ಹರಳಯ್ಯ ಪ್ರೌಢಶಾಲೆಗೆ ವಿಷಯ ಪರಿವೀಕ್ಷಕರ ಅನಿರೀಕ್ಷಿತ ಭೇಟಿ | ಎಸ್ಸೆಸ್ಸೆಲ್ಸಿ ಮಕ್ಕಳ ಜೊತೆ ಸಂವಾದ | ಬದ್ದತೆಯಿಂದ ಪರೀಕ್ಷೆ ಎದುರಿಸಲು ಸಲಹೆ
ಉದಯರಶ್ಮಿ ದಿನಪತ್ರಿಕೆ
ಚಿಕ್ಕಪಡಸಲಗಿ: ಪ್ರಸ್ತುತ 2024-25 ನೇ ಸಾಲಿನ ಎಸ್ಸೆಸ್ಸೆಲ್ಸಿ ಪರೀಕ್ಷಾ ತಯಾರಿಗೆ ಮಕ್ಕಳು ಈಗಿಂದಲೇ ಮಾನಸಿಕವಾಗಿ ಸಿದ್ದತೆಗೊಳ್ಳಬೇಕು. ಆ ದಿಸೆಯಲ್ಲಿ ಎಲ್ಲ ಎಸ್ಸೆಸ್ಸೆಲ್ಸಿ ಮಕ್ಕಳನ್ನು ಪರೀಕ್ಷಾ ಮುಖ್ಯ ವಾಹಿನಿಗೆ ತರಲು ಶಿಕ್ಷಕರು ಪ್ರಯತ್ನಿಸಬೇಕಲ್ಲದೇ ಫಲಿತಾಂಶ ಸುಧಾರಣೆಗೆ ನಿರಂತರ ಶ್ರಮ ವಹಿಸಬೇಕು ಎಂದು ಬಾಗಲಕೋಟೆ ಶಾಲಾ ಶಿಕ್ಷಣ ಇಲಾಖೆ ಉಪನಿದೇ೯ಶಕರ ಕಚೇರಿಯ ವಿಷಯ ಪರಿವೀಕ್ಷಕ ಎಂ.ಎಸ್.ನ್ಯಾಮಗೌಡ ಸಲಹೆಯಿತ್ತರು.
ಗ್ರಾಮದಲ್ಲಿ ಗದುಗಿನ ತೋಂಟದಾರ್ಯ ವಿದ್ಯಾಪೀಠ ಸಂಸ್ಥೆಯ ಶಿವಶರಣ ಹರಳಯ್ಯ ಸ್ಮಾರಕ ಪ್ರೌಢಶಾಲೆಗೆ ಶುಕ್ರವಾರ ಅನಿರೀಕ್ಷಿತ ಭೇಟಿ ನೀಡಿ ಮಕ್ಕಳ ಶೈಕ್ಷಣಿಕ ಗುಣಮಟ್ಟ ಪರಿಶೀಲಿಸಿ ಅವರು ಮಾತನಾಡಿದರು.
ಎಸ್ಸೆಸ್ಸೆಲ್ಸಿ ಮಕ್ಕಳ ಜೊತೆಗೆ ಪರೀಕ್ಷಾ ಪೂರ್ವ ತಯಾರಿ ಹಾಗೂ ಪಠ್ಯ ವಿಷಯ ಕುರಿತು ಸಂವಾದ ನಡೆಸಿದ ಅವರು, ಪರೀಕ್ಷೆಗೆ ಸಿದ್ದರಾಗಲು ಈಗಿನಿಂದಲೇ ಸಕಲ ಓದಾಭ್ಯಾಸದ ತಯಾರಿ ಮಾಡಿಕೊಳ್ಳಬೇಕು. ಆತ್ಮವಿಶ್ವಾಸದಿಂದ ಪರೀಕ್ಷೆ ಎದುರಿಸಲು ಸನ್ನದ್ಧರಾಗಬೇಕು ಎಂದು ಮಕ್ಕಳಿಗೆ ಸಲಹೆ ನೀಡಿದರು.
ಮಕ್ಕಳ ಕಲಿಕಾ ಹಾಗೂ ಫಲಿತಾಂಶ ಪ್ರಗತಿಗೆ ಶಿಕ್ಷಕರು ಒತ್ತು ನೀಡಬೇಕು. ಈ ಬಾರಿ ಗ್ರೇಡ್ ಅಂಕಗಳಿಲ್ಲ.ಪರೀಕ್ಷಾ ವ್ಯವಸ್ಥೆಯಲ್ಲಿ ಬದಲಾವಣೆಗಳಾಗಿವೆ. ಕಟ್ಟುನಿಟ್ಟಾಗಿ ಪರೀಕ್ಷೆಗಳು ಜರುಗಲಿವೆ. ಇದನ್ನು ಮಕ್ಕಳು ಹಾಗೂ ಶಿಕ್ಷಕರು ಸೂಕ್ಷ್ಮತೆಯಿಂದ ಗಮನಿಸಿ ತಮ್ಮ ಜವಾಬ್ದಾರಿಗಳನ್ನು ನಿಭಾಯಿಸಲು ಮುಂದಾಗಬೇಕು ಎಂದರು.
