ಅಕ್ಕಮಹಾದೇವಿ ಮಹಿಳಾ ವಿವಿಯಲ್ಲಿ ೧೯ನೇ ಅಂತರ್ ಮಹಾವಿದ್ಯಾಲಯಗಳ ಯುವಜನೋತ್ಸವ ‘ಶಕ್ತಿ ಸಂಭ್ರಮ’ ಸಮಾರೋಪ
ಉದಯರಶ್ಮಿ ದಿನಪತ್ರಿಕೆ
ವಿಜಯಪುರ: ಇಂದಿನ ದಿನಮಾನದಲ್ಲಿ ನಮ್ಮ ಸಾಂಸ್ಕೃತಿಕ ಕಲೆಗಳು ಮರೆಯಾಗುತ್ತಿದ್ದು, ಇಂತಹ ಯುವಜನೋತ್ಸವ ಕಾರ್ಯಕ್ರಮಗಳು ನಮ್ಮ ಕಲೆಗಳನ್ನು ಉಳಿಸಿ ಬೆಳೆಸುವಂತೆ ಮಾಡುತ್ತಿರುವುದು ಸಂತಸದ ವಿಷಯ ಎಂದು ರಾಷ್ಟ್ರೀಯ ಯುವ ಪ್ರಶಸ್ತಿ ಪುರಸ್ಕೃತ ಸಂಘದ ಅಧ್ಯಕ್ಷ ಡಾ.ಜಾವೀದ ಜಮಾದಾರ ಹೇಳಿದರು.
ನಗರದ ಕರ್ನಾಟಕ ರಾಜ್ಯ ಅಕ್ಕಮಹಾದೇವಿ ಮಹಿಳಾ ವಿಶ್ವವಿದ್ಯಾನಿಲಯದಲ್ಲಿ ಆಯೋಜಿಸಿರುವ ೧೯ನೇ ಅಂತರ್ ಮಹಾವಿದ್ಯಾಲಯಗಳ ಯುವಜನೋತ್ಸವ ‘ಶಕ್ತಿ ಸಂಭ್ರಮ’ ಸಮಾರೋಪ ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಅವರು ಮಾತನಾಡಿದರು.
ಪ್ರಸ್ತುತ ಕಾಲದಲ್ಲಿ ನಾವೆಲ್ಲರೂ ಪಾಶ್ಚಿಮಾತ್ಯ ಸಂಸ್ಕೃತಿಗೆ ಮಾರು ಹೋಗುವ ಮೂಲಕ ನಮ್ಮ ಸಂಸ್ಕೃತಿ, ಕಲೆ, ಭಾಷೆ ಎಲ್ಲವನ್ನು ಮರೆಯುತ್ತಿದ್ದೇವೆ. ಅದರಲ್ಲೂ ಇಂದಿನ ಯುವಜನತೆಗೆ ನಮ್ಮ ಸಾಂಸ್ಕೃತಿಕ ಕಲೆಗಳ ಬಗ್ಗೆ ತಿಳುವಳಿಕೆಯೆ ಇರದ ಮಟ್ಟಿಗೆ ನಾವೆಲ್ಲರೂ ತಲುಪಿದ್ದೇವೆ. ಇಂತಹ ಸಂದರ್ಭದಲ್ಲಿ ನಮ್ಮ ಸಂಸ್ಕೃತಿ, ಕಲೆಯನ್ನು ಬೆಳೆಸುವ ಜವಾಬ್ದಾರಿ ನಮ್ಮ ಮೇಲಿದೆ. ನಮ್ಮ ಅಕ್ಕಮಹಾದೇವಿ ಮಹಿಳಾ ವಿಶ್ವವಿದ್ಯಾನಿಲಯದ ವತಿಯಿಂದ ಈ ರೀತಿಯ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವ ಮೂಲಕ ಯುವಜನತೆಯಲ್ಲಿ ನಮ್ಮ ಸಾಂಸ್ಕೃತಿಕ ಕಲೆಗಳ ಬಗ್ಗೆ ಅರಿವು ಮೂಡಿಸುತ್ತಿರುವುದು ಹೆಮ್ಮೆಯ ವಿಷಯ. ಅತ್ಯಂತ ಅಚ್ಚುಕಟ್ಟಾಗಿ ಈ ಶಕ್ತಿ ಸಂಭ್ರಮವನ್ನು ಹಮ್ಮಿಕೊಂಡಿದ್ದಾರೆ. ಹೀಗೆ ಮುಂಬರುವ ದಿನಗಳಲ್ಲಿ ನಾವು ಕೂಡ ಈ ಶಕ್ತಿ ಸಂಭ್ರಮ ಸಮಾರಂಭಕ್ಕೆ ಸಹಕಾರ ನೀಡಲು ಇಚ್ಛಿಸುತ್ತೇವೆ ಎಂದು ಹೇಳಿದರು.
