ಷೆಯಂತೆ ಎಲ್ಲರೂ ನಡೆದುಕೊಳ್ಳಬೇಕೆಂಬುದು ತಪ್ಪು. ನಮ್ಮ ಇಚ್ಚೆಯಂತೆ ಬದುಕು ನಡೆಯಬೇಕು ಎಂಬುದು ಸಹ ಒಪ್ಪಿತವಲ್ಲ. ಬದುಕನ್ನು ಬಂದಂತೆ ಸ್ವೀಕರಿಸಲು ಸತ್ಯ ಸಂಗತಿಯನ್ನು ಮನದಟ್ಟು ಮಾಡಿಕೊಳ್ಳಬೇಕು. ವಾಸ್ತವದ ಬೆಳಕಿನಲ್ಲಿ ಬದುಕಿನ ಬೆಳಕಿದೆ ಎಂಬುದನ್ನು ಮನಗಾಣಬೇಕು. ಕೆಲವೊಮ್ಮೆ ಅತಿಯಾದ ಪ್ರೀತಿ, ಅತಿಯಾಗಿ ಪ್ರೀತಿಸಿದವರನ್ನೇ ದೂರ ಮಾಡುತ್ತದೆ. ಇಲ್ಲಿ ಯಾರು ಯಾರಿಗೂ ಅನಿವಾರ್ಯ ಅಲ್ಲ. ಹೀಗಾಗಿ ಯಾರಿಂದಲೂ ಅತಿಯಾದ ನಿರೀಕ್ಷೆ ಇಟ್ಟುಕೊಳ್ಳವುದು ಸಲ್ಲದು. ಎಷ್ಟೇ ಬಂಧು ಬಳಗದವರು ಗೆಳೆಯರು ಇದ್ದರೂ ಕೂಡ ಕೆಲವೊಂದು ಪರಿಸ್ಥಿತಿಯಲ್ಲಿ ಒಂಟಿ ಅನಿಸಿಬಿಡುವುದು ನಿಜವಾದ ವಾಸ್ತವ. ವಾಸ್ತವದಲ್ಲಿ ಮರಳಿನ ಮೇಲೆ ಮರಳು ಅಂತ ಬರೆಯಬಹುದು, ಆದರೆ ನೀರಿನ ಮೇಲೆ ನೀರು ಎಂದು ಬರೆಯಲು ಸಾಧ್ಯವಿಲ್ಲ. ಇದನ್ನೇ ಸರಳವಾಗಿ ಹೇಳಬೇಕೆಂದರೆ ವಾಸ್ತವದಲ್ಲಿ ಕೆಲವು ಸಾಧ್ಯ. ಕೆಲವು ಅಸಾಧ್ಯ. ಆದ್ದರಿಂದ ಎಲ್ಲವೂ ಸಾಧ್ಯವೆಂದು ನಿರೀಕ್ಷಿಸುವುದು ತಪ್ಪು.
ಎತ್ತರಕ್ಕೆ ಏರಿ
ಜೀವನದಿ ಎಲ್ಲೆಲ್ಲೋ ಹರಿದು ಹೋಗಿ ಬಿಡುತ್ತದೆ ಎನ್ನುವ ವಾಸ್ತವ ನಮಗೆಲ್ಲರಿಗೂ ಗೊತ್ತು. ಕೆಲವು ಸಂಗತಿಗಳು ನಮ್ಮ ಕೈಯಲ್ಲೆ ಇವೆ. ಅವುಗಳನ್ನು ನಾವು ಬಯಸಿದಂತೆ ಹರಿ ಬಿಡಬಹುದು. ಬದುಕು ಕೇವಲ ಕನಸಿನ ಮೂಟೆಯಲ್ಲ. ಒಂದೊಂದೇ ಕನಸುಗಳಿಗೆ ಜೀವ ತುಂಬಿ ಹಾರಿಬಿಡುವುದರಲ್ಲಿಯೇ ನೈಜತೆ ಅಡಗಿದೆ. ಬದುಕಿನ ಗೆಲುವು ಇರೋದು ನೈಜತೆಯಲ್ಲಿ. ಬದುಕು ಸಂಕಲ್ಪ ಮತ್ತು ನಿರಂತರ ಪ್ರಯತ್ನದ ಫಲ ಎಂಬುದು ವಾಸ್ತವ. ಕಣ್ಮುಚ್ಚಿ ಕಣ್ಣು ತೆರೆಯುವುದರಲ್ಲಿ ಅಂದುಕೊಂಡಿದ್ದೆಲ್ಲ ಸಿಗುತ್ತದೆ ಅಂದುಕೊಳ್ಳುವುದು ಭ್ರಮೆ. ಹಣ್ಣು ಇರುವ ಮರಕ್ಕೆ ಹೇಗೆ ಕಲ್ಲು ಎಸೆಯುತ್ತಾರೋ ಹಾಗೆಯೇ ಎತ್ತರಕ್ಕೆ ಏರಲು ಬಯಸುವವರಿಗೆ ಕಾಲು ಎಳೆಯುತ್ತಾರೆ. ಹಾಗೆಂದ ಮಾತ್ರಕ್ಕೆ ನೀವು ಕೆಳಕ್ಕೆ ನೋಡುತ್ತ ನಿಲ್ಲಬೇಡಿ. ಬದಲಿಗೆ ಇನ್ನೂ ಎತ್ತರೆತ್ತರಕ್ಕೆ ಏರಿ ಆಗ ಕಲ್ಲುಗಳು ತಾಗುವುದೇ ಇಲ್ಲ.
