ಶ್ರೀ ಭಕ್ತ ಕನಕದಾಸರ ಜಯಂತೋತ್ಸವ | ಬಸವರಾಜ ಶ್ರೀಗಳ ಅಭಿಮತ
ಉದಯರಶ್ಮಿ ದಿನಪತ್ರಿಕೆ
ಸಿಂದಗಿ: ಜಗತ್ತಿಗೆ ಧರ್ಮದ ಬೆಳಕು ಚೆಲ್ಲಿದ್ದು ಕುರುಬ ಸಮಾಜ, ಸಮಾಜವನ್ನು ಜಾಗೃತಗೊಳಿಸಿ ಕನಕದಾಸರ ಸಾಹಿತ್ಯ ಮನೆ ಮನೆಗೆ ತಲುಪಿಸುವ ಕಾರ್ಯವಾಗಬೇಕು ಎಂದು ದಿವ್ಯ-ಸಾನಿಧ್ಯ ವಹಿಸಿದ ಮನಸೂರ ರೇವಣಸಿದ್ದೇಶ್ವರ ಮಹಾಮಠದ ಜಗದ್ಗುರು ಬಸವರಾಜ ದೇವರು ಮಹಾಸ್ವಾಮಿಗಳು ಹೇಳಿದರು.
ಸಿಂದಗಿ ಪಟ್ಟಣದ ಸಾರಂಗಮಠದ ಆವರಣದಲ್ಲಿ ಹಾಲುಮತ ಸಮುದಾಯ ಹಮ್ಮಿಕೊಂಡ ಸಂತ ಶ್ರೇಷ್ಠ ಭಕ್ತ ಕನಕದಾಸರ ಜಯಂತೋತ್ಸವ ಕಾರ್ಯಕ್ರಮದ ದಿವ್ಯ ಸಾನಿಧ್ಯ ವಹಿಸಿ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.
ಮಾನವ ಮೌಲ್ಯವನ್ನು ವಿಶ್ವಕ್ಕೆ ಬಿತ್ತಿದ ಮಾಹಾನ್ ಚೇತನ ಕನಕದಾಸರು. ದಾಸ ಸಾಹಿತ್ಯದಲ್ಲೇ ಶ್ರೇಷ್ಠರು. ಅವರ ಚಿಂತನೆಗಳು ನಮಗೆ ದಾರಿದೀಪ. ಅವರು ಹಾಕಿಕೊಟ್ಟ ಮಾರ್ಗ ವಿಶ್ವಕ್ಕೆ ಮಾದರಿಯಾಗಬೇಕು. ಯುವಕರು ದುಶ್ಚಟಗಳನ್ನು ಬದಿಗೊತ್ತಿ ಕನಕರ ಹಾದಿಯಲ್ಲಿ ನಡೆದು ಸುಂದರವಾದ ಬದುಕನ್ನು ಕಟ್ಟಿಕೊಳ್ಳಬೇಕು ಎಂದರು.
ಈ ವೇಳೆ ಸಿ.ಎಂ.ಮನಗೂಳಿ ಪದವಿ ಮಹಾವಿದ್ಯಾಲಯದ ಪ್ರಾಧ್ಯಾಪಕ ಡಾ.ಅರವಿಂದ ಮನಗೂಳಿ ಮಾತನಾಡಿ, ಹಾಲುಮತ ಸಮುದಾಯ ಹಾಲಿನಷ್ಟೇ ಪವಿತ್ರವಾದುದ್ದು, ವಿಷ ಕೊಟ್ಟವರಿಗೂ ಹಾಲುಣಿಸುವ ಭಾವನೆ ಉಳ್ಳಂತ ಸಮಾಜ ಹಾಲುಮತ ಸಮಾಜ. ಈ ಸಮುದಾಯದಲ್ಲಿ ಹೆಚ್ಚಿನ ಮಹಿಳೆಯರು ಶಿಕ್ಷಣದಿಂದ ವಂಚಿತರಾಗುತ್ತಿದ್ದಾರೆ. ಅಸ್ತಿ ಹುಡುಕಿ ಮದುವೆ ಮಾಡುವ ಮೊದಲು ನಿಮ್ಮ ಮಕ್ಕಳನ್ನೇ ಆಸ್ತಿಯನ್ನಾಗಿಸಿ ಮಾಡಬೇಕು ಎಂದು ಕಳಕಳಿ ವ್ಯಕ್ತಪಡಿಸಿದರು.
