ಸಿದ್ದರಾಮ ಬಿರಾದಾರ.
ಉದಯರಶ್ಮಿ ದಿನಪತ್ರಿಕೆ
ವರದಾನಿ ಲಕ್ಕಮ್ಮದೇವಿ ಮುಖ್ಯವೇದಿಕೆ
ಇವಣಗಿ(ಬಸವನಬಾಗೇವಾಡಿ): ನಾಡಿನ ಶಾಸನಗಳು ಮತ್ತು ಪ್ರಾಚೀನ ಗ್ರಂಥಗಳು ನಾಡಿನ ಹಿರಿಮೆ-ಗರಿಮೆ ಸಾರಿ ಹೇಳಿವೆ. ಕನ್ನಡ ಭಾಷೆಯ ಸೊಗಡು ಎಲ್ಲರನ್ನು ಮುದುಗೊಳಿಸುವ ಶಕ್ತಿ ಹೊಂದಿದೆ ಎಂದು ಬಸವನಬಾಗೇವಾಡಿ ತಾಲೂಕಿನ ಹತ್ತನೇ ಕನ್ನಡ ಸಾಹಿತ್ಯ ಸಮ್ಮೇಳನ ಸರ್ವಾಧ್ಯಕ್ಷ,ಸಾಹಿತಿ ಸಿದ್ದರಾಮ ಬಿರಾದಾರ ಹೇಳಿದರು.
ತಾಲೂಕಿನ ಇವಣಗಿ ಗ್ರಾಮದ ವರದಾನಿ ಲಕ್ಕಮ್ಮದೇವಿ ದೇವಸ್ಥಾನದ ಆವರಣದಲ್ಲಿ ತಾಲೂಕು ಕನ್ನಡ ಸಾಹಿತ್ಯ ಪರಿಷತ್ತು ಸೋಮವಾರ ಹಮ್ಮಿಕೊಂಡಿದ್ದ ಬಸವನಬಾಗೇವಾಡಿ ತಾಲೂಕಿನ ಹತ್ತನೇ ಕನ್ನಡ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಪ್ರಾಚೀನ ಕಾಲದಿಂದಲೂ ಕನ್ನಡ ಭಾಷೆಯ ಸೊಗಡನ್ನು ನೋಡಿದಾಗ ಕನ್ನಡ ಭಾಷೆಯ ಬೆಡಗು ಅನುಪಮವಾಗಿದೆ. ೧೨ ನೇ ಶತಮಾನದಲ್ಲಿ ವಚನಕಾರರು ಸರಳ ಕನ್ನಡದಲ್ಲಿ ವಚನಗಳನ್ನು ರಚಿಸುವ ಮೂಲಕ ಕನ್ನಡವನ್ನು ಕಟ್ಟಿ ಕನ್ನಡವನ್ನು ಗಟ್ಟಿಗೊಳಿಸಿದ್ದಾರೆ. ಕನ್ನಡವನ್ನು ಸರಳ ಮಾಡಿ ಕೊರಳ ಹಾರವನ್ನಾಗಿಸಿ ಬೆರಳು ಕಚ್ಚುವಂತೆ ಮಾಡಿದ್ದು ನಿಜಕ್ಕೂ ಅದ್ಭುತ ಅಪೂರ್ವ-ಅಸ್ಮರಣೀಯ ಎಂದರು.
೧೨ ನೇ ಶತಮಾನದಲ್ಲಿ ವಿಶ್ವಗುರು ಬಸವೇಶ್ವರರು ಮಾಡಿದ ಕ್ರಾಂತಿಯು ಯಾವುದೇ ಕ್ರಾಂತಿ ಮತ್ತು ಬೆಳವಣಿಗೆಗೆ ಸರಿಸಾಟಿಯಾಗುವುದಿಲ್ಲ. ಎಲ್ಲರನ್ನು ಅಪ್ಪಿಕೊಂಡು ಒಪ್ಪಿಕೊಂಡು ಸರಿ ಸಮಾನತೆಯ ಬೀಜವನ್ನು ಬಿತ್ತಿದರು. ಬಸವೇಶ್ವರರು ಬೆಳೆದ ಬೆಳೆಯುವ ಇಂದಿಗೂ ಜಗವನ್ನು ಬೆಳಗುತ್ತಿದೆ ಎಂದರು.
