ಉದಯರಶ್ಮಿ ದಿನಪತ್ರಿಕೆ
ದೇವರಹಿಪ್ಪರಗಿ: ಪಟ್ಟಣ ಹಾಗೂ ಹೂವಿನಹಿಪ್ಪರಗಿ ನಡುವಿನ ರಸ್ತೆ ತಗ್ಗು ತುಂಬುವ ತುಂಡು ಗುತ್ತಿಗೆ ಕಾಮಗಾರಿಯಲ್ಲಿ ಅನಗತ್ಯ ಬೂದಿಯಂತಹ ಕಳಪೆ ಸಾಮಗ್ರಿ ಬಳಸದೇ ಉತ್ತಮವಾಗಿ ಕೆಲಸ ನಿರ್ವಹಿಸಲು ಸಾತಿಹಾಳ ಗ್ರಾಮಸ್ಥರು ಹಾಗೂ ಬೈಕ್ ಸವಾರರು ಆಗ್ರಹಿಸಿದ್ದಾರೆ.
ತಾಲ್ಲೂಕಿನ ಸಾತಿಹಾಳ ಡೋಣಿ ಸೇತುವೆಯಿಂದ ದಿಂಡವಾರ, ಅರಳಿಚಂಡಿ ಕ್ರಾಸ್ ನಡುವಿನ ರಸ್ತೆ ತಗ್ಗು ದಿನ್ನೆಗಳಿಂದ ತುಂಬಿದ್ದು ಬಹುತೇಕ ಹಾಳಾಗಿದೆ. ಈಗ ತಗ್ಗುದಿನ್ನೆಗಳನ್ನು ತುಂಬಿ ರಸ್ತೆ ಸರಿಪಡಿಸುವ ಕಾಮಗಾರಿ ಆರಂಭಗೊಂಡಿದೆ. ಆದರೆ ಕಾಮಗಾರಿಯಲ್ಲಿ ತಗ್ಗುಗಳನ್ನು ಗರ್ಸ್ಗಳಿಂದ ತುಂಬಿದ್ದು ಮೇಲುಗಡೆ ಬೂದಿಯನ್ನು ಹಾಕಿದ್ದು ಈಗ ಬೂದಿ ಗಾಳಿಗೆ ಹಾರುವುದರ ಮೂಲಕ ಪ್ರಯಾಣಿಕರಿಗೆ ಅಡ್ಡಿಯಾಗಿದೆ. ಈ ಕುರಿತು ಬೈಕ್ ಸವಾರ ಸೋಮನಗೌಡ ಬಿರಾದಾರ ಮಾತನಾಡಿ, ಕರಭಂಟನಾಳ ಕ್ರಾಸ್‌ನಿಂದ ಕಂದು ಬಣ್ಣದ ಬೂದಿಯನ್ನು ತೆಗ್ಗುಗಳಲ್ಲಿ ತುಂಬಿದ ಕಾರಣ ಮುಂದೆ ಬಸ್, ಲಾರಿ ಯಾವುದೇ ವಾಹನಗಳು ಹೋಗುವುದೇ ತಡ ರಸ್ತೆಯೆಲ್ಲಾ ಕಪ್ಪಾದ ಧೂಳಿನಿಂದ ತುಂಬಿ ಮೈ, ಅರಿವೆಗಳೆಲ್ಲಾ ಕಪ್ಪಾದವು ಎಂದು ಆಕ್ರೋಶ ವ್ಯಕ್ತಪಡಿಸಿದರು.
