ಉದಯರಶ್ಮಿ ದಿನಪತ್ರಿಕೆ
ದೇವರಹಿಪ್ಪರಗಿ: ತಾಲ್ಲೂಕಿನ ಕೋರವಾರ, ಜಾಲವಾದ, ಸೇರಿದಂತೆ ಎಲ್ಲಾ ಗ್ರಾಮಗಳಲ್ಲಿ ಕಳಪೆ ತೊಗರಿ ಬೀಜ ವಿತರಿಸಿದ ಕಂಪನಿಯನ್ನು ಕಪ್ಪು ಪಟ್ಟಿಗೆ ಸೇರಿಸಿ ನಷ್ಟಗೊಂಡ ರೈತರಿಗೆ ಪರಿಹಾರ ಅಥವಾ ವಿಮೆ ಹಣ ನೀಡುವಂತೆ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರುಸೇನೆ ಪದಾಧಿಕಾರಿಗಳು ತಹಶೀಲ್ದಾರ ಪ್ರಕಾಶ ಸಿಂದಗಿ ಅವರಿಗೆ ಮನವಿ ಸಲ್ಲಿಸಿದರು.
ಪಟ್ಟಣದ ತಹಶೀಲ್ದಾರ ಕಚೇರಿಗೆ ಸೋಮವಾರ ಆಗಮಿಸಿದ ರೈತಸಂಘ ಹಾಗೂ ಹಸಿರುಸೇನೆಯ ಪದಾಧಿಕಾರಿಗಳು ತೊಗರಿ ಬೆಳೆಯ ವಾಸ್ತವಿಕ ಅಂಶಗಳ ಕುರಿತು ಪೂರ್ಣ ಮಾಹಿತಿ ನೀಡಿದರು.
ಈ ಸಂದರ್ಭದಲ್ಲಿ ಜಿಲ್ಲಾಧ್ಯಕ್ಷ ಸಂಗಮೇಶ ಸಗರ ಮಾತನಾಡಿ, ಸರ್ಕಾರ ಕೃಷಿ ಇಲಾಖೆಯ ಮೂಲಕ ರೈತರಿಗೆ ಕೊಟ್ಟಿರುವ ತೊಗರಿ ಬೀಜ ಜಿಆರ್‌ಜಿ ೧೫೨ ಹಾಗೂ ೮೧೧ ಸಂಪೂರ್ಣ ಕಳಪೆಯಾಗಿವೆ. ಬೀಜ ಕಟ್ಟದೇ ಕೃಷಿಗೆ ಮಾಡಿರುವ ಸಾಲ ತೀರಿಸಲಾಗದೇ ರೈತರಿಗೆ ಚಿಂತೆಗೀಡುಮಾಡಿದೆ. ಇಂತಹ ಕಂಪನಿ ಮೋಸಗಳಿಂದ ನಷ್ಟಗೊಂಡ ರೈತರಿಗೆ ಪೂರ್ಣ ಪ್ರಮಾಣದ ಪರಿಹಾರ ನೀಡಲು ಸರ್ಕಾರ ಆದೇಶ ನೀಡಬೇಕು. ಇದರಲ್ಲಿ ಯಾವುದೇ ಮೋಸ, ವಂಚನೆ ಆಗಬಾರದು. ಇನ್ಸೂರೆನ್ಸ್ ಕಂಪನಿಗಳು ಸರಿಯಾಗಿ ಸಮೀಕ್ಷೆ ಮಾಡಿ ಯಾರಿಗೂ ಮೋಸವಾಗದಂತೆ ವಿಮೆ ನೀಡಬೇಕು ಎಂದು ಆಗ್ರಹಿಸಿದರು.
ತಾಲ್ಲೂಕು ಗೌರವಾಧ್ಯಕ್ಷ ಶಿವಾನಂದಯ್ಯ ಹಿರೇಮಠ, ಅಧ್ಯಕ್ಷ ಈರಪ್ಪ ಕುಳೇಕುಮಟಗಿ ಮಾತನಾಡಿ, ನಷ್ಟಗೊಂಡ ರೈತರಿಗೆ ಪೂರ್ತಿ ಪ್ರಮಾಣದ ಪರಿಹಾರ ನೀಡಿ ರೈತ ಸಮುದಾಯವನ್ನು ಉಳಿಸುವ ಕೆಲಸ ಮಾಡಬೇಕು. ಇಲ್ಲವಾದರೇ ಪಟ್ಟಣವನ್ನು ಬಂದ್ ಮಾಡಿ ಹೋರಾಟ ಮಾಡಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು.
ಮನವಿ ಸ್ವೀಕರಿಸಿದ ತಹಶೀಲ್ದಾರ ಪ್ರಕಾಶ ಸಿಂದಗಿ ರೈತರ ಸಮಸ್ಯೆಯನ್ನು ಸರ್ಕಾರದ ಗಮನಕ್ಕೆ ತರುವುದರ ಮೂಲಕ ಪರಿಹರಿಸುವ ಭರವಸೆ ನೀಡಿದರು.
ಮಲ್ಲನಗೌಡ ಬಿರಾದಾರ, ವಿದ್ಯಾನಂದ ಹಿರೇಮಠ, ಮಹಾದೇವಪ್ಪ ಬಿರಾದಾರ, ಹುಸೇನ್ ಗರಡಿಮನಿ ಸೋಮನಗೌಡ ಹೊಸಗೌಡ್ರ, ಶಿವಲಿಂಗಯ್ಯ ಹಿರೇಮಠ(ಆಲಗೂರ), ತುಳಜಾರಾಮ ಜಾಧವ, ಗುರಪ್ಪ ಹಾಗರಗಿ, ಶಂಕರಗೌಡ ಚಟ್ಟರಕಿ, ಎನ್.ಆರ್.ಚಿಂಚೋಳಿ, ಭೀಮನಗೌಡ ಬಿರಾದಾರ, ರಾಜಕುಮಾರ ಚಿಂಚೋಳಿ ಸಹಿತ ಸುತ್ತಮುತ್ತಲಿನ ವಿವಿಧ ಗ್ರಾಮಗಳ ರೈತರು ಇದ್ದರು.

