ಉದಯರಶ್ಮಿ ದಿನಪತ್ರಿಕೆ
ಮುದ್ದೇಬಿಹಾಳ: ಏಡ್ಸ್ ಅತ್ಯಂತ ವಿನಾಶಕಾರಿ ಸಾಂಕ್ರಾಮಿಕ ರೋಗಳಲ್ಲಿ ಒಂದು. ಸೋಂಕಿನ ಅರಿವು ಮೂಡಿಸುವುದು, ಬರದಂತೆ ತಡೆಯುವದು, ರಕ್ಷಣೆ ಪಡೆಯಲು ಮತ್ತು ಜಾಗೃತಿ ಮೂಡಿಸುವ ಉದ್ದೇಶದಿಂದ ವಿಶ್ವ ಏಡ್ಸ್ ದಿನಾಚರಣೆಯನ್ನು ಆಚರಿಸಲಾಗುತ್ತದೆ ಎಂದು ತಾಲೂಕು ಕಾನೂನು ಸೇವಾ ಸಮಿತಿಯ ಸದಸ್ಯ ಕಾರ್ಯದರ್ಶಿಗಳೂ ಹಾಗೂ ಸಿವಿಲ್ ನ್ಯಾಯಾಧೀಶರಾದ ಸಂಪತ್ತಕುಮಾರ ಬಳೂಲಗಿಡದ ಹೇಳಿದರು.
ಪಟ್ಟಣದ ಆಲಮಟ್ಟಿ ರಸ್ತೆಯಲ್ಲಿರುವ ಶಾ ಸೋಗಮಲ್ ಓಸ್ವಾಲ್ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ತಾಲೂಕು ಕಾನೂನು ಸೇವಾ ಸಮಿತಿ, ನ್ಯಾಯವಾದಿಗಳ ಸಂಘ, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಓಸ್ವಾಲ್ ಪ್ರಥಮ ದರ್ಜೆ ಕಾಲೇಜು ಹಾಗೂ ಇತರ ಎಲ್ಲ ಸರ್ಕಾರಿ ಇಲಾಖೆಗಳ ಸಂಯುಕ್ತ ಅಶ್ರಯದಲ್ಲಿ ಹಮ್ಮಿಕೊಳ್ಳಲಾಗಿದ್ದ ವಿಶ್ವ ಏಡ್ಸ್ ದಿನಾಚರಣೆ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಮೊದಲ ಬಾರಿಗೆ ಏಡ್ಸ್ ಪ್ರಕರಣ ವರದಿಯಾದಾಗ ಅಂದಾಜು ೨೫ ಮಿಲಿಯನ್ ಜನ ಈ ಖಾಯಿಲೆಗೆ ತುತ್ತಾಗಿ ಪ್ರಾಣ ಕಳೆದುಕೊಂಡರು. ಹಾಗಾಗಿ ಈ ಗಂಭೀರ ಖಾಯಿಲೆಯ ಬಗ್ಗೆ ಅರಿವು ಮೂಡಿಸಲು ಡಿ.೧ ರಂದು ವಿಶ್ವ ಏಡ್ಸ್ ದಿನನವನ್ನಾಗಿ ಆಚರಿಸಲಾಗುತ್ತದೆ ಎಂದರು.
ಆರೋಗ್ಯ ಇಲಾಖೆಯ ಆಪ್ತ ಸಮಾಲೋಚಕಿ ಕಲ್ಪನಾ ಹೂಗಾರ ಮಾತನಾಡಿ ಎಚ್‌ಐವಿ ರೋಗದ ಲಕ್ಷಣಗಳು, ಹರಡುವಿಕೆ, ಚಿಕಿತ್ಸೆ, ಸೋಂಕಿತ ವ್ಯಕ್ತಿಗಳ ಜೊತೆಗಿನ ಒಡನಾಟದಿಂದ ರೋಗ ಹರಡದಿರುವಿಕೆ ಸೇರಿದಂತೆ ಹಲವು ವಿಷಗಳ ಬಗ್ಗೆ ವಿವರಿಸಿದರು.
ನ್ಯಾಯವಾದಿಗಳ ಸಂಘದ ಅಧ್ಯಕ್ಷ ಶಶಿಕಾಂತ ಮಾಲಗತ್ತಿ ಮಾತನಾಡಿ, ಎಚ್‌ಐವಿ ಬಂದಾಗ ರೋಗವನ್ನು ತಡೆಯಬಹುದು. ಆದರೆ ಏಡ್ಸ್ ರೋಗಕ್ಕೆ ಯಾವುದೇ ಔಷಧಿ ಇಲ್ಲ. ಅದಕ್ಕ ಮರಣ ಕಟ್ಟಿಟ್ಟ ಬುತ್ತಿ. ಹಾಗಾಗಿ ಈ ಮಹಾಮಾರಿ ಇಂದ ಎಚ್ಚರದಿಂದ ಇರಬೇಕು ಎಂದರು.
ಆರೋಗ್ಯ ಇಲಾಖೆಯ ಅನಸೂಯಾ ತೇರದಾಳ ಮಾತನಾಡಿದರು. ನ್ಯಾ.ಸಂಘದ ಪ್ರ.ಕಾರ್ಯದರ್ಶಿ ಪಿ.ಬಿ.ಗೌಡರ, ಕಾನೂನು ಸೇವಾ ಸಮಿತಿಯ ಆಡಳಿತ ಸಹಾಯಕ ಅರವಿಂದ ಕುಂಬಾರ, ದಲಾಯತ್ ಮಹಾಂತೇಶ ಹಚರೆಡ್ಡಿ, ಕಾಲೇಜಿನ ಪ್ರಾಂಶುಪಾಲ ಎಚ್.ಎ.ಕಟಗೂರ ಸೇರಿದಂತೆ ಇತರರು ಇದ್ದರು.
ಕನ್ನಡ ಪ್ರಾಧ್ಯಾಪಕ ಸನಾವುಲ್ಲಾ ಮುಲ್ಲಾ ಕಾರ್ಯಕ್ರಮ ನಿರ್ವಹಿಸಿದರು.