ಸಾತಿಹಾಳ ಗ್ರಾಮದ ಸಾಮಾಜಿಕ ಕಾರ್ಯಕರ್ತ ಪ್ರಕಾಶ ಡೋಣೂರ ಮಾತನಾಡಿ, ಈ ಕುರಿತು ನಾವು ಗುತ್ತಿಗೆದಾರರ ಮೇಲ್ವಿಚಾರಕರೊಂದಿಗೆ ಮಾತನಾಡಿದರೆ, ಕಪ್ಪುಬೂದಿ ನಾವು ಚೆಲ್ಲಿರುವುದಿಲ್ಲ. ಎನ್‌ಟಿಪಿಸಿ ಲಾರಿ ಹೋಗಿದೆ ಅವರೇ ಚೆಲ್ಲಿರಬಹುದು ಎಂಬ ಅನುಮಾನದ ಮಾತನ್ನು ಆಡಿದರು. ಒಂದು ವೇಳೆ ಎನ್‌ಟಿಪಿಸಿ ಲಾರಿ ಹೋಗಿದ್ದರೇ ರಸ್ತೆ ತಡೆಗಳಲ್ಲಿ ಹೇರಳವಾಗಿ ಬೀಳಬೇಕಿತ್ತು. ಆದರೆ ಎಲ್ಲಿಯೂ ಬೀಳದ ಕಪ್ಪುಬೂದಿ ಕೇವಲ ತಗ್ಗುಗಳಲ್ಲಿ ಮಾತ್ರ ಬಿದ್ದಿರುವುದನ್ನು ನೋಡಿದರೇ ಇದು ಕಾಮಗಾರಿ ಮಾಡುವವರ ಕಾರ್ಯವೇ ಆಗಿದೆ. ಈ ಬಗ್ಗೆ ನಾವು ಮಾಧ್ಯಮದವರ ಗಮನ ಸೆಳೆದಾಗ, ಮಾಧ್ಯಮದವರೊಂದಿಗೆ ಗುತ್ತಿಗೆದಾರರ ಪುತ್ರ ಅನುಚಿತವಾಗಿ ಮಾತನಾಡಿದ ಪ್ರಸಂಗವು ಜರುಗಿದೆ.
ತುಂಡುಗುತ್ತಿಗೆ ಕಾಮಗಾರಿ ಕುರಿತು ಸಹಾಯಕ ಇಂಜನೀಯರ್ ಹೇಳಿರುವಂತೆ ಇದು ೩೧ ಕಿ,ಮೀ ಕಾಮಗಾರಿ ಆಗಿದೆ ಎಂದು. ಆದರೆ ರಸ್ತೆ ಹಾಳಾಗಿದ್ದು ಸಾತಿಹಾಳದಿಂದ ಅರಳಿಚಂಡಿ ಕ್ರಾಸ್‌ವರೆಗೆ ಮಾತ್ರ ಇದು ೧೦ ಕಿ.ಮಿ ಇರಬಹುದು. ಇನ್ನೂಳಿದ ರಸ್ತೆಯನ್ನು ನೂತನವಾಗಿ ನಿರ್ಮಿಸಲಾಗಿದೆ.ನಿಲ್ಲಿಸಲಾಗಿದೆ ಹಾಗಿದ್ದರೆ ಇನ್ನೂ ೨೧ ಕಿ,ಮೀ ರಸ್ತೆ ಕಾಮಗಾರಿ ಎಲ್ಲಿ ನಡೆಯುತ್ತದೆಯೋ ತಿಳಿಯದಾಗಿದೆ. ಏನೇ ಆಗಲಿ ಸಂಬಧಿಸಿದ ಅಧಿಕಾರಿಗಳು, ಜನಪ್ರತಿನಿಧಿಗಳು ಕಾಮಗಾರಿ ಕುರಿತು ಅಗತ್ಯ ಕ್ರಮ ಕೈಗೊಂಡು ಕಳಪೆಯಾಗದ ಹಾಗೇ ನಿಗಾವಹಿಸುವಂತೆ ನಿಂಗಣ್ಣ ರೂಡಗಿ, ಮಲ್ಲಿಕಾರ್ಜುನ ಮೆಣಸಿನಕಾಯಿ, ರಮೇಶ ರೊಳ್ಳಿ ಸಹಿತ ಹಲವರು ಆಗ್ರಹಿಸಿದ್ದಾರೆ.