ವಿಜ್ಞಾನ ವಿಷಯದ ಪಾಠ ಪ್ರವಚನ ನಡೆಸಿದ ನ್ಯಾಮಗೌಡ, ಮಕ್ಕಳಿಗೆ ಹಲ ಪ್ರಶ್ನೆಗಳನ್ನು ಕೇಳಿ ಸಮರ್ಪಕ ಉತ್ತರ ಪಡೆದರು. ಕಲಿಕೆಯಲ್ಲಿ ಹಿಂದುಳಿದ ಮಕ್ಕಳನ್ನು ಗುರುತಿಸಿ ಅವರ ಬಗ್ಗೆ ವಿಶೇಷ ನಿಗಾವಹಿಸಿ ಪ್ರಗತಿ ಕಂಡುಕೊಳ್ಳಬೇಕೆಂದು ಶಿಕ್ಷಕ ಬಳಗಕ್ಕೆ ಸಲಹೆ ನೀಡಿದರು.
ಪ್ರತಿಯೊಬ್ಬ ಶಿಕ್ಷಕರು ನಿಮ್ಮ ವಿಷಯಕ್ಕೆ ಹಾಗೂ ಫಲಿತಾಂಶಕ್ಕೆ ಹೊಸಬೆಳಕಿನ ಸ್ಪರ್ಶ ನೀಡಬೇಕು. ಆ ಹಿನ್ನೆಲೆಯಲ್ಲಿ ಮಕ್ಕಳ ಭವಿಷ್ಯತ್ತಿನ ಏಳಿಗೆ ಚೈತನ್ಯಭರಿತವಾಗಿರಲು ಶಿಕ್ಷಣದ ಅಮೃತ ಸಿಂಚನ ಉಣಬಡಿಸಿ, ಅಂಥದೊಂದು ವಿಶೇಷತೆ ಮೂಡಿಸುವ ಹೊಣೆಗಾರಿಕೆ ಸಮಸ್ತ ಶಿಕ್ಷಕರ ಮೇಲಿದೆ. ಮಕ್ಕಳಿಗೆ ನಮ್ಮಿಂದ ಏನಾದರೂ ಉತ್ತಮ ಕೊಡುಗೆ ನೀಡಬೇಕು. ಆ ನಿಟ್ಟಿನಲ್ಲಿ ಶಿಕ್ಷಕ ಬಳಗದವರು ಸಂಕಲ್ಪ ಮಾಡಬೇಕೆಂದು ಕಿವಿಮಾತು ಹೇಳಿದರು.
ನಿತ್ಯ ಬೆಳಿಗಿನ ಜಾವ ಎಸ್ಸೆಸ್ಸೆಲ್ಸಿ ಮಕ್ಕಳ ಪೋಷಕರಿಗೆ ಪೋನ ಕರೆ ಮಾಡಲಾಗುತ್ತಿದೆ. ಮಕ್ಕಳನ್ನು ಎಬ್ಬಿಸಿ ಅಭ್ಯಾಸದಲ್ಲಿ ನಿರತರಾಗುವಂತೆ ಮುತುವರ್ಜಿ ವಹಿಸಬೇಕೆಂದು ಕೋರಲಾಗುತ್ತಿದೆ. ತಮ್ಮ ಶಿಕ್ಷಕರ ಕರೆಗೆ ಸ್ಪಂದಿಸಿ ಮಕ್ಕಳನ್ನು ಎಬ್ಬಿಸಿ ಅಭ್ಯಾಸ ಪ್ರಕ್ರಿಯೆಯಲ್ಲಿ ಪಾಲಕರು ಸಹಕಾರ ನೀಡುತ್ತಿದ್ದಾರೆ.ಶಾಲೆಯಲ್ಲಿ ಗುಂಪು ಅಭ್ಯಾಸ, ರಸಪ್ರಶ್ನೆ, ಸಂಪನ್ಮೂಲ ವ್ಯಕ್ತಿಗಳಿಂದ ವಿಶೇಷ ಪಾಠ ಪ್ರವಚನ ನಡೆಸಲಾಗುತ್ತಿದೆ.ಮಕ್ಕಳ ಅಭ್ಯುದಯಕ್ಕೆ ಇಲ್ಲಿ ಕಾಳಜಿ ವಹಿಸಲಾಗಿದೆ ಎಂದು ಪ್ರಭಾರ ಮುಖ್ಯೋಪಾಧ್ಯಾಯ ಬಸವರಾಜ ಜಾಲೋಜಿ ಈ ವೇಳೆ ವಿಷಯ ಪರಿವೀಕ್ಷಕರಿಗೆ ಮಾಹಿತಿ ನೀಡಿದರು.
ಈ ಸಂದರ್ಭದಲ್ಲಿ ವಿಷಯ ಪರಿವೀಕ್ಷಕರಾದ ಎಂ.ಎಸ್.ನ್ಯಾಮಗೌಡ ಅವರನ್ನು ಶಾಲೆ,ಸಂಸ್ಥೆಯ ಪರವಾಗಿ ಮುಖ್ಯ ಶಿಕ್ಷಕ ಬಸವರಾಜ ಜಾಲೋಜಿ ಹಾಗೂ ಸಿಬ್ಬಂದಿಗಳು ಶಾಲು ಹೊದಿಸಿ ಸನ್ಮಾನಿಸಿ ಗೌರವಿಸಿದರು. ವಿಶ್ರಾಂತ ಹಿರಿಯ ಶಿಕ್ಷಕ ಬಸವರಾಜ ಜಾಲೋಜಿ, ಗುಲಾಬಚಂದ ಜಾಧವ, ಈರಪ್ಪ ದೇಸಾಯಿ, ಲೋಹಿತ ಮಿಜಿ೯, ಶ್ರೀಶೈಲ ಹುಣಶಿಕಟ್ಟಿ, ಸಹನಾ ಕಲ್ಯಾಣಿ (ಹತ್ತಳ್ಳಿ), ಪ್ರಮೀಳಾ ತೇಲಸಂಗ ಇತರರಿದ್ದರು.