ಬಸವನಬಾಗೇವಾಡಿ ತಾಲೂಕಿನ ಇತಿಹಾಸ ಬಹಳ ಪುರಾತನ ಅಷ್ಟೇ ಗಟ್ಟಿಯಾಗಿದೆ. ಈ ತಾಲೂಕು ನಾಡ-ನುಡಿಗೆ ಶ್ರೇಷ್ಠ ಕೊಡುಗೆ ನೀಡಿದೆ. ಈ ನೆಲ ಸಿಸು ಸಂಗಮೇಶ, ಸಂಗಮೇಶ ಗುಜಗೊಂಡ, ಶಂಕರ ಬೈಚಬಾಳ, ಸಿ.ಬಿ.ಪಟ್ಟಣದ, ಲ.ರು.ಗೊಳಸಂಗಿ ಸೇರಿದಂತೆ ಅನೇಕ ಸಾಹಿತಿಗಳನ್ನು ನೀಡಿದೆ. ಇದರ ಜೊತೆಗೆ ಅನೇಕ ಜನಪದ ಕಲಾವಿದರನ್ನು ನೀಡಿದೆ. ಕನ್ನಡ ನಾಡು-ನುಡಿಯ ಸೇವೆಯನ್ನು ಅನೇಕರು ತಮ್ಮ ಸಾಹಿತ್ಯ ಕೃಷಿ, ಕಲಾ ಸೇವೆ ಮೂಲಕ ಸಲ್ಲಿಸುತ್ತಿದ್ದಾರೆ.
ಸಮ್ಮೇಳನವನ್ನು ಉದ್ಘಾಟಿಸಿದ ರಾಜ್ಯ ಸಹಕಾರ ಮಹಾಮಂಡಳ ನಿರ್ದೇಶಕ ಈರಣ್ಣ ಪಟ್ಟಣಶೆಟ್ಟಿ ಮಾತನಾಡಿ, ೧೨ ನೇ ಶತಮಾನದಲ್ಲಿ ಬಸವಾದಿ ಶರಣರು ಕನ್ನಡ ಭಾಷೆಯನ್ನು ಶ್ರೀಮಂತಗೊಳಿಸಿದ್ದಾರೆ. ನಾಡು-ನುಡಿ-ನೆಲ-ಜಲದ ಬಗ್ಗೆ ಪ್ರತಿಯೊಬ್ಬ ಕನ್ನಡಿಗ ಅಭಿಮಾನ ಪಡಬೇಕು. ಗ್ರಾಮೀಣ ಪ್ರದೇಶದಲ್ಲಿ ಕನ್ನಡ ಸಾಹಿತ್ಯ ಸಮ್ಮೇಳನ ಆಯೋಜನೆ ಮಾಡಿದ್ದು ಶ್ಲಾಘನೀಯ ಎಂದರು.
ವಕೀಲ ಚಂದ್ರಶೇಖರ ಸುಭಾನಪ್ಪರ ಮಾತನಾಡಿ, ಪರಭಾಷೆ ಬಳಕೆ ಕಡಿಮೆ ಮಾಡುವ ಮೂಲಕ ಕನ್ನಡ ಭಾಷೆಗೆ ಎಲ್ಲರೂ ಹೆಚ್ಚು ಒತ್ತು ನೀಡುವಂತಾಗಬೇಕೆಂದರು.
ಅಧ್ಯಕ್ಷತೆ ವಹಿಸಿದ್ದ ಜಿಲ್ಲಾ ಕಸಾಪ ಅಧ್ಯಕ್ಷ ಹಾಸಿಂಪೀರ ವಾಲೀಕಾರ ಮಾತನಾಡಿ, ಕನ್ನಡ ಸಾಹಿತ್ಯ ಪರಿಷತ್ತು ಜಿಲ್ಲೆಯಲ್ಲಿ ಕನ್ನಡ ಸಾಹಿತ್ಯವನ್ನು ಎಲ್ಲ ಮನದಾಳಕ್ಕೆ ಮುಟ್ಟಿಸುವ ಕಾರ್ಯ ಮಾಡುತ್ತಿದೆ. ಈ ಅಕ್ಷರ ಜಾತ್ರೆಯು ಪ್ರತಿಯೊಬ್ಬ ಕನ್ನಡಿಗನ ಹಬ್ಬವಾಗಿದೆ ಎಂದರು.
