ಶ್ರೀ ಗೌರಿ ಶಂಕರ ಜಾತ್ರಾ ಮಹೋತ್ಸವ ಪ್ರಯುಕ್ತ ನಡೆದ ರಕ್ತದಾನ ಶಿಬಿರ
ಉದಯರಶ್ಮಿ ದಿನಪತ್ರಿಕೆ
ಕಲಕೇರಿ: ಸಮೀಪದ ಅಸ್ಕಿ ಗ್ರಾಮದಲ್ಲಿ ಶ್ರೀ ಗೌರಿ ಶಂಕರ ಜಾತ್ರಾ ಮಹೋತ್ಸವದ ಪ್ರಯುಕ್ತ ಜಿಲ್ಲಾ ಏಡ್ಸ್ ನಿಯಂತ್ರಣ ಘಟಕ ವಿಜಯಪುರ, ತಾಲೂಕು ಆರೋಗ್ಯ ಅಧಿಕಾರಿಗಳ ಕಾರ್ಯಾಲಯ ಸಿಂದಗಿ, ಪ್ರಾಥಮಿಕ ಆರೋಗ್ಯ ಕೇಂದ್ರ ಆಸ್ಕಿ, ಶ್ರೀ ಗೌರಿ ಶಂಕರ ಜಾತ್ರಾ ಕಮಿಟಿ ಅಸ್ಕಿ ಮತ್ತು ಗ್ರಾಮ ಪಂಚಾಯತ್ ಕಾರ್ಯಾಲಯ ಹಾಗೂ ಗ್ರಾಮದ ವಿವಿಧ ಪ್ರಗತಿಪರ ಸಂಘಟನೆಗಳ ಸಂಯುಕ್ತ ಆಶ್ರಯದಲ್ಲಿ ಸ್ವಯಂ ಪ್ರೇರಿತ ಬೃಹತ್ ರಕ್ತದಾನ ಶಿಬಿರವನ್ನು ಆಯೋಜಿಸಲಾಯಿತು.
ಕಾರ್ಯಕ್ರಮ ಉದ್ದೇಶಿಸಿ ಎಸ್ ಡಿ ಕುಲಕರ್ಣಿ, ಅನಿಲ್ ಕುಮಾರ್ ಕಿರಣಗಿ, ಎಂ ಡಿ ಮೋತಿಬಾಯಿ ಅವರು ಮಾತನಾಡಿ, ರಕ್ತದಾನ ಶ್ರೇಷ್ಠದಾನವಾಗಿದ್ದು, ರಕ್ತದಾನ ಮಾಡಿ ಜೀವ ಉಳಿಸಿ ಎಂಬ ಘೋಷದೊಂದಿಗೆ ಜನರಲ್ಲಿ ಜಾಗೃತಿ ಮೂಡಿಸುವ ಕೆಲಸವಾಗಬೇಕಿದೆ ಮತ್ತು ರಕ್ತದಾನ ಮಾಡುವುದರ ಮಹತ್ವವನ್ನು ಪ್ರತಿಯೊಬ್ಬರೂ ಅರಿತುಕೊಳ್ಳಬೇಕಿದೆ, ರಕ್ತದಾನವನ್ನು ೧೮ ವರ್ಷ ಮೇಲ್ಪಟ್ಟ ಎಲ್ಲಾ ಆರೋಗ್ಯವಂತ ಯುವಕ ಯುವತಿಯರು ವರ್ಷದಲ್ಲಿ ಎರಡು ಸಲ ರಕ್ತ ದಾನ ಮಾಡಬಹುದು ಎಂದು ಹೇಳಿದರು.
ಸಿಂದಗಿ ತಾಲೂಕು ಆರೋಗ್ಯ ಅಧಿಕಾರಿ ಡಾ. ಎ ಎ ಮಾಗಿ ಕಾರ್ಯಕ್ರಮ ಉದ್ಘಾಟಿಸಿದರು,
ಗ್ರಾಮ ಪಂಚಾಯತಿ ಅಧ್ಯಕ್ಷ ತಿಪ್ಪಣ್ಣ ಮಾದರ ಅಧ್ಯಕ್ಷತೆವಹಿಸಿದ್ದರು, ಮುಖ್ಯ ಅತಿಥಿಗಳಾಗಿ ಅನೀಲಕುಮಾರ ಕಿರಣಗಿ, ಎಸ್ ಡಿ ಕುಲಕರ್ಣಿ, ಪಿ ವೈ ಚೌಡಕಿ, ಎಮ್ ಡಿ ಮೋತಿಬಾಯಿ, ಡಾ ಅಜ್ಮೀರ್ ಹಾಗೂ ವಿಜಯಪುರ ರಕ್ತನಿಧಿ ವಿಭಾಗದ ಡಾ ಪ್ರಿಯಾಂಕ ಪಾಟೀಲ್, ಪ್ರಾಥಮಿಕ ಆರೋಗ್ಯ ಕೇಂದ್ರ ಅಸ್ಕಿಯ ಸಿಬ್ಬಂದಿಗಳಾದ ಫಾರೂಕ್ ವಲ್ಲಿಬಾಯಿ, ಈರಣ್ಣ ಬಡಿಗೇರ, ರೇಷ್ಮಾ ನಾಯಕ್, ಪವನ್ ಕುಮಾರ್ ಹಾಗೂ ಎಲ್ಲಾ ಆಶಾ ಕಾರ್ಯಕರ್ತರು ಉಪಸ್ಥಿತರಿದ್ದರು.
ಶಿಬಿರದಲ್ಲಿ ಒಟ್ಟು ೨೧ ಯೂನಿಟ್ ರಕ್ತ ಸಂಗ್ರಹಣೆ ಮಾಡಲಾಯಿತು. ಕಾರ್ಯಕ್ರಮದ ನಿರೂಪಣೆಯನ್ನು ಡಾಕ್ಟರ್ ಸಂತೋಷ ತೆಂಗಳಿ ಹಾಗು ವಂದನಾರ್ಪಣೆಯನ್ನು ಎಸ್ ಬಿ ಜೇವೂರ ಮಾಡಿದರು.

