ನಿವೃತ್ತಿಗೊಂಡ ರಮಾನಂದ ಸ್ವಗ್ರಾಮಕ್ಕೆ ಆಗಮನ | ಅದ್ದೂರಿ ಸ್ವಾಗತ ಮತ್ತು ಗೌರವ
ಉದಯರಶ್ಮಿ ದಿನಪತ್ರಿಕೆ
ಚಡಚಣ: ಮಳೆ, ಬಿಸಿಲು, ಚಳಿಯನ್ನು ಲೆಕ್ಕಿಸದೇ ಕುಟುಂಬದ ಬಗ್ಗೆ ಚಿಂತಿಸದೇ ದೇಶ ರಕ್ಷಣೆಗಾಗಿ ತ್ಯಾಗಿಯಾಗಿ ಸೇವೆಯನ್ನು ಸಲ್ಲಿಸುತ್ತಿರುವ ಭಾರತೀಯ ಸೈನಿಕರ ಸೇವೆ ನಿಜಕ್ಕೂ ಶ್ಲಾಘನೀಯವಾದುದು ಎಂದು ನಿವೃತ್ತ ಶಿಕ್ಷಕ ಎಚ್.ಎಸ್.ಬನಸೋಡೆ ಹೇಳಿದರು.
ಮಂಗಳವಾರದಂದು ಶಿರಾಡೋಣ ಗ್ರಾಮದ ಬೀರೇಶ್ವರ ದೇವಾಸ್ಥಾನದ ಆವರಣದಲ್ಲಿ ಗ್ರಾಮದ ಅಭಿಮಾನ ಬಳಗ ಹಾಗೂ ಗೆಳೆಯರ ಬಳಗದವರು ಸೇರಿದಂತೆ ಗ್ರಾಮಸ್ಥರ ವತಿಯಿಂದ ಹಮ್ಮಿಕೊಳ್ಳಲಾಗಿದ್ದ ೨೪ ವರ್ಷ ಸೇನೆಯಲ್ಲಿ ಸೇವೆ ಸಲ್ಲಿಸಿ ಸ್ವಗ್ರಾಮಕ್ಕೆ ಆಗಮಿಸಿದ ನಿವೃತ್ತ ಯೋಧ ರಮಾನಂದ ಭೀಮಾಶಂಕರ ಕುಲಕರ್ಣಿ ಅವರ ಸ್ವಾಗತ ಮತ್ತು ಸನ್ಮಾನ ಸಮಾರಂಭದ ಅತಿಥಿಗಳಾಗಿ ಭಾಗವಹಿಸಿ ಮಾತನಾಡಿದ ಅವರು. ಸೈನ್ಯಕ್ಕೆ ಸೇರಬೇಕಾದರೇ ಪುಣ್ಯ ಮಾಡಿರಬೇಕು. ಅಂತಹ ಪಣ್ಯ ರಮಾನಂದ ಕುಲಕರ್ಣಿರವರು ಪಡೆದುಕೊಂಡು ಬಂದಿದ್ದರೂ ಎನ್ನುವುದರಿಂದಲೇ ಅವರ ೨೪ ವರ್ಷ ಸೇನೆಯಲ್ಲಿನ ಸುದೀರ್ಘ ಭಾರತಾಂಭೆ ಸೇವೆಗೆ ಇಂದು ಗೌರವ ಸಿಕ್ಕಂತಾಗಿದೆ. ರಮಾನಂದ ಅವರಂತೆ ಈ ಗ್ರಾಮದಲ್ಲಿ ಇನ್ನು ಮುಂದೆ ನೂರಾರು ಸಂಖ್ಯೆ ಯುವಕರು ಸೈನ್ಯವನ್ನು ಸೇರುವಂತಾಗಲಿ ಎಂದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಮಾಜಿ ಸೈನಿಕ ಮಹಾದೇವ ಪೂಜಾರಿ ಮಾತನಾಡುತ್ತ, ದೇಶದ ಏಳ್ಗೆ ಮತ್ತು ರಕ್ಷಣೆ ದೇಶದ ಅನ್ನದಾತ ಮತ್ತು ಗಡಿ ಕಾಯುವ ಯೋಧರಿಂದ ಮಾತ್ರ ಸಾಧ್ಯ ಅಂತ ಮಾಜಿ ಪ್ರಧಾನಿಮಂತ್ರಿ ಲಾಲ್ ಬಹುದ್ದೂರ ಶಾಸ್ತ್ರೀ ತಿಳಿದುಕೊಂಡು ಜೈ ಜವಾನ ಮತ್ತು ಜೈ ಕಿಸಾನ ಘೋಷ ವಾಕ್ಯವನ್ನು ಹೇಳಿದ್ದಾರೆ ಎಂದರು.
