ತಾಲ್ಲೂಕು ಮಟ್ಟದ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿಯ ಕಚೇರಿ ಉದ್ಘಾಟಿಸಿದ ಶಾಸಕ ಯಶವಂತರಾಯಗೌಡ ಪಾಟೀಲ ಅಭಿಮತ
ಉದಯರಶ್ಮಿ ದಿನಪತ್ರಿಕೆ
ಇಂಡಿ: ರಾಜ್ಯದಲ್ಲಿ ಯಾರೂ ಸಹ ಹಸಿವಿನಿಂದ ಬಳಲಬಾರದು ಎಂಬ ಉದ್ದೇಶ ಇಟ್ಟುಕೊಂಡು ಸರ್ಕಾರ ಅನ್ನಭಾಗ್ಯ ಯೋಜನೆ ಸೇರಿ ಐದು ಗ್ಯಾರಂಟಿಗಳನ್ನು ಜಾರಿಗೆ ತಂದಿದೆ. ಎಂದು ಶಾಸಕ ಯಶವಂತರಾಯಗೌಡ ಪಾಟೀಲ ಹೇಳಿದರು.
ಅವರು ಮಂಗಳವಾರ ಪಟ್ಟಣದ ಮಿನಿ ವಿಧಾನಸೌಧದ ಆವರಣದಲ್ಲಿ ಆಯೋಜಿಸಿದ್ದ ತಾಲ್ಲೂಕು ಮಟ್ಟದ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿಯ ಕಚೇರಿ ಉದ್ಘಾಟಿಸಿ ಮಾತನಾಡಿದರು.
ಈ ಹಿಂದೆ ದೇವರಾಜ್ ಅರಸು ಅವರು ಉಳುವವನೇ ಭೂಮಿಯ ಒಡೆಯ ಎನ್ನುವ ಯೋಜನೆಯಿಂದ ಬಡವರಿಗೆ ನ್ಯಾಯ ಒದಗಿಸಿದ್ದರು. ಅವರ ಮಾದರಿಯಲ್ಲಿಯೇ ರಾಜ್ಯದ ಎಲ್ಲಾ ಜನರಿಗೆ ಸಮಬಾಳು, ಸಮಪಾಲು ಎನ್ನುವ ತತ್ವದ ಅಡಿಯಲ್ಲಿ ಇಂದಿನ ನಮ್ಮ ಸರ್ಕಾರ ಗ್ಯಾರಂಟಿ ಯೋಜನೆಗಳನ್ನು ಜಾರಿಗೊಳಿಸಿದೆ ಎಂದರು.
೨೦೧೩ ರಿಂದ ೨೦೧೮ರ ವರೆಗೆ ಕಾಂಗ್ರೆಸ್ ಸರ್ಕಾರ ಬಡವರಿಗಾಗಿ, ದೀನ ದಲಿತರಿಗಾಗಿ ೮೫೭೧೮ ಕೋಟಿ ವೆಚ್ಚ ಮಾಡಿದೆ. ನೀರಾವರಿಗಾಗಿ ೪೦೦೦೦ ಕೋಟಿ ವೆಚ್ಚ ಮಾಡಿದೆ. ಪ್ರಸಕ್ತ ವರ್ಷದಲ್ಲಿ ೫೮೦೦೦ ಕೋಟಿ ಅನುದಾನ ಮೀಸಲಿಟ್ಟಿದೆ. ಸ್ತ್ರೀಯರಿಗೆ ಸಮಾನತೆ ಸಿಗಬೇಕೆನ್ನುವ ತತ್ವದ ಮೇಲೆ ಅವರಿಗೆ ಫ್ರೀ ಬಸ್ ವ್ಯವಸ್ಥೆ ಮಾಡಿದೆ. ಸರ್ವರಿಗೂ ಗ್ಯಾರಂಟಿ ಯೋಜನೆಗಳ ಲಾಭ ತಲುಪಬೇಕೆಂದು ಪ್ರೀ ವಿದ್ಯುತ್ ನೀಡಲಾಗಿದೆ. ಇವೆಲ್ಲವುಗಳು ಸಮಾನತೆಯ ಸಂಕೇತಗಳು ಎಂದು ವಿವರಿಸಿದರು.
ಜಿಲ್ಲಾ ಸಮಿತಿ ಅಧ್ಯಕ್ಷ ಇಲಿಯಾಸ್ ಬೋರಾಮಣಿ ಮಾತನಾಡಿ, ಜಿಲ್ಲಾ ಮಟ್ಟದಲ್ಲಿ ತಾವು ಮಾಡಿದ ಕೆಲಸಗಳ ಬಗ್ಗೆ ವಿವರಿಸಿದರು. ಭೀಮಾಶಂಕರ ಸಕ್ಕರೆ ಕಾರ್ಖಾನೆಯ ಉಪಾಧ್ಯಕ್ಷ ಎಂ.ಆರ್.ಪಾಟೀಲ ಮಾತನಾಡಿ, ಸರ್ಕಾರದ ೫ ಗ್ಯಾರಂಟಿ ಯೋಜನೆಗಳಿಗಾಗಿ ಸರ್ಕಾರದಿಂದ ಇಲ್ಲಿಯವರೆಗೆ ವಿಜಯಪೂರ ಜಿಲ್ಲೆಗೆ ೨೮೦ ಕೋಟಿ ರೂ, ಬಿಡುಗಡೆಯಾಗಿದೆ ಎಂದರು.