ಇದೇ ಸಂದರ್ಭದಲ್ಲಿ ವಿವಿಯ ಸಿಂಡಿಕೇಟ್ ಸದಸ್ಯ ಡಾ.ಎಸ್.ಜೆ.ಮಾಡ್ಯಾಳ ಮಾತನಾಡಿ, ಕರ್ನಾಟಕ ರಾಜ್ಯದಲ್ಲಿ ಇರುವ ಏಕೈಕ ಮಹಿಳಾ ವಿಶ್ವವಿದ್ಯಾನಿಲಯ ನಮ್ಮದು. ಇಂದಿನ ದಿನಮಾನದಲ್ಲಿ ಮಹಿಳೆಯರು ಎಲ್ಲ ಕ್ಷೇತ್ರದಲ್ಲಿಯೂ ಮುಂದೆ ಇರುವ ಮೂಲಕ ಸಾಧನೆಯಲ್ಲಿ ತಮ್ಮದೇ ಆದ ಛಾಪು ಮೂಡಿಸುತ್ತಿದ್ದಾರೆ. ಅವರಿಗೆ ಇನ್ನು ಹೆಚ್ಚಿನ ಅವಕಾಶಗಳು ಸಿಗಬೇಕು. ಎಲ್ಲ ಸಾಮಾಜಿಕ ಸಮಸ್ಯೆಗಳನ್ನು ತೊಡೆದು ಹಾಕಿ ಮಹಿಳೆಯರು ಮುಂದೆ ಬರಬೇಕು ಎಂದು ಆಶಯ ವ್ಯಕ್ತಪಡಿಸಿದರು.
ವಿದ್ಯಾರ್ಥಿನಿಯರು ಹೆಚ್ಚಿನ ಸಂಖ್ಯೆಯಲ್ಲಿ ಪಠ್ಯೇತರ ಚಟುವಟಿಕೆಗಳಲ್ಲಿ ಭಾಗವಹಿಸುವ ಮೂಲಕ ವ್ಯಕ್ತಿತ್ವ ವಿಕಸನ ಮಾಡಿಕೊಳ್ಳಬೇಕು ಎಂದರು.
ಮೌಲ್ಯಮಾಪನ ಕುಲಸಚಿವ ಪ್ರೊ.ಎಚ್.ಎಂ.ಚಂದ್ರಶೇಖರ್ ಮಾತನಾಡಿ, ನಮ್ಮ ವಿವಿಯು ಈ ಯುವಜನೋತ್ಸವ ‘ಶಕ್ತಿ ಸಂಭ್ರಮ’ವು ಸಾಂಸ್ಕೃತಿಕ ಜಾತ್ರೆಯಂತೆ ಕಂಗೊಳಿಸುತ್ತಿತ್ತು. ಇಂತಹ ಸ್ಪರ್ಧೆಗಳಲ್ಲಿ ಸೋಲು-ಗೆಲುವು ಸಾಮಾನ್ಯ. ಆದರೆ ನೀವೆಲ್ಲರೂ ಇಲ್ಲಿಯವರೆಗೂ ಬಂದು ಭಾಗವಹಿಸುವುದು ಮುಖ್ಯ ಎಂದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಮಹಿಳಾ ವಿವಿಯ ಕುಲಪತಿ ಪ್ರೊ.ಬಿ.ಕೆ.ತುಳಸಿಮಾಲ ಮಾತನಾಡಿ, ಈ ವೇದಿಕೆ ಮೇಲೆ ಅತ್ಯಂತ ಹೆಮ್ಮೆ ಮತ್ತು ಸಾರ್ಥಕತೆಯ ಭಾವದಿಂದ ನಾನು ನಿಂತಿದ್ದು, ಈ ಮೂರು ದಿನದ ಸಂಭ್ರಮ ನೋಡಿ ಅತೀವ ಸಂತಸವಾಗಿದೆ. ವಿವಿಧ ಕಾಲೇಜುಗಳಿಂದ ಆಗಮಿಸಿದ ಹಲವಾರು ವಿದ್ಯಾರ್ಥಿಗಳು ಈ ವೇದಿಕೆ ಮೂಲಕ ತಮ್ಮ ಪ್ರತಿಭೆಗಳನ್ನು ಅನಾವರಣಗೊಳಿಸಿದ್ದಾರೆ. ಇದು ತಮ್ಮ ಪ್ರತಿಭೆಯನ್ನು ಮತ್ತಷ್ಟು ಬೆಳೆಸಿಕೊಳ್ಳುವಲ್ಲಿ ಈ ವೇದಿಕೆ ಸಾಕ್ಷಿಯಾಗಿದ್ದು ಅತ್ಯಂತ ಖುಷಿಯ ವಿಚಾರ ಎಂದು ಹೇಳಿದರು.
