ಉದಯರಶ್ಮಿ ದಿನಪತ್ರಿಕೆ
ದೇವರಹಿಪ್ಪರಗಿ: ಮಡಿವಾಳೇಶ್ವರ ಸ್ವಾಮೀಜಿಯವರ ೯೫ನೇ ವರ್ಷದ ಜನ್ಮವರ್ಧಂತಿ ಮಹೋತ್ಸವದ ಅಂಗವಾಗಿ ಹಮ್ಮಿಕೊಂಡ ಕಾರ್ಯಕ್ರಮಗಳು ಯಶಸ್ವಿಯಾಗಲಿ ಎಂದು ಶಿರಹಟ್ಟಿ ಮಠದ ಫಕೀರ ದಿಂಗಾಲೇಶ್ವರ ಸ್ವಾಮೀಜಿ ಹೇಳಿದರು.
ಪಟ್ಟಣದ ಗದ್ದಿಗೆಮಠದಲ್ಲಿ ಗುರುವಾರ ಜಾಲವಾದ ಗ್ರಾಮದ ಮುರುಗೇಂದ್ರ ಶಿವಯೋಗಿಗಳ ಜಾತ್ರಾ ಮಹೋತ್ಸವದ ವಿಶೇಷ ಕಾರ್ಯಕ್ರಮಗಳ ಮಾಹಿತಿಪತ್ರವನ್ನು ಬಿಡುಗಡೆಗೊಳಿಸಿ ಮಾತನಾಡಿದರು. ಕಾರ್ಯಕ್ರಮ ಕೊಡೆಕಲ್ ದುರದುಂಡೇಶ್ವರಶ್ರೀ ಹಾಗೂ ಕಿರಿಯ ಮಹಾಂತ ಸ್ವಾಮೀಜಿ ನೇತೃತ್ವದಲ್ಲಿ ಎಲ್ಲ ರೀತಿಯಿಂದಲೂ ಸಾಂಗವಾಗಿ ಸಾಗಲಿ ಎಂದರು.
ಮಠದ ಮಹಾಂತಸ್ವಾಮಿ ಕಾರ್ಯಕ್ರಮದ ಕುರಿತು ಮಾಹಿತಿ ನೀಡಿ, ಜಾಲವಾದ ಗ್ರಾಮದ ಮುರುಗೇಂದ್ರ ಶಿವಯೋಗಿಗಳ ಆಶ್ರಮದಲ್ಲಿ ಡಿಸೆಂಬರ್ ೩ ರಿಂದ ಕಾರ್ಯಕ್ರಮಗಳು ಆರಂಭಗೊAಡು ಜನೇವರಿ ೧೮ ವರೆಗೆ ಜರುಗಲಿವೆ. ಡಿಸೆಂಬರ್ ೧ ರಿಂದ ೩೦ ರವರೆಗೆ ಪ್ರತಿ ಗ್ರಾಮದಲ್ಲಿ ೫ ದಿನಗಳಂತೆ ಜನಜಾಗೃತಿ ಸಂಚಾರಿ ಪ್ರವಚನ. ಜನೇವರಿ ೧ ರಂದು ಜಾಲವಾದ ಆಶ್ರಮದಲ್ಲಿ ಕಲಬುರ್ಗಿ ಶರಣ ಬಸವೇಶ್ವರ ಪುರಾಣ ಹಾಗೂ ದಾಸೋಹ, ಜನೇವರಿ ೧೪ ರಂದು ಬಸವ ಬ್ರೇನ್ ಆಸ್ಪತ್ರೆಯಿಂದ ನರ ಮತ್ತು ಪಾರ್ಶ್ವವಾಯು ರೋಗಿಗಳ ತಪಾಸಣೆ, ಜನೇವರಿ ೧೫ ರಂದು ಡಾ.ಪ್ರಭುಗೌಡ ಲಿಂಗದಳ್ಳಿ(ಚಬನೂರ) ಇವರ ಅನುಗ್ರಹ ಆಸ್ಪತ್ರೆಯಿಂದ ಕಣ್ಣಿನ ತಪಾಸಣೆ, ಜನೇವರಿ ೧೭ ರಂದು ಉಚಿತ ಸಾಮೂಹಿಕ ವಿವಾಹ ಮಹೋತ್ಸವ, ಇದೇ ಸಂದರ್ಭದಲ್ಲಿ ಬಸವ ನಾಡಿನ ವಿವಿಧ ಕ್ಷೇತ್ರದಲ್ಲಿ ಸಾಧನೆಗೈದವರಿಗೆ ವಿಶೇಷ ಸನ್ಮಾನ, ನೂರೊಂದು ತುಲಾಭಾರ, ೫ ದಿನಗಳ ಕಾಲ ಜಾನುವಾರ ಜಾತ್ರೆ ಸಹಿತ ಹತ್ತು ಹಲವು ಕಾರ್ಯಕ್ರಮಗಳು ಜರುಗಲಿವೆ ಎಂದರು.
ಈ ಸಂದರ್ಭದಲ್ಲಿ ಕೊಡೆಕಲ್ ದುರದುಂಡೇಶ್ವರಮಠದ ಶಿವಕುಮಾರ ಸ್ವಾಮೀಜಿ, ಕಿರಿಯಶ್ರೀ ಹಾಗೂ ಜಾಲವಾದ ಗ್ರಾಮದ ಭಕ್ತರು ಇದ್ದರು.