ಕಾರ್ಯಕ್ರಮದಲ್ಲಿ ಬೋರಗಿ ಶ್ರೀಮಠದ ತಪೋರತ್ನ ಮಹಾಲಿಂಗೇಶ್ವರ ಸ್ವಾಮಿಗಳು ಸಾನಿಧ್ಯ ವಹಿಸಿದ್ದರು. ಶ್ರೀ ಕನ್ನಯ್ಯಮುತ್ಯಾ, ತಾಲೂಕ ಕುರುಬ ಸಂಘದ ತಾಲೂಕಾಧ್ಯಕ್ಷ ನಿಂಗಣ್ಣ ಬಿರಾದಾರ, ಸುದರ್ಶನ್ ಜಂಗಾಣ್ಣಿ, ಡಿಎಸ್‌ಎಸ್ ಜಿಲ್ಲಾ ಸಂಚಾಲಕ ವೈ.ಸಿ.ಮಯೂರ್, ಮಲ್ಲಣ್ಣ ಸಾಲಿ, ಸಿದ್ದು ಬುಳ್ಳಾ, ನಾಗಪ್ಪ ಶಿವೂರ, ಮಲ್ಲು ಸಾವಳಸಂಗ, ಗೌಡು ಪೂಜಾರಿ, ಕೆಂಚಪ್ಪ ಕತ್ನಳ್ಳಿ, ಶಿಲ್ಪಾ ಕುದರಗೊಂಡ, ಸಿದ್ದು ಕೆರಿಗೊಂಡ, ಪ್ರಕಾಶ್ ಹಿರೇಕುರುಬರ್, ಸಿದ್ದು ಬಿರಗೊಂಡ ಸೇರಿದಂತೆ ಅನೇಕರು ಇದ್ದರು.
ಭವ್ಯ ಮೆರವಣಿಗೆ
ಕನಕದಾಸರ ಮೆರವಣಿಗೆಗೆ ಪುರಸಭೆ ಅಧ್ಯಕ್ಷ ಶಾಂತವೀರ ಬಿರಾದಾರ ಬಸವೇಶ್ವರ ವೃತ್ತದಲ್ಲಿ ಚಾಲನೆ ನೀಡಿದರು. ಬಸವೇಶ್ವರ ವೃತ್ತದಿಂದ ಪ್ರಾರಂಭವಾಗಿ ಡಾ.ಅಂಬೇಡ್ಕರ್ ವೃತ್ತದ ಮಾರ್ಗವಾಗಿ, ಟಿಪ್ಪು ಸುಲ್ತಾನ್ ವೃತ್ತ, ತೋಂಟದ ಸಿದ್ದಲಿಂಗ ಶ್ರೀಗಳ ರಸ್ತೆಯ ಮುಖ್ಯ ಬಜಾರದಿಂದ ಡೊಳ್ಳು ಕುಣಿತ, ಕುದುರೆ ಕುಣಿತ ಸಕಲ ವಾದ್ಯದೊಂದಿಗೆ ಮುಖ್ಯ ವೇದಿಕೆಗೆ ಬಂದು ತಲುಪಿತು. ಕನಕದಾಸರ ಹಾಡಿಗೆ ವಿವಿಧ ರಾಜಕೀಯ ವ್ಯಕ್ತಿಗಳು ಜ್ಯಾತ್ಯಾತೀತವಾಗಿ ಕುಣಿದು ಕುಪ್ಪಳಿಸಿದ್ದು ವಿಶೇಷವಾಗಿತ್ತು.

