ಉದಯರಶ್ಮಿ ದಿನಪತ್ರಿಕೆ
ಬೆಂಗಳೂರು: ಕನ್ನಡ ವಿಶ್ವ ಲಿಪಿಗಳ ರಾಣಿ. ಕನ್ನಡ ಸಾಹಿತ್ಯಕ್ಕೆ ದೊರೆತಷ್ಟು ಪ್ರಶಸ್ತಿ ಬೇರೆ ಯಾವ ಭಾಷೆಗೂ ದೊರೆತಿಲ್ಲ. ಕನ್ನಡ ಜಗತ್ತಿನ ಶ್ರೇಷ್ಠ ಮತ್ತು ಶ್ರೀಮಂತ ಭಾಷೆಗಳಲ್ಲಿ ಒಂದು ಎಂದು ಚಿತ್ರ ಸಾಹಿತಿ ಡಾ.ವಿ.ನಾಗೇಂದ್ರ ಪ್ರಸಾದ್ ಹೇಳಿದರು.
ಚಾಮರಾಜಪೇಟೆಯ ಕನ್ನಡ ಸಾಹಿತ್ಯ ಪರಿಷತ್ತಿನ ಕೃಷ್ಣರಾಜ ಪರಿಷತ್ಮಂದಿರದಲ್ಲಿ ನಬಿರೋಶನ್ ಪ್ರಕಾಶನ ಬೋರಗಿ ಹಾಗೂ ಶಾಫಿಯಾ ಪ್ರಕಾಶನ, ಆಲಮೇಲ ವತಿಯಿಂದ ಜರುಗಿದ ಕನ್ನಡ ರಾಜ್ಯೋತ್ಸವ ಸಂಭ್ರಮ ಹಾಗೂ ಪ್ರಶಸ್ತಿ ಪ್ರದಾನ ಸಮಾರಂಭ ಉದ್ಘಾಟಿಸಿ ಮಾತನಾಡಿದ ಅವರು, ಅಮೋಘ ವರ್ಷ ನೃಪತುಂಗ ಕಾವೇರಿಯಿಂದ ಗೋದಾವರಿವರೆಗೂ… ಎಂದು ಬರೆಯುವಾಗ ಜಗತ್ತಿನ ಇತರೆ ಭಾಷೆಗಳು ಇನ್ನೂ ತೊಟ್ಟಿಲಲ್ಲಿ ಇದ್ದವು ಎಂದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಹಿರಿಯ ಸಾಹಿತಿ ಡಾ.ಬರಗೂರು ರಾಮಚಂದ್ರಪ್ಪ ಮಾತನಾಡಿ, ಸಮಾನತೆ, ಧಾರ್ಮಿಕ ಸಾಮರಸ್ಯ, ಸೌಹಾರ್ದತೆ ಹಾಗೂ ಸಹಬಾಳ್ವೆ ಈ ಎಲ್ಲವನ್ನೂ ಕನ್ನಡ ಸಾಹಿತ್ಯ ಹೇಳುತ್ತಾ ಬಂದಿದೆ. ಇದನ್ನು ಜೀವನದಲ್ಲಿ ಅಳವಡಿಸಿಕೊಂಡಾಗ ನಾವು ನಿಜವಾದ ಕನ್ನಡಿಗರಾಗಲು ಸಾಧ್ಯ ಎಂದ ಅವರು ಎರಡು ಸಾವಿರ ವರ್ಷಗಳ ಇತಿಹಾಸ ಹೊಂದಿರುವ ಕನ್ನಡ ಭಾಷೆ, ಇಂಗ್ಲಿಷ್, ಹಿಂದಿ, ಸಂಸ್ಕೃತ ಸೇರಿದಂತೆ ಹಲವು ಭಾಷೆಗಳನ್ನು ಅರಗಿಸಿಕೊಂಡು ತನ್ನ ಜೀವ ಶಕ್ತಿಯನ್ನು ಪಡೆದುಕೊಂಡಿದೆ. ಇದರ ಅರ್ಥ ಆಳಲು ಬಂದವರನ್ನು ಅರಗಿಸಿಕೊಳ್ಳುವ ಶಕ್ತಿ ಕನ್ನಡಕ್ಕಿದೆ ಎಂದು ಹೇಳಿದರು.
ಸಾಹಿತಿ, ನಿವೃತ್ತ ಡಿಐಜಿಪಿ ಡಾ.ಡಿ.ಸಿ ರಾಜಪ್ಪ, ಯು.ಪಿ.ಎಸ್.ಸಿ ಸಾಧಕ ಶಾಂತಪ್ಪ ಕುರುಬರ, ಲೇಖಕಿ ಮಧುರಾ ಅಶೋಕ, ಇನ್ಸ್ಪೆಕ್ಟರ್ ಕೆ.ವಿಶ್ವನಾಥ್ ಮಾತನಾಡಿ, ನಬಿರೋಶನ್ ಪ್ರಕಾಶನ ಬೋರಗಿ ಹಾಗೂ ಶಾಫಿಯಾ ಪ್ರಕಾಶನ, ಆಲಮೇಲ ಈ ಎರಡು ಸಂಸ್ಥೆಗಳ ಮಾತೃ ಭಾಷೆ ಬೇರೆಯಾದರೂ, ಕಳೆದ ಹತ್ತು ವರ್ಷಗಳಿಂದ ಸತತವಾಗಿ ಕನ್ನಡ ನಾಡು, ನುಡಿ, ಸಾಹಿತ್ಯ, ಸಂಸ್ಕೃತಿ ಹಾಗೂ ಸೌಹಾರ್ದತೆಯ ಸೇತುವೆಯಾಗಿ ಕನ್ನಡ ಕಾಯಕದಲ್ಲಿ ತೊಡಗಿರುವುದು ಶ್ಲಾಘನೀಯ ಮತ್ತು ಮಾದರಿ ಎಂದರು. ಆರಕ್ಷಕ ಮೌಲಾಲಿ ಆಲಗೂರ ಪ್ರಸ್ತಾವಿಕ ಮಾತನಾಡಿದರು.
ಇದೇ ವೇಳೆ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಗೈದ ಹಲವು ಸಾಧಕರಿಗೆ ಸುವರ್ಣ ಕರ್ನಾಟಕ ರಾಜ್ಯ ಪ್ರಶಸ್ತಿ ಹಾಗೂ ರಾಜ್ಯೋತ್ಸವ ಪ್ರಶಸ್ತಿ ನೀಡಿ ಗೌರವಿಸಲಾಯಿತು. ಉಡುಪಿ ಖ್ಯಾತ ಯಕ್ಷಗಾನ ಕಲಾವಿದರಿಂದ ಯಕ್ಷಗಾನ ನೃತ್ಯ ಜರುಗಿತು.
ವೇದಿಕೆಯ ಮೇಲೆ ಡಾ.ಸಮೀರ ಹಾದಿಮನಿ, ಪುಷ್ಪಲತಾ, ರಮೇಶ ಭಂಟನೂರ, ನಿತ್ಯಾನಂದ ಕಟ್ಟಿಮನಿ, ಡಾ.ಸುರೇಶ್ ಕೋತಿ, ಸಬ್ ಇನ್ಸ್ಪೆಕ್ಟರ್ ಲಕ್ಷ್ಮೀ ಸೀತಾರಾಮ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.

