ಉದಯರಶ್ಮಿ ದಿನಪತ್ರಿಕೆ
ವಿಜಯಪುರ: ನಗರದ ಜೋರಾಪುರಪೇಠ ಮರಗಮ್ಮ ದೇವಸ್ಥಾನ ಜಿರ್ಣೋದ್ದಾರಕ್ಕೆ ಶಾಸಕ ನಿಧಿಯಲ್ಲಿ ರೂ.10 ಲಕ್ಷ ಅನುದಾನ ನೀಡಲಾಗುವುದು ಎಂದು ನಗರ ಶಾಸಕ ಬಸನಗೌಡ ಪಾಟೀಲ ಯತ್ನಾಳ ತಿಳಿಸಿದರು.
ವಿಜಯಪುರ ನಗರದ ವಾರ್ಡ್ ನಂ.32 ರಲ್ಲಿ ಬರುವ ಜೋರಾಪುರಪೇಠದಲ್ಲಿ ಶುಕ್ರವಾರ ಜೋಗಿ ಸಮಾಜದ ವತಿಯಿಂದ ಹಮ್ಮಿಕೊಂಡಿದ್ದ ಮರಗಮ್ಮ ದೇವಸ್ಥಾನ ಜಿರ್ಣೋದ್ದಾರ ಕಾಮಗಾರಿಗೆ ಭೂಮಿಪೂಜೆ ನೆರವೇರಿಸಿ ಅವರು ಮಾತನಾಡಿದರು.
ನಗರದ ಅಭಿವೃದ್ಧಿಯ ಜೊತೆಗೆ ಬಹುತೇಕ ದೇವಸ್ಥಾನಗಳ ಜೀರ್ಣೋದ್ದಾರ, ಎಲ್ಲ ಸಮಾಜದ ಸಮುದಾಯ ಭವನಗಳ ನಿರ್ಮಾಣಕ್ಕೆ ರೂ.10 ರಿಂದ 20 ಲಕ್ಷ ಅನುದಾನ ನೀಡಲಾಗಿದೆ. ಉಳಿದಿರುವ ದೇವಸ್ಥಾನಗಳಿಗೂ ಹಂತ ಹಂತವಾಗಿ ಅನುದಾನ ನೀಡಲಾಗುವುದು ಎಂದರು.
ಬಬಲೇಶ್ವರ ನಾಕಾದಿಂದ ನೀರಿನ ಟ್ಯಾಂಕ್ ವರೆಗೆ ಬಜಂತ್ರಿ ಓಣಿ ಸ್ಲಂ ಘೋಷಣೆಯಾಗಿದ್ದು, ಬಡವರಿಗೆ ಸೂರು ಕಲ್ಪಿಸಲಾಗುವುದು ಎಂದು ತಿಳಿಸಿದರು.
ಮಹಾನಗರ ಪಾಲಿಕೆ ಸದಸ್ಯರಾದ ಶಿವರುದ್ರ ಬಾಗಲಕೋಟ, ನಮ್ಮ ವಾರ್ಡ್ ದಲ್ಲಿ ಎಲ್ಲ ದೇವಸ್ಥಾನಗಳ ಜಿರ್ಣೋದ್ದಾರದ ಜೊತೆಗೆ ಸ್ಮಶಾನಗಳ ಅಭಿವೃದ್ಧಿ ಕೂಡ ಬಸನಗೌಡ ಪಾಟೀಲ ಯತ್ನಾಳ ರವರ ಅವಧಿಯಲ್ಲೇ ಆಗಿರುವುದು. ನಮ್ಮ ವಾರ್ಡ್ ಮೇಲೆ ವಿಶೇಷ ಕಾಳಜಿ ಇಟ್ಟಿರುವ ನಮ್ಮ ಹೆಮ್ಮೆಯ ಶಾಸಕರಿಗೆ ಋಣಿಯಾಗಿ ಇರುತ್ತೇವೆ ಎಂದು ಶ್ಲಾಘನೀಯ ವ್ಯಕ್ತಪಡಿಸಿದರು.
ಇದೇ ವೇಳೆ ನೆರೆದ ಸಾರ್ವಜನಿಕರ ಅಹವಾಲು ಆಲಿಸಿದರು.
ಈ ಸಂದರ್ಭದಲ್ಲಿ ಮಹಾನಗರ ಪಾಲಿಕೆ ಸದಸ್ಯ ಪ್ರೇಮಾನಂದ ಬಿರಾದಾರ, ಜೋಗಿ ಸಮಾಜದ ಅಧ್ಯಕ್ಷ ನಾನಾ ಕಾಸರ, ಮುಖಂಡರಾದ ತುಕಾರಾಮ ಹಿಂಗಮೋರೆ, ಸಂದೀಪ ಕಾಳೆ, ಶ್ರೀನಿವಾಸ ಶಹಾಪುರ, ಸಂತೋಷ ಹೋಟಕಾರ ಸೇರಿದಂತೆ ಪಕ್ಷದ ಮುಖಂಡರು, ಕಾರ್ಯಕರ್ತರು, ಅಭಿಮಾನಿಗಳು, ಮಹಿಳೆಯರು ಉಪಸ್ಥಿತರಿದ್ದರು.