ಸಮಾರಂಭದಲ್ಲಿ ವಿವಿಧ ಕಾಲೇಜಿನಿಂದ ಆಗಮಿಸಿದ ಪ್ರಾಧ್ಯಾಪಕರು, ವ್ಯವಸ್ಥಾಪಕರು ಹಾಗೂ ವಿದ್ಯಾರ್ಥಿನಿಯರು ಯುವಜನೋತ್ಸವ ‘ಶಕ್ತಿ ಸಂಭ್ರಮ’ದ ಕುರಿತು ಅನಿಸಿಕೆಗಳನ್ನು ವ್ಯಕ್ತಪಡಿಸಿದರು
ಕಾರ್ಯಕ್ರಮದಲ್ಲಿ ವಿವಿಯ ತಾಂತ್ರಿಕ ಸಮಿತಿಯ ಸದಸ್ಯರು, ವಿವಿಧ ಕಾಲೇಜಿನಿಂದ ಆಗಮಿಸಿದ ಪ್ರಾಧ್ಯಾಪಕರು, ವಿದ್ಯಾರ್ಥಿಯರು, ವ್ಯವಸ್ಥಾಪಕರು, ಸಿಂಡಿಕೇಟ್ ಹಾಗೂ ಅಕಾಡೆಮಿಕ್ ಕೌನ್ಸಿಲ್ ಸದಸ್ಯರು, ವಿವಿಧ ವಿಭಾಗಗಳ ಮುಖ್ಯಸ್ಥರು, ಡೀನರು, ಪ್ರಾಧ್ಯಾಪಕರು, ಬೋಧಕ ಮತ್ತು ಬೋಧಕೇತರ ಸಿಬ್ಬಂದಿ ವರ್ಗ ಹಾಗೂ ಸಂಶೋಧನಾ ವಿದ್ಯಾರ್ಥಿನಿಯರು, ಸ್ನಾತಕ ಮತ್ತು ಸ್ನಾತಕೋತ್ತರ ವಿದ್ಯಾರ್ಥಿನಿಯರು, ಮಾಧ್ಯಮ ಮಿತ್ರರು ಹಾಗೂ ಮತ್ತಿತರರು ಉಪಸ್ಥಿತರಿದ್ದರು.
ಕಾರ್ಯಕ್ರಮದಲ್ಲಿ ಸಂಗೀತ ಮತ್ತು ಪ್ರದರ್ಶಕ ಕಲೆಗಳ ವಿಭಾಗದ ವಿದ್ಯಾರ್ಥಿನಿಯರು ನಾಡಗೀತೆ ಮತ್ತು ಮಹಿಳಾ ಗೀತೆಯನ್ನು ಹಾಡಿದರು. ಪ್ರೊ.ವಿಷ್ಣು.ಎಂ.ಶಿಂದೆ ಸ್ವಾಗತಿಸಿ, ಅತಿಥಿಗಳನ್ನು ಪರಿಚಯಿಸಿದರು. ವಿದ್ಯಾರ್ಥಿನಿ ಕ್ಷೇಮಪಾಲನ ನಿರ್ದೇಶನಾಲಯದ ಸಹಾಯಕ ನಿರ್ದೇಶಕಿ ಡಾ.ಅಶ್ವಿನಿ ಕೆ.ಎನ್ ಯುವಜನೋತ್ಸವದ ಸಂಕ್ಷಿಪ್ತ ವರದಿ ವಾಚನ ಮಾಡಿದರು.
