ಉದಯರಶ್ಮಿ ದಿನಪತ್ರಿಕೆ
ವಿಜಯಪುರ: ವೃಕ್ಷಥಾನ್ ಹೆರಿಟೇಜ್ ರನ್-2024ಕ್ಕೆ ನಿರೀಕ್ಷೆಗೂ ಮೀರಿ ಬೆಂಬಲ ವ್ಯಕ್ತವಾಗಿದ್ದು, ಸಾರ್ವಜನಿಕರ ಒತ್ತಾಯದ ಹಿನ್ನೆಲೆಯಲ್ಲಿ ಹೆಸರು ನೋಂದಣಿ ಅವಧಿಯನ್ನು ಡಿಸೆಂಬರ್ 7ರ ವರೆಗೆ ವಿಸ್ತರಿಸಲಾಗಿದೆ ಎಂದು ಜಿಲ್ಲಾಧಿಕಾರಿ ಟಿ. ಭೂಬಾಲನ್ ತಿಳಿಸಿದ್ದಾರೆ.
ನಗರದಲ್ಲಿ ಡಿಸೆಂಬರ್ 22 ರಂದು ನಡೆಯಲಿರುವ ವೃಕ್ಷಥಾನ್ ಹೆರಿಟೇಜ್ ರನ್-2024 ಪ್ರೊಮೊಷನ್ ಗಾಗಿ ಇಂದು ರವಿವಾರ ಬೆಳಿಗ್ಗೆ ಭೂತನಾಳ ಕೆರೆಯ ಹಿಂಭಾಗದಲ್ಲಿ ಕರಾಡದೊಡ್ಡಿ ಬಳಿ ಇರುವ ಮಾನವ ನಿರ್ಮಿತ ಅರಣ್ಯ ಪ್ರದೇಶದಲ್ಲಿ ನಡೆದ 5 ಕಿ. ಮೀ. ಓಟ ನಡೆಯಿತು. ಈ ಓಟಕ್ಕೆ ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ರಿಷಿ ಆನಂದ ಹಾಗೂ ಸಚಿವ ಎಂ. ಬಿ. ಪಾಟೀಲ ಅವರ ಸಾರ್ವಜನಿಕ ಸಂಪರ್ಕಾಧಿಕಾರಿ ಡಾ. ಮಹಾಂತೇಶ ಬಿರಾದಾರ ಅವರೊಂದಿಗೆ ಜಂಟಿಯಾಗಿ ಚಾಲನೆ ನೀಡಿದ ಬಳಿಕ ಟಿ. ಭೂಬಾಲನ್ ಅವರು ಮಾತನಾಡಿದರು.
ಈ ಬಾರಿಯ ಓಟಕ್ಕೆ ಈಗಾಗಲೇ ಸಾವಿರಾರು ಹೆಸರು ನೋಂದಾಯಿಸಿದ್ದಾರೆ. ಆದರೆ, ಇನ್ನೂ ಹಲವಾರು ಜನರು ಹೆಸರು ನೋಂದಾಯಿಸಲು ಅವಧಿಯನ್ನು ವಿಸ್ತರಿಸುವಂತೆ ಒತ್ತಾಯಿಸುತ್ತಿದ್ದಾರೆ. ಹೀಗಾಗಿ ಸಾರ್ವಜನಿಕರ ಬೇಡಿಕೆಗೆ ಸ್ಪಂದಿಸಿ ಹೆಸರು ನೋಂದಣಿ ಅವಧಿಯನ್ನು ಡಿಸೆಂಬರ್ 7ರ ವರೆಗೆ ವಿಸ್ತರಿಸಲಾಗಿದೆ. ಕೂಡಲೇ ಆಸಕ್ತರು ತಮ್ಮ ಹೆಸರನ್ನು https://www.eventzalley.com/event-details/211 ನೋಂದಾಯಿಸಬಹುದಾಗಿದೆ ಎಂದು ವಿಜಯಪುರ ಜಿಲ್ಲಾಧಿಕಾರಿ ಟಿ. ಭೂಬಾಲನ್ ತಿಳಿಸಿದ್ದಾರೆ.
ಡಿಸಿ, ಜಿ. ಪಂ. ಸಿಇಓ ಮತ್ತು ಸೈನಿಕ ಶಾಲೆಯ ಸ್ಕ್ವ್ಯಾಡ್ರನ್ ಲೀಡರ್ ವಿನೂತಾ ಜಿ. ಆರ್. ಅವರೂ ಪಾಲ್ಗೋಂಡ ಈ ಓಟ ಮಾನವ ನಿರ್ಮಿತ ಅರಣ್ಯ ಪ್ರದೇಶದ ಮುಖ್ಯಧ್ವಾರದಿಂದ ಪ್ರಾರಂಭವಾಗಿ ಭೂತನಾಳ ಕೆರೆಯ ಹಿಂಭಾಗದಲ್ಲಿರುವ ಅರಣ್ಯ ಪ್ರದೇಶದ ಮೂಲಕ ಸಾಗಿತು. ಕೆರೆಯ ಹಿನ್ನೀರಿನ ಪ್ರಕೃತಿಯ ಸುಂದರ ಪರಿಸರದಲ್ಲಿ ಬೆಳಿಗ್ಗೆ ನಡೆದ ಈ ಓಟ ಕ್ರೀಡಾಪಟುಗಳಿಗೆ ಹೊಸ ಅನುಭವ ಒದಗಿಸಿತು. ಅಲ್ಲದೇ, ಜಲರಾಶಿಯಲ್ಲಿದ್ದ ಬಾನಾಡಿಗಳ ನೀನಾದ, ಜಲಚರಗಳ ಸಂಚಾರ ಪ್ರಕೃತಿ ಪ್ರೀಯರಿಗೆ ಮನಕ್ಕೆ ಮುದ ನೀಡಿತು.