ಸಾನಿಧ್ಯ ವಹಿಸಿದ್ದ ಜಮಖಂಡಿ ಓಲೇಮಠ ಉತ್ತರಾಧಿಕಾರಿ ಆನಂದದೇವರು ಮಾತನಾಡಿ, ಕನ್ನಡ ಸಂಸ್ಕ್ರತಿಯನ್ನು ಮಕ್ಕಳಿಗೆ ಕಲಿಸುವಂತಾಗಬೇಕು. ಮಕ್ಕಳಿಗೆ ಮೊಬೈಲ್ ಬದಲಾಗಿ ಕನ್ನಡ ಪುಸ್ತಕ ನೀಡಿದರೆ ಅವರು ಬೌದ್ಧಿಕವಾಗಿ ಬೆಳೆಯಲು ಪೂರಕವಾಗುತ್ತದೆ ಎಂದರು.
ಸಾನಿಧ್ಯ ವಹಿಸಿದ್ದ ಚನ್ನಬಸವ ಸ್ವಾಮೀಜಿ, ಸಿದ್ದಲಿಂಗ ಸ್ವಾಮೀಜಿ, ಕಾಂಗ್ರೆಸ್ ಬ್ಲಾಕ್ ಅಧ್ಯಕ್ಷ ಸುರೇಶ ಹಾರಿವಾಳ, ವಕೀಲ ಬಿ.ಕೆ.ಕಲ್ಲೂರ, ಡಿಎಸ್ಎಸ್ ಮುಖಂಡ ಅಶೋಕ ಚಲವಾದಿ, ಜಿಲ್ಲಾ ಕಸಾಪ ಸಂಘಟನಾ ಕಾರ್ಯದರ್ಶಿ ಅಭಿಷೇಕ ಚಕ್ರವರ್ತಿ, ಕರವೇ ರಾಜ್ಯ ಸಂಘಟನಾ ಕಾರ್ಯದರ್ಶಿ ಅಶೋಕ ಹಾರಿವಾಳ, ವ್ಹಿಡಿಸಿಸಿ ಬ್ಯಾಂಕಿನ ನಿರ್ದೇಶಕ ಚಂದ್ರಶೇಖರಗೌಡ ಪಾಟೀಲ, ತಾಲೂಕು ಕಸಾಪ ಅಧ್ಯಕ್ಷ ಶಿವಾನಂದ ಡೋಣೂರ ಮಾತನಾಡಿದರು.
ವೇದಿಕೆಯಲ್ಲಿ ನಿಕಟ ಪೂರ್ವ ಸಮ್ಮೇಳನದ ಸರ್ವಾಧ್ಯಕ್ಷ ಸಾಹಿತಿ ಈರಣ್ಣ ಬೆಕಿನಾಳ, ನರಸಲಗಿ ಗ್ರಾಮ ಪಂಚಾಯಿತಿ ಅಧ್ಯಕ್ಷ ಅಣ್ಣುಗೌಡ ಬಿರಾದಾರ, ಬಿಇಓ ವಸಂತ ರಾಠೋಡ ಇದ್ದರು. ಯಮನಪ್ಪ ಮಿಣಜಗಿ ಸ್ವಾಗತಿಸಿದರು. ಕೊಟ್ರೇಶ ಹೆಗ್ಡಾಳ, ಭೀಮರಾಯ ಚಕ್ರಮನಿ ನಿರೂಪಿಸಿದರು. ಶಿವು ಮಡಿಕೇಶ್ವರ ವಂದಿಸಿದರು.