ಚಡಚಣ ತಾಲೂಕು ಮಾಜಿ ಸೈನಿಕ ಸಂಘದ ಅಧ್ಯಕ್ಷ ಕಾಂತುಗೌಡ ಪಾಟೀಲ ಮಾತನಾಡುತ್ತ. ಸೈನಿಕನಿಗೆ ದೇಶ ರಕ್ಷಣೆಯೊಂದೇ ಗುರಿ. ಸೈನಿಕನ ಜೀವನ ಕಷ್ಟಗಳ ಪರ್ವತವಿದ್ದಂತೆ, ಕಷ್ಟಗಳನ್ನೇ ಸುಖವನ್ನಾಗಿ ಭಾವಿಸಿ ಒಗ್ಗಿಕೊಳ್ಳುವವನೇ ಸೈನಿಕ ಎಂದರು.
ನಿವೃತ್ತಿಗೊಂಡು ಸ್ವಗ್ರಾಮಕ್ಕೆ ಮರಳಿದ ಯೋಧ ರಮಾನಂದ ಕುಲಕರ್ಣಿ ಮಾತನಾಡಿ, ದೇಶ ರಕ್ಷಣೆ ಜವಾಬ್ದಾರಿ ಬಹಳ ಕಷ್ಟವಿದ್ದರೂ ಅದನ್ನು ಸಂತಸದಿಂದ ತಾಯಿ ಭಾರತಾಂಬೆ ರಕ್ಷಣೆ ಮಾಡುತ್ತಿದ್ದೇನಲ್ಲ ಎನ್ನುವ ಹೆಮ್ಮೆಯಿಂದ ೨೪ ವರ್ಷ ಸಾರ್ಥಕ ಸೇವೆಯನ್ನು ಸಲ್ಲಿಸಿದ್ದೇನೆ. ಇನ್ನೊಂದು ಜನ್ಮ ಅಂತಾ ಇದ್ದರೇ ನಾನು ಮತ್ತೇ ಸೈನಿಕನಾಗಿ ಭಾರತ ಮಾತೆಯ ಸೇವೆ ಮಾಡಲು ಸಿದ್ಧ ಎಂದರು.
ಈ ವೇಳೆ ಗ್ರಾಮದ ನಿವೃತ್ತ ಯೋಧರಿಗೂ ಸನ್ಮಾನಿಸಲಾಯಿತು.
ಈ ಸಂದರ್ಭದಲ್ಲಿ ನಿವೃತ್ತಿಯಾಗಿ ಸ್ವಗ್ರಾಮಕ್ಕೆ ಮರಳಿದ ಸೈನಿಕ ರಮಾನಂದ ಕುಲಕರ್ಣಿ ದಂಪತಿಯವರಿಗೆ ಗಣ್ಯರು, ಸ್ನೇಹಿತರು, ಹಿತೈಸಿಗಳು, ಕುಟುಂಬ ವರ್ಗ ಮತ್ತು ಸಂಬಂಧಿಕರು ಸನ್ಮಾನಿಸಿ ಗೌರವಿಸಿದರು. ಕಾರ್ಯಕ್ರಮದ ಸ್ವಾಗತವನ್ನು ಎಂ.ಎಲ್.ಪಾಂಡ್ರೆ, ವಂದನಾರ್ಪಣೆಯನ್ನು ವಿಜಯಕುಮಾರ ಸಾತಪುತೆ ಹಾಗೂ ನಿರೂಪಣೆಯನ್ನು ಆರ್.ಎಂ.ಚೋಪಡೆ ನೆರವೇರಿಸಿದರು.
ತೆರೆದ ವಾಹನದಲ್ಲಿ ಮೆರವಣಿಗೆ
ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಹಾಗೂ ಬೀರೇಶ್ವರ ಪ್ರೌಢ ಶಾಲೆ ವಿದ್ಯಾರ್ಥಿಗಳು ವಿವಿಧ ನೃತ್ಯಗಳ ಮೂಲಕ ಗ್ರಾಮಸ್ಥರೊಂದಿಗೆ ಹನುಮಾನ ದೇವಾಸ್ಥಾನದಿಂದ ಗ್ರಾಮದ ಪ್ರಮುಖ ಬೀದಿಗಳಲ್ಲಿ ಭಾರತಾಂಬೆಗೆ ಪುಷ್ಪಾರ್ಚನೆಗೈದ ನಿವೃತ್ತ ಯೋಧರನ್ನು ತೆರೆದ ವಾಹನದಲ್ಲಿ ಮೆರವಣಿಗೆ ಮೂಲಕ ಬೀರಲಿಂಗೇಶ್ವರ ದೇವಾಸ್ಥಾನದ ಆವರಣದಲ್ಲಿರುವ ಭವ್ಯ ವೇದಿಕೆಗೆ ಕರೆತರಲಾಯಿತು.