ಉದಯರಶ್ಮಿ ದಿನಪತ್ರಿಕೆ
ವಿಜಯಪುರ: ಡಿಸೆಂಬರ ೨ ರಂದು ಇವಣಗಿ ಗ್ರಾಮದಲ್ಲಿ ನಡೆಯುವ ಬಸವನಬಾಗೇವಾಡಿ ತಾಲೂಕು ೧೦ನೇ ಕನ್ನಡ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷರಾಗಿ ಆಯ್ಕೆಯಾಗಿರುವ ಸಾಹಿತಿ ಸಿದ್ಧರಾಮ ಬಿರಾದಾರ ಅವರನ್ನು ಬಸವ ಜನ್ಮಭೂಮಿ ಪ್ರತಿಷ್ಠಾನ ಹಾಗೂ ಕನ್ನಡ ಪುಸ್ತಕ ಪರಿಷತ್ತಿನ ಪದಾಧಿಕಾರಿಗಳು ವಿಜಯಪುರದ ಅವರ ನಿವಾಸದಲ್ಲಿ ಆತ್