ಉದಯರಶ್ಮಿ ದಿನಪತ್ರಿಕೆ
ವಿಜಯಪುರ: ಜನಪದರ ಹಾಡುಗಳು ಭಾರತದ ಶ್ರೀಮಂತ ಪರಂಪರೆಯಾಗಿವೆ. ಜನಪದ ಆಚಾರ – ವಿಚಾರಗಳು ಆದರ್ಶದ ಬದುಕು ಕಟ್ಟಿಕೊಳ್ಳಲು ದಾರಿದೀಪವಾಗಿವೆ. ಹಿರಿಯರನ್ನು ಗೌರವಿಸುವುದು, ಸ್ಮರಿಸುವುದು ನಮ್ಮ ಶ್ರೇಷ್ಠತೆ ತೋರಿಸುತ್ತದೆ. ಎಂದು ಬಿ ಎಲ್ ಡಿ ಇ ಸಂಸ್ಥೆಯ ನಿರ್ದೇಶಕ, ಜಿ ಪಂ ಮಾಜಿ ಅಧ್ಯಕ್ಷ ವಿ ಎಸ್ ಪಾಟೀಲ ಅಭಿಪ್ರಾಯಪಟ್ಟರು.
ವಿಜಯಪುರ ನಗರದ ಎ ಎಸ್ ಪಿ ವಾಣಿಜ್ಯ ಮಹಾವಿದ್ಯಾಲಯದಲ್ಲಿ ಮಾತೋಶ್ರೀ ಸುಗಲಾಬಾಯಿಗೌಡತಿ ಪಾಟೀಲ ಜಾನಪದ ಪ್ರತಿಷ್ಠಾನ ಪಡಗಾನೂರ ವತಿಯಿಂದ ಲಿಂ ಸುಗಲಾಬಾಯಿಗೌಡತಿ ಪಾಟೀಲರ ೮ ನೆ ವರ್ಷದ ಸ್ಮರಣೋತ್ಸವ ಪ್ರಯುಕ್ತ ಏರ್ಪಡಿಸಿದ ” ಜಾನಪದ ಚಿಂತನ ” ಕಾರ್ಯಕ್ರಮ ಉದ್ಘಾಟಿಸಿ ಮಾತನಾಡುತ್ತಾ ವಿಧ್ಯಾರ್ಥಿ ಜೀವನದಲ್ಲೇ ಒಳ್ಳೆಯದು ಕೆಟ್ಟದ್ದು ಕುರಿತು ಆಲೋಚಿಸಿ ಬದುಕಿಗೆ ಅಗತ್ಯವಾದ ವಿಚಾರಗಳನ್ನು ಮಾತ್ರ ಅಳವಡಿಸಿಕೊಳ್ಳಬೇಕು. ಎಂದು ಹೇಳಿದರು
” ಜಾನಪದದಲ್ಲಿ ಮಹಿಳೆ ” ಕುರಿತು ಉಪನ್ಯಾಸ ನೀಡಿದ ಸಾಂಸ್ಕೃತಿಕ ಚಿಂತಕ ಮೋಹನ ಕಟ್ಟಿಮನಿ ಜಾನಪದ ಸಾಹಿತ್ಯ- ಸಂಸ್ಕೃತಿಗೆ ತಾಯಿಯೇ ಆಧಾರ. ಮಕ್ಕಳಲ್ಲಿ ಉತ್ತಮ ಸಂಸ್ಕಾರ ತುಂಬುವಲ್ಲಿ ತಾಯಿಗೆ ಮಾತ್ರ ಸಾಧ್ಯವಿದೆ. ಜಾನಪದದ ಎಲ್ಲ ಆಚಾರ, ವಿಚಾರ, ಸಂಪ್ರದಾಯ ಮತ್ತು ಆಚರಣೆಗಳನ್ನು ನೋಡಿದಾಗ ಹೆಣ್ಣುಮಕ್ಕಳ ಸ್ಥಾನ ಮುಖ್ಯವಾಗಿ ಕಾಣುತ್ತದೆ ಎಂದರು.
ಅಧ್ಯಕ್ಷತೆ ವಹಿಸಿ ಮಾತನಾಡಿದ ಪ್ರಾಚಾರ್ಯ ಪ್ರೊ ಬಿ ಎಸ್ ಬೆಳಗಲಿ ಮಾತನಾಡಿ, ಹಿರಿಯರ ಹೆಸರಿನಲ್ಲಿ ಇಂಥ ಕಾರ್ಯಕ್ರಮಗಳು ನಡೆದರೆ ಮಕ್ಕಳಲ್ಲಿ ಉತ್ತಮ ಸಂಸ್ಕಾರ ತುಂಬುವಲ್ಲಿ ಸಹಕಾರಿಯಾಗುತ್ತವೆ. ಬಾಳನಗೌಡರ ನೇತೃತ್ವದಲ್ಲಿ ಜಿಲ್ಲೆಯಲ್ಲಿ ಜಾನಪದ ಜಾಗೃತಿಯಾಗುತ್ತಿರುವುದು ಸಂತೋಷದಾಯಕವಾಗಿದೆ ಎಂದರು.
ಕನ್ನಡ ಮತ್ತು ಸಂಸ್ಕೃತಿ ಇಲಾಖೆ ವಿಶ್ರಾಂತ ನಿರ್ದೇಶಕ ಡಾ ಸೋಮಶೇಖರ ವಾಲಿ, ಉಪಪ್ರಾಚಾರ್ಯ ಪ್ರೊ ಎಸ್ ಎ ಪಾಟೀಲ ಮಾತನಾಡಿದರು.
ಕರ್ನಾಟಕ ಲಲಿತಕಲಾ ಅಕಾಡೆಮಿ ಸದಸ್ಯೆ ಶ್ರೀಮತಿ ರಾಜೇಶ್ವರಿ ಮೋಟಗಿ ಮತ್ತು ಡಾಕ್ಟರೇಟ್ ಪದವಿ ಪಡೆದ ಪ್ರೊ ಸುಭಾಸ ಕನ್ನೂರ ಇವರನ್ನು ಸನ್ಮಾನಿಸಲಾಯಿತು.
ಕನ್ನಡ ಜಾನಪದ ಪರಿಷತ್ ವಿಜಯಪುರ ಜಿಲ್ಲಾಧ್ಯಕ್ಷ ಬಾಳನಗೌಡ ಪಾಟೀಲ ಪ್ರಾಸ್ತಾವಿಕವಾಗಿ ಮಾತನಾಡಿ ಪ್ರತಿಷ್ಠಾನದ ಕಾರ್ಯ ವಿವರಿಸಿದರು.
ಉಪನ್ಯಾಸಕರಾದ ಪ್ರೊ ರಾಹುಲ್ ರಾಠೋಡ, ಪ್ರೊ ವಿಜಯಕುಮಾರ ತಳವಾರ ಮತ್ತು ಪ್ರೊ ರಶ್ಮಿ ಪಾಟೀಲ ಉಪಸ್ತಿತರಿದ್ದರು.
ಪ್ರೊ ದಾನಮ್ಮ ಗಿಡವೀರ ನಿರೂಪಿಸಿದರು. ಪ್ರೊ ಸ್ನೇಹಾ ಬೆನಕಟ್ಟಿ ಸ್ವಾಗತಿಸಿದರು. ಪ್ರೊ ಶಿವಾನಂದ ಮಠಪತಿ ವಂದಿಸಿದರು.