ಸಾಧಕರಿಗೆ ಸನ್ಮಾನ
ಇದೇ ಸಂದರ್ಭದಲ್ಲಿ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕ್ರತ ಜನಪದ ಗಾಯಕ ಬಸವರಾಜ ಹಾರಿವಾಳ, ಖೋ ಖೋ ಸಾಧಕ ಶಿಕ್ಷಕ ಎನ್.ಬಿ.ದಾಸರ, ಇನ್ಸ್ಪೈರ್ ಅವಾರ್ಡ್ನಲ್ಲಿ ರಾಷ್ಟ್ರಮಟ್ಟಕ್ಕೆ ಆಯ್ಕೆಯಾದ ವಿದ್ಯಾರ್ಥಿ ಪ್ರಿಯಾಂಕಾ ಲಮಾಣಿ, ಗೌರವ ಡಾಕ್ಟರೇಟ್ ಪದವಿಗೆ ಭಾಜನರಾದ ಯುವಮುಖಂಡ ಬಸವರಾಜ ಕೋಟಿ ಅವರನ್ನು ಸಾಹಿತ್ಯ ಪರಿಷತ್ತಿನಿಂದ ವಿಶೇಷವಾಗಿ ಸನ್ಮಾನಿಸಲಾಯಿತು. ರವಿಗೌಡ ಚಿಕ್ಕೊಂಡ, ಮಹೇಶ ಮುಳವಾಡ ಸೇರಿದಂತೆ ಅನೇಕರಿಗೆ ಕರ್ನಾಟಕ ಸುವರ್ಣ ಸಂಭ್ರಮದಂಗವಾಗಿ ಪರಿಷತ್ತಿನಿಂದ ಗೌರವಿಸಲಾಯಿತು.

ಹೋಳಿಗೆ, ತುಪ್ಪ ಸವಿದ ಕನ್ನಡಾಭಿಮಾನಿಗಳು
ಉದಯರಶ್ಮಿ ದಿನಪತ್ರಿಕೆ
ವರದಿ: ಬಸವರಾಜ ನಂದಿಹಾಳ
ಬಸವನಬಾಗೇವಾಡಿ: ತಾಲೂಕಿನ ಸುಕ್ಷೇತ್ರ ಇವಣಗಿ ಗ್ರಾಮದಲ್ಲಿ ತಾಲೂಕು ಕನ್ನಡ ಸಾಹಿತ್ಯ ಪರಿಷತ್ತು ಸೋಮವಾರ ಹಮ್ಮಿಕೊಂಡಿದ್ದ ಬಸವನಬಾಗೇವಾಡಿ ತಾಲೂಕಿನ ಹತ್ತನೇ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಸಾಹಿತಿಗಳು, ಕಲಾವಿದರು, ಕನ್ನಡಾಭಿಮಾನಿಗಳು ಹೂರಣದ ಹೋಳಿಗೆ, ಹಾಲು-ತುಪ್ಪ, ಬದನೇಕಾಯಿ ಪಲ್ಲ್ಯೆ, ಅನ್ನ-ಸಾಂಬಾರು ಸವಿಯುವ ಮೂಲಕ ಗ್ರಾಮಸ್ಥರ ದಾಸೋಹದ ಸೇವೆಗೆ ಮೆಚ್ಚುಗೆ ವ್ಯಕ್ತಪಡಿಸಿದರು.
ಕನ್ನಡ ಸಾಹಿತ್ಯ ಸಮ್ಮೇಳನಗಳು ಯಶಸ್ವಿಯಾಗಬೇಕಾದರೆ ಅಲ್ಲಿ ಊಟದ ವ್ಯವಸ್ಥೆ ಅಚ್ಚುಕಟ್ಟಾಗಿ ಆಗುವದು ತುಂಬಾ ಮುಖ್ಯ. ಸಾವಿರಾರು ಜನರಿಗೆ ಹೂರಣದ ಹೋಳಿಗೆ ತಯಾರಿಸುವದು ಸುಲಭ ಸಾಧ್ಯವಲ್ಲ. ಇವಣಗಿ ಗ್ರಾಮಸ್ಥರು ಹೂರಣ ಹೋಳಿಗೆಯ ಊಟವನ್ನು ಸಮ್ಮೇಳನಕ್ಕೆ ಆಗಮಿಸುವ ಜನರಿಗೆ ಊಣಬಡಿಸುವ ಕೈಂಕರ್ಯಕ್ಕೆ ಮುಂದಾಗಿರುವದು ಶ್ಲಾಘನೀಯ. ಹೂರಣದ ಹೋಳಿಗೆ ತಯಾರಿಸಲು 45 ಮಹಿಳೆಯರು ನಿರಂತರವಾಗಿ ತಮ್ಮನ್ನು ತೊಡಗಿಸಿಕೊಂಡಿದ್ದರು.
