ಉದಯರಶ್ಮಿ ದಿನಪತ್ರಿಕೆ
ದೇವರಹಿಪ್ಪರಗಿ: ದೃಢಸಂಕಲ್ಪ, ಸತತಪ್ರಯತ್ನ, ಪರಿಶ್ರಮಗಳೇ ಯಶಸ್ಸಿಗೆ ದಾರಿ ಎಂದು ವಿಜಯಪುರ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ನಿವೃತ್ತ ಪ್ರಾಧ್ಯಾಪಕ ಬಿ.ಜಿ.ಪತ್ತಾರ ಹೇಳಿದರು.
ಪಟ್ಟಣದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಶುಕ್ರವಾರ ಜರುಗಿದ ೨೦೨೪-೨೫ನೇ ಶೈಕ್ಷಣಿಕ ಸಾಲಿನ ಸಾಂಸ್ಕೃತಿಕ, ಕ್ರೀಡಾ, ರಾಸೇಯೋ, ರೆಡ್‌ಕ್ರಾಸ್, ಸ್ಕೌಟ್ಸ್ ಮತ್ತು ಗೈಡ್ಸ್ ಚಟುವಟಿಕೆಗಳಿಗೆ ದೀಪ ಬೆಳಗಿಸಿ ಚಾಲನೆ ನೀಡಿ ಮಾತನಾಡಿದರು.
ವಿದ್ಯಾರ್ಥಿಗಳು ಕೇವಲ ಪದವಿ ಪಡೆದರೆ ಸಾಲದು, ಅದರ ಜೊತೆಗೆ ಪಠ್ಯೇತರ ಚಟುವಟಿಕೆಗಳಲ್ಲಿ ಭಾಗವಹಿಸುವ ಮೂಲಕ ವ್ಯಕ್ತಿತ್ವವನ್ನು ವಿಕಸನ ಮಾಡಿಕೊಳ್ಳಬೇಕು. ಬಾಳಿಗೊಂದು ನಿಶ್ಚಲವಾದ ಗುರಿಯನ್ನು ಇಟ್ಟುಕೊಳ್ಳಬೇಕು ಅದನ್ನು ತಲುಪಲು ಧೃಡವಾದ ಸಂಕಲ್ಪ ಮಾಡಬೇಕು. ಸತತ ಪರಿಶ್ರಮವೇ ಜಯದ ದಾರಿ ಎಂದು ಕಿವಿಮಾತು ಹೇಳುತ್ತಾ, ಅನೇಕ ಸಾಧಕರ ಉದಾಹರಣೆಗಳನ್ನು ನೀಡಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಕಾಲೇಜಿನ ಪ್ರಾಂಶುಪಾಲ ಅಶೋಕ ಹೆಗಡೆ ಮಾತನಾಡಿ, ವಿದ್ಯಾರ್ಥಿಗಳು ಕಾಲೇಜಿನ ಎಲ್ಲ ಸೌಲಭ್ಯಗಳನ್ನು ಬಳಸಿಕೊಂಡು ಸತ್ಪçಜೆಗಳಾಗಿ ಹೊರಹೊಮ್ಮಬೇಕು ಎಂದು ಹಾರೈಸಿದರು.
ಅರ್ಥಶಾಸ್ತç ಪ್ರಾಧ್ಯಾಪಕ ಪಿ.ಎಂ.ಪರುಗೊಂಡ ಪ್ರಾಸ್ತಾವಿಕವಾಗಿ ಮಾತನಾಡಿದರು. ಸುಪ್ರಿಯಾ ಹಾಗೂ ಸಂಗಡಿಗರು ಪ್ರಾರ್ಥಿಸಿದರು. ಎಂ.ಎಂ. ಲಕ್ಷೀಶ ಸ್ವಾಗತಿಸಿದರು. ನಂತರ ಕಾಲೇಜಿಗೆ ನೂತನವಾಗಿ ಆಗಮಿಸಿದ ಪ್ರಾಧ್ಯಾಪಕ ವೃಂದ ಹಾಗೂ ಪ್ರಥಮ ವರ್ಷದ ವಿದ್ಯಾರ್ಥಿ, ವಿದ್ಯಾರ್ಥಿನೀಯರನ್ನು ಪುಷ್ಪ ಗುಚ್ಛನೀಡಿ ಸ್ವಾಗತಿಸಲಾಯಿತು.
ರಾಷ್ಟ್ರೀಯ ಸೇವಾ ಯೋಜನೆಯ ಸಂಚಾಲಕ ಎಸ್.ಬಿ.ಜಾಲವಾದಿ, ಮಹಾದೇವಪ್ಪ ಶಿವಶರಣರ, ಅಧೀಕ್ಷಕ ಜಗನ್ನಾಥ ಸಜ್ಜನ, ಪದ್ಮಜ ಬೆಳ್ಳಿಕಟ್ಟಿ, ಪುಷ್ಪಾ ಹುಣಶ್ಯಾಳ ಸಹಿತ ಕಾಲೇಜಿನ ಬೋಧಕ, ಬೋಧಕೇತರ, ಅತಿಥಿ ಉಪನ್ಯಾಸಕ ಸಿಬ್ಬಂದಿವರ್ಗ, ವಿದ್ಯಾರ್ಥಿ, ವಿದ್ಯಾರ್ಥಿನೀಯರು ಇದ್ದರು.