ಐದು ಕಿ. ಮೀ. ವರೆಗೆ ನಡೆದ ಈ ಓಟ ಅರಕೇರಿ ಮುಖ್ಯ ರಸ್ತೆಯವರೆಗೆ ಸಾಗಿ ಮುಕ್ತಾಯಯಗೊಂಡಿತು. ಎಲೆಮರೆಯ ಕಾಯಿಯಂತಿದ್ದ ಈ ಸುಂದರ ಪರಿಸರ ಕಂಡು ಡಿಸಿ ಟಿ. ಭೂಬಾಲನ್, ಜಿ. ಪಂ. ಸಿಇಓ ರಿಷಿ ಆನಂದ, ಸೈನಿಕ ಶಾಲೆಯ ಸ್ಕ್ವ್ಯಾಡ್ರನ್ ಲೀಡರ್ ವಿನೂತಾ ಜಿ. ಆರ್., ಜಿ. ಪಂ. ಉಪಕಾರ್ಯದರ್ಶಿ ಪ್ರಶಾಂತ ಅಜೂರ ಸಂತಸ ವ್ಯಕ್ತಪಡಿಸಿದರು. ಬಸವನಾಡಿನಲ್ಲಿ ಇಂಥ ಸುಂದರ ಪರಿಸರದ ಮಧ್ಯೆ 5 ಕಿ. ಮೀ. ಓಟದಲ್ಲಿ ಪಾಲ್ಗೋಂಡಿರುವುದು ಸಾರ್ಥಕ ಎನಿಸಿದೆ ಎಂದು ಖುಷಿಪಟ್ಟರು.
ಈ ಓಟದಲ್ಲಿ ಸಚಿವ ಎಂ. ಬಿ. ಪಾಟೀಲ ಅವರ ಸಾರ್ವಜನಿಕ ಸಂಪರ್ಕಾಧಿಕಾರಿ ಡಾ. ಮಹಾಂತೇಶ ಬಿರಾದಾರ ಅವರ ನೇತೃತ್ವದಲ್ಲಿ ವಿಜಯಪುರ ಸೈಕ್ಲಿಂಗ್ ಗ್ರುಪ್ ಸದಸ್ಯರು, ವೃಕ್ಷಥಾನ್ ಹೆರಿಟೇಜ್ ರನ್ ಕೋರ್ ಕಮಿಟಿ ಪದಾಧಿಕಾರಿಗಳಾದ ಮುರುಗೇಶ ಪಟ್ಟಣಶೆಟ್ಟಿ, ಡಾ. ರಾಜು ಯಲಗೊಂಡ, ವೀರೇಂದ್ರ ಗುಚ್ಚೆಟ್ಟಿ, ಅಪ್ಪು ಭೈರಗೊಂಡ, ಶಂಭು ಕರ್ಪೂರಮಠ, ಶಿವನಗೌಡ ಪಾಟೀಲ, ಸೋಮಶೇಖರಸ್ವಾಮಿ, ಸಂತೋಷ ಔರಸಂಗ, ಗುರುಶಾಂತ ಕಾಪಸೆ, ಅಸ್ಪಾಕ ಮನಗೂಳಿ, ಮಹೇಶ ವಿ. ಶಟಗಾರ, ಜಗದೀಶ ಪಾಟೀಲ, ಶ್ರೀಕಾಂತ ಹಡಲಗೇರಿ, ಪ್ರವೀಣ ಚೌರ, ಅಮಿತ್ ಬಿರಾದಾರ, ನವೀದ ನಾಗಠಾಣ, ವೀಣಾ ದೇಶಪಾಂಡೆ,ಸನರೈಸ್ ಆರ್ಮಿ ಕೋಚಿಂಗ್ ಸೆಂಟರ್ ಮುಖ್ಯಸ್ಥ ಅನೀಲ ಚವ್ಹಾಣ ಮತ್ತು ಸೆಂಟರ್ ನ ಸುಮಾರು 50 ಪ್ರಶಿಕ್ಷಣಾರ್ಥಿಗಳು, ಓಟಗಾರರಾದ ಸಂದೀಪ ಮಡಗೊಂಡ, ಸುನೀಲ ಸಾಲೋಟಗಿ, ಡಾ. ರವಿಕುಮಾರ ಚೌಧರಿ, ಶ್ರೀಕಾಂತ ಮಂತ್ರಿ, ಪ್ರಕಾಶ ಶಿವಮಠ, ಸಾಹೇಬಗೌಡ ಪಾಟೀಲ, ಶಿವರಾಜ ಪಾಟೀಲ ಮುಂತಾದವರು ಉಪಸ್ಥಿತರಿದ್ದರು.