ಇಂದು ಜರುಗಿದ ಸಮ್ಮೇಳನದ ದಾಸೋಹಕ್ಕೆ ಹೂರಣ ಹೋಳಿಗೆ ತಯಾರಿಸಲು ೩.೫ ಕ್ವಿಂಟಾಲ್ ಬೆಳೆ, ೪ ಕ್ವಿಂಟಾಲ್ ಗೋದಿ ಹಿಟ್ಟು, ೨೫ ಕೆಜಿ ತುಪ್ಪ, ೩೦೦ ಲೀಟರ್ ಹಾಲು, ೫ ಕ್ವಿಂಟಾಲ್ ಅಕ್ಕಿ, ೧೫ ಟ್ರೇ ಬದನೇಕಾಯಿ, ಸಾಂಬಾರು ತಯಾರಿಸಲು ವಿವಿಧ ಕಿರಾಣಿ ಸಾಮಾನುಗಳನ್ನು ತರಿಸಲಾಗಿದೆ. ಇಂದು ಸುಮಾರು ೫ ಸಾವಿರ ಜನರು ಊಟ ಮಾಡಿದ್ದಾರೆ ಎಂದು ಇವಣಗಿ ಗ್ರಾಮದ ನಿಂಗಣ್ಣ ಬಾಗೇವಾಡಿ, ಮುದುಕು ವಾಲೀಕಾರ ಹೇಳಿದರು.
“ನಾನು ಅನೇಕ ಸಮ್ಮೇಳನಕ್ಕೆ ಹೋಗಿದ್ದೇನೆ. ಯಾವ ಸಮ್ಮೇಳನದಲ್ಲಿಯೂ ಹೂರಣದ ಹೋಳಿಗೆಯನ್ನು ತಯಾರಿಸಿಲ್ಲ. ಇವಣಗಿ ಗ್ರಾಮಸ್ಥರು ಸಮ್ಮೇಳನದಂಗವಾಗಿ ಹೂರಣದ ಹೋಳಿಗೆ ಊಟವನ್ನು ಊಣಬಡಿಸಿದ್ದು ಪ್ರಶಂಸನೀಯವಾಗಿದೆ” ಎಂದು ಸಾಹಿತಿ ಪ್ರಭಾಕರ ಖೇಡದ ಹೇಳಿದರು.

ಸಮ್ಮೇಳನದ ಸರ್ವಾಧ್ಯಕ್ಷರ ಅದ್ಧೂರಿ ಮೆರವಣಿಗೆ
ಉದಯರಶ್ಮಿ ದಿನಪತ್ರಿಕೆ
ಹತ್ತನೇ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಕನ್ನಡಾಭಿಮಾನಿಗಳು ಕನ್ನಡದ ತೇರು ಎಳೆದು ಸಂಭ್ರಮಿಸಿದರು.
ಗ್ರಾಮದ ಹೊರವಲಯದಲ್ಲಿರುವ ಸರ್ಕಾರಿ ಹಿರಿಯ ಪ್ರಾಥಮಿಕ (ಕುಂಬಾರ ತೋಟದ) ಶಾಲೆಯ ಮುಂಭಾಗ ತಾಲೂಕು ಸಮ್ಮೇಳನದ ಸರ್ವಾಧ್ಯಕ್ಷ ಸಿದ್ದರಾಮ ಬಿರಾದಾರ ಅವರು ಕುಳಿತ ಸಾರೋಟ ಮೆರವಣಿಗೆಗೆ ತಹಸೀಲ್ದಾರ ವೈ.ಎಸ್.ಸೋಮನಕಟ್ಟಿ ಚಾಲನೆ ನೀಡಿದರು.