ಆತ್ಮವಿಮರ್ಶೆ
ಸತ್ಯ ಏನೆಂದು ತಿಳೀಯದೇ ಬೇರೆಯವರು ಹಾಗಿರಬೇಕು ಹೀಗಿರಬೇಕು ಎಂದು ಟೀಕಿಸುವುದನ್ನು ಬಿಟ್ಟು ಆತ್ಮವಿಮರ್ಶೆ ಮಾಡಿಕೊಳ್ಳಬೇಕು. ಬೇರೆಯವರನ್ನು ನೋಡಿ ಉರಿಯುವುದರ ಬದಲು ನಾವು ಹೇಗೆದ್ದೇವೆ ಎಂದು ನಮ್ಮೊಳಗೆ ಇಣುಕಿ ನೋಡಿಕೋಳ್ಳುತ್ತ ಬಲಹೀನಗಳನ್ನು ಸರಪಡಿಸಿಕೊಳ್ಳುವ ವಾಸ್ತವದ ಬದುಕು ಬದುಕಬೇಕು. ಟೀಕೆಗೆ ನಿಂದನೆಗೆ ಕೆಟ್ಟ ಪದಗಳನ್ನು ಬಳಸಬಾರದು. ‘ವಾಸ್ತವದ ಕುಶಲತೆಯ ಮೂಲ ಸಾಧನವೆಂದರೆ ಪದಗಳ ಕುಶಲತೆ. ನೀವು ಪದಗಳ ಅರ್ಥವನ್ನು ನಿಯಂತ್ರಿಸಬಹುದಾದರೆ ಪದಗಳನ್ನು ಬಳಸಬೇಕಾದ ಜನರನ್ನು ನೀವು ನಿಯಂತ್ರಿಸಬಹುದು.’ ಎಂಬ ಮಾತು ಅರ್ಥಪೂರ್ಣವಾಗಿದೆ. ಇದು ಫಿಲಿಪ್ ಕೆ ಡಿಕ್ ಅವರ ನುಡಿ
ಕೊನೆ ಹನಿ
‘ಪ್ರೀತಿ ಮಾತ್ರ ವಾಸ್ತವ ಮತ್ತು ಅದು ಕೇವಲ ಭಾವನೆಯಲ್ಲ. ಇದು ಸೃಷ್ಟಿಯ ಹೃದಯಲ್ಲಿ ಇರುವ ಅಂತಿಮ ಸತ್ಯವಾಗಿದೆ. ಎಂಬ ಕವಿ ರವೀಂದ್ರನಾಥ ಟ್ಯಾಗೋರರ ಮಾತು ಅರ್ಥಪೂರ್ಣವಾದುದು. ಮನಸ್ಸಿನಲ್ಲಿ ಕೊಳೆಯಿದ್ದರೆ ಜೀವನ ಸುಂದರವಾಗಿರುವುದಿಲ್ಲ. ಯೋಚನಾ ಲಹರಿಗೆ ಎಲ್ಲೆಯನ್ನು ಹಾಕದೇ ಎಲ್ಲೆಂದರಲ್ಲಿ ಹರಿಯಲು ಬಿಡುವುದು ಸೂಕ್ತವಲ್ಲ. ಉತ್ತಮ ಯೋಚನೆಯ ಬೀಜಗಳನ್ನು ಬಿತ್ತಬೇಕು. ವಾಸ್ತವಿಕ ನೆಲೆಗಟ್ಟಿನ ಮೇಲೆ ವಿಶ್ಲೇಷಿಸಬೇಕು. ಭ್ರಮೆಯ ಬದುಕು ಒಂದು ರೀತಿಯಲ್ಲಿ ಹೊಸ ಗೋಣಿ ಚೀಲದಂತೆ ಆರಂಭದಲ್ಲಿ ಏನೇನೋ ಆಸೆಗಳನ್ನು ಅದರಲ್ಲಿ ತುಂಬಿ ಅಟ್ಟಕ್ಕೆ ಏರಿಸುತ್ತದೆ. ಅದು ಹರಿದಾಗ ಕಾಲಡಿಗೆ ಹಾಕುತ್ತೇವೆ. ವಾಸ್ತವದ ಬದುಕು. ಹಾಗಂತ ಹೆದರದಿರಿ. ವಾಸ್ತವದಲ್ಲಿ ಸಾಗುವ ದಾರಿಯು ಸರಿಯಾಗಿದ್ದರೆ ನಿಮಗೆ ಅರ್ಹವಾದ ಎಲ್ಲವೂ ದೊರೆಯುತ್ತದೆ.