ವೇದಿಕೆಯಲ್ಲಿ ಕಂದಾಯ ಉಪವಿಭಾಗಾಧಿಕಾರಿ ಅಬೀದ ಗದ್ಯಾಳ, ತಹಶೀಲ್ದಾರ ಬಿ.ಎಸ್.ಕಡಕಬಾಬಿ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಜಾವೀದ ಮೋಮಿನ್, ಸದಾಶಿವ ಪ್ಯಾಟಿ, ಬಿ.ಕೆ.ಪಾಟೀಲ, ಭೀಮಣ್ಣ ಕವಲಗಿ, ಗುರನಗೌಡ ಪಾಟೀಲ, ಕೆಂಪೇಗೌಡ ಪರಗೊಂಡ, ಭೀಮಾಶಂಕರ ಹಂಜಗಿ, ದೀಪಾ ಕುಲಕರ್ಣಿ, ನಿರ್ಮಲಾ ತಳಕೇರಿ, ಶೈಲಜಾ ಜಾಧವ, ಮಹೇಶ ಹೊನ್ನಬಿಂದಗಿ, ಸಂಜೀವ ನಾಯ್ಕೋಡಿ, ಸತೀಶ ಹತ್ತಿ, ಶಶಿಕಲಾ ಹಿರೇಮಠ, ಸಿದ್ದು ಕಟ್ಟೀಮನಿ, ಸಣ್ಣಪ್ಪ ತಳವಾರ, ಪ್ರಭು ಕುಂಬಾರ, ಸಂಕೇತ ಜ್ಯೋಶಿ, ಮಲ್ಲೇಶಿ ಭೋಸಗಿ, ರುದ್ರು ಅಲಗೊಂಡ, ಭೀಮರಾಯ ಮೇತ್ರಿ, ಸೋಮಣ್ಣ ಪ್ರಚಂಡಿ ಸೇರಿದಂತೆ ಇನ್ನಿತರರು ಇದ್ದರು.
ಇಓ ನಂದೀಪ ರಾಠೋಡ ಸ್ವಾಗತಿಸಿದರು. ಧನರಾಜ ಮುಜಗೊಂಡ ನಿರೂಪಿಸಿದರು.
“ಸರ್ಕಾರದ ಗ್ಯಾರಂಟಿ ಯೋಜನೆಗಳಿಂದ ಅಭಿವೃದ್ಧಿ ಕೆಲಸಗಳಲ್ಲಿ ತೊಂದರೆಯಾಗಿರುವದು ನಿಜ. ಅದನ್ನು ಮುಂದಿನ ದಿನಗಳಲ್ಲಿ ಸರಿದೂಗಿಸಿಕೊಳ್ಳಲಾಗುತ್ತದೆ. ನುಡಿದಂತೆ ನಡೆಯುವುದು ನಮ್ಮ ಸರ್ಕಾರದ ನೀತಿ. ಇಂಡಿ ತಾಲ್ಲೂಕಿನಲ್ಲಿ ನೀರು, ವಿದ್ಯುತ್, ಶಿಕ್ಷಣ, ಲಿಂಬೆ ಅಭಿವೃದ್ಧಿ ಮಂಡಳಿ, ಕೃಷಿ ಕಚೇರಿ, ಕಾರ್ಖಾನೆ ಮುಂತಾದವುಗಳನ್ನು ಮಾಡಿ ಮತಕ್ಷೇತ್ರವನ್ನು ಅಭಿವೃದ್ಧಿ ಮಾಡಲಾಗಿದೆ. ಇನ್ನು ಮುಂದಿನ ದಿನಗಳಲ್ಲಿ ಇಂಡಿ ಜಿಲ್ಲೆಯನ್ನಾಗಿ ಮಾಡುವ ಉದ್ದೇಶವಿದೆ.”
– ಯಶವಂತರಾಯಗೌಡ ಪಾಟೀಲ
ಶಾಸಕರು, ಇಂಡಿ
“ಶಾಸಕರು ಸಮ ಸಮಾಜದ ಹರಿಕಾರರು. ತಾಲ್ಲೂಕಿನಲ್ಲಿ ಇನ್ನೂ ೫೦೦೦ ಜನರಿಗೆ ವಿವಿಧ ಕಾರಣಗಳಿಂದ ಗ್ಯಾರಂಟಿ ಯೋಜನೆಗಳ ಲಾಭ ಸಿಕ್ಕಿಲ್ಲ. ಅವುಗಳ ಬಗ್ಗೆ ಅಧಿಕಾರಿಗಳ ಜೊತೆಗೂಡಿ ಚರ್ಚೆ ಮಾಡಿ ಅವರಿಗೂ ಕೂಡಾ ಲಾಭ ಸಿಗುವಂತೆ ಶ್ರಮಿಸುವೆ.”
– ಪ್ರಶಾಂತ ಕಾಳೆ
ಅಧ್ಯಕ್ಷರು, ತಾಲ್ಲೂಕು ಮಟ್ಟದ ಗ್ಯಾರಂಟಿ ಯೋಜನೆಗಳ ಸಮಿತಿ, ಇಂಡಿ