ಮೆರವಣಿಗೆ ಸಂಚರಿಸುವ ಮಾರ್ಗದಲ್ಲಿ ಕನ್ನಡದ ಶಾಲು ಧರಿಸಿದ ಶಿಕ್ಷಕರು, ಮುಖಂಡರು, ಕನ್ನಡಾಭಿಮಾನಿಗಳು ಗಮನ ಸೆಳೆದರು. ಮೆರವಣಿಗೆಯಲ್ಲಿ ಕುಂಭ ಹೊತ್ತ ವಿದ್ಯಾರ್ಥಿನಿಯರು, ಗ್ರಾಮದ ವಿವಿಧ ಶಾಲಾ ವಿದ್ಯಾರ್ಥಿಗಳ ಲೇಝಿಮ್, ವಿವಿಧ ಮಹಾಪುರುಷರ ಛದ್ಮವೇಷ, ಸಾರವಾಡದ ಗೊಂಬೆ ಕುಣಿತ, ಸಾರವಾಡದ ಶ್ರೀಶಕ್ತಿ ಜಗ್ಗಹಲಗಿ ಕಲಾತಂಡದ ಜಗ್ಗಹಲಗಿ, ಮುರಾಳದ ಕರಡಿ ಮಜಲು, ಡೊಳ್ಳು, ಹಲಗೆ ನಾದ, ಬಸವನಬಾಗೇವಾಡಿ ಎಲ್ಟಿ ನಂ-೩, ನರಸಲಗಿ ತಾಂಡಾ ಸರ್ಕಾರಿ ಪ್ರಾಥಮಿಕ ಶಾಲೆಯ ವಿದ್ಯಾರ್ಥಿನಿಯರ ಲಂಬಾಣಿ ನೃತ್ಯ ಜನಮನಸೂರೆಗೊಂಡಿತ್ತು. ಮೆರವಣಿಗೆಯಲ್ಲಿ ಹಲಗೆ ನಾದಕ್ಕೆ ವಿವಿಧ ಶಿಕ್ಷಕರು, ಕನ್ನಡಾಭಿಮಾನಿಗಳು ಹೆಜ್ಜೆ ಹಾಕಿ ಸಂಭ್ರಮಿಸಿದರು.
ಮೆರವಣಿಗೆಯಲ್ಲಿ ಹೂವಿನಹಿಪ್ಪರಗಿ ಯುವ ಸಾಹಿತಿ, ೧ ಲಕ್ಷಕ್ಕೂ ಹೆಚ್ಚು ನುಡಿಮುತ್ತುಗಳನ್ನು ಬರೆದ ಭೀಮರಾಯ ಹೂಗಾರ ಅವರು ತಮ್ಮ ಸ್ಕೂಟರ್ ಮೇಲೆ ಡಿ. ೨೧ ರಿಂದ ಮಂಡ್ಯದಲ್ಲಿ ಆರಂಭವಾಗುವ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಜಾಗೃತಿ ಕುರಿತಾದ ಫಲಕದೊಂದಿಗೆ ಗಮನ ಸೆಳೆದರು.
ಗ್ರಾಮದ ಪ್ರಮುಖ ಬೀದಿ ಮೂಲಕ ಸಮ್ಮೇಳನದ ವರದಾನಿ ಲಕ್ಕಮ್ಮದೇವಿ ಮುಖ್ಯ ವೇದಿಕೆಗೆ ಸಮ್ಮೇಳನದ ಸರ್ವಾಧ್ಯಕ್ಷರನ್ನು ಬರಮಾಡಿಕೊಳ್ಳಲಾಯಿತು.