ಪ್ರೊ.ಹನುಮಂತಯ್ಯ ಪೂಜಾರಿ ನಿರೂಪಿಸಿದರು. ವಿದ್ಯಾರ್ಥಿ ಕ್ಷೇಮಪಾಲನಾ ನಿರ್ದೇಶನಾಲಯದ ನಿರ್ದೇಶಕಿ ಪ್ರೊ.ಶಾಂತಾದೇವಿ ಟಿ ವಂದಿಸಿದರು.
ವಿವಿಮಪರವಾಗಿ ಗೌರವ ಸನ್ಮಾನ
ಇದೇ ಸಂದರ್ಭದಲ್ಲಿ ಮಹಿಳಾ ವಿವಿ ಕುಲಪತಿ ಪ್ರೊ.ಬಿ.ಕೆ.ತುಳಸಿಮಾಲ, ರಾಷ್ಟ್ರೀಯ ಯುವ ಪ್ರಶಸ್ತಿ ಪುರಸ್ಕೃತ ಸಂಘದ ಅಧ್ಯಕ್ಷ ಡಾ.ಜಾವೀದ ಜಮಾದಾರ, ಸಿಂಡಿಕೇಟ್ ಸದಸ್ಯ ಡಾ.ಎಸ್.ಜೆ.ಮಾಡ್ಯಾಳ, ಕುಲಸಚಿವ ಶಂಕರಗೌಡ ಸೋಮನಾಳ, ಮೌಲ್ಯಮಾಪನ ಕುಲಸಚಿವ ಪ್ರೊ.ಎಚ್.ಎಂ.ಚಂದ್ರಶೇಖರ್ ಹಾಗೂ ತಾಂತ್ರಿಕ ಸಮಿತಿಯ ಅಧ್ಯಕ್ಷ ಪ್ರೊ.ಪಿ.ಜಿ.ತಡಸದ ಹಾಗೂ ವಿದ್ಯಾರ್ಥಿ ಕ್ಷೇಮಪಾಲನಾ ನಿರ್ದೇಶನಾಲಯದ ನಿರ್ದೇಶಕಿ ಪ್ರೊ.ಶಾಂತಾದೇವಿ ಟಿ ಅವರನ್ನು ವಿಶ್ವವಿದ್ಯಾನಿಲಯದ ಪರವಾಗಿ ಸನ್ಮಾನಿಸಲಾಯಿತು. ಹಾಗೂ ವಿವಿಧ ಕಾಲೇಜಿನಿಂದ ಆಗಮಿಸಿದ ವ್ಯವಸ್ಥಾಪಕರಿಗೆ ಮತ್ತು ಮಹಿಳಾ ವಿವಿಯ ತಾಂತ್ರಿಕ ಸಮಿತಿಯ ಸದಸ್ಯರಿಗೆ ನೆನಪಿನ ಕಾಣಿಕೆಯನ್ನು ನೀಡಲಾಯಿತು.

ಮುಂದಿನ ಯುವಜನೋತ್ಸವಕ್ಕೆ ರೂ.೨೦ ಲಕ್ಷ ಅನುದಾನ!
” ಈ ಯುವಜನೋತ್ಸವದ ವೇದಿಕೆ ಮೇಲೆ ಎಲ್ಲ ರೀತಿಯ ಎಲ್ಲ ಕ್ಷೇತ್ರದ ಪ್ರತಿಭೆಗಳನ್ನು ಆವರಣ ಮಾಡಿ, ವಿದ್ಯಾರ್ಥಿನಿಯರು ಯಾವ ಕ್ಷೇತ್ರದಲ್ಲಿಯೂ ಕಡಿಮೆ ಇಲ್ಲ ಎಂದು ಈ ಶಕ್ತಿ ಸಂಭ್ರಮ ತೋರಿಸಿ ಕೊಟ್ಟಿದೆ. ಮುಂದಿನ ವರ್ಷ ನಡೆಯುವ ಯುವಜನೋತ್ಸವಕ್ಕೆ ೨೦ ಲಕ್ಷ ರೂಪಾಯಿಗಳ ಅನುದಾನ ಒದಗಿಸುವೆ.”
– ಶಂಕರಗೌಡ ಸೋಮನಾಳ
ಕುಲಸಚಿವರು, ಮಹಿಳಾ ವಿವಿ ವಿಜಯಪುರ