ಸಾಹಿತಿಗಳಿಗೆ ಅಗೌರವ ಆರೋಪ :ಪ್ರತಿಭಟನೆ
ಉದಯರಶ್ಮಿ ದಿನಪತ್ರಿಕೆ
ಬಸವನಬಾಗೇವಾಡಿ: ತಾಲೂಕಿನ ಇವಣಗಿ ಗ್ರಾಮದಲ್ಲಿ ಸೋಮವಾರ ಹಮ್ಮಿಕೊಂಡಿದ್ದ ಬಸವನಬಾಗೇವಾಡಿ ತಾಲೂಕಿನ ಹತ್ತನೇ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಸರ್ವಾಧ್ಯಕ್ಷರ ಭಾಷಣದ ಪ್ರತಿ ಬಿಡುಗಡೆಯ ಸಂದರ್ಭದಲ್ಲಿ ಜಯ ಕರ್ನಾಟಕ ಸಂಘಟನೆಯ ಪದಾಧಿಕಾರಿಗಳು ವೇದಿಕೆ ಮುಂಭಾಗ ಆಗಮಿಸಿ ಸಮ್ಮೇಳನದ ಆಮಂತ್ರಣ ಪತ್ರಿಕೆಯಲ್ಲಿ ವಿಶ್ವಗುರು ಬಸವೇಶ್ವರರ ಭಾವಚಿತ್ರ ಹಾಕಿಲ್ಲ, ಸಮ್ಮೇಳನದ ಮುಖ್ಯ ವೇದಿಕೆಯಲ್ಲಿ eನಪೀಠ ಸಾಹಿತಿಗಳ ಭಾವಚಿತ್ರ ಹಾಕದೇ ಸಾಹಿತಿಗಳಿಗೆ ಅಗೌರವ ಸಲ್ಲಿಸಲಾಗಿದೆ ಎಂದು ಆರೋಪಿಸಿ ಪ್ರತಿಭಟನೆಗೆ ಮುಂದಾದ ಘಟನೆ ಜರುಗಿತು.
ಜಯಕರ್ನಾಟಕ ಸಂಘಟನೆಯ ತಾಲೂಕಾಧ್ಯಕ್ಷ ಶರಣು ಹೂಗಾರ, ನಿಂಗಪ್ಪ ಗೊರಗುಂಡಗಿ, ರಾಜು ಗೊರಗುಂಡಗಿ, ಮಹಾಂತೇಶ ಇಂಗಳೇಶ್ವರ ಅವರು ಸಮ್ಮೇಳನದ ಪ್ರಧಾನ ವೇದಿಕೆ ಮುಂಭಾಗ ಆಗಮಿಸಿ ಸಮ್ಮೇಳನದ ಆಮಂತ್ರಣ ಪತ್ರಿಕೆಯಲ್ಲಿ ಸಾಂಸ್ಕ್ರತಿಕ ನಾಯಕ ಬಸವೇಶ್ವರರ ಭಾವಚಿತ್ರ ಹಾಕಿಲ್ಲ. ಅಲ್ಲದೇ ಸಮ್ಮೇಳನದ ಮುಖ್ಯ ವೇದಿಕೆಯಲ್ಲಿ ಜ್ಞಾನಪೀಠ ಪ್ರಶಸ್ತಿ ಪುರಸ್ಕ್ರತ ಸಾಹಿತಿಗಳ ಭಾವಚಿತ್ರ ಹಾಕಿಲ್ಲ. ಅಲ್ಲದೇ ಗ್ರಾಮದಲ್ಲಿ ಸಾಹಿತಿಗಳ ಭಾವಚಿತ್ರ ಹಾಕದೇ ಇರುವ ಮೂಲಕ ಸಾಹಿತಿಗಳಿಗೆ ಅಗೌರವ ತೋರಿಸಿದಂತಾಗಿದೆ ಎಂದು ಆರೋಪಿಸಿ ಪ್ರತಿಭಟನೆಗೆ ಮುಂದಾದರು.
ಸ್ಥಳಕ್ಕೆ ಪೊಲೀಸ್ ಅಧಿಕಾರಿಗಳು, ಜಿಲ್ಲಾ ಕಸಾಪ ಅಧ್ಯಕ್ಷ ಹಾಸಿಂಪೀರ ವಾಲೀಕಾರ ಮಧ್ಯ ಪ್ರವೇಶಿಸಿ ಇದರ ಕುರಿತು ಪ್ರತಿಭಟನೆಕಾರರಿಗೆ ತಿಳಿ ಹೇಳುವ ಮೂಲಕ ವಾತಾವರಣ ತಿಳಿಗೊಳಿಸಿದರು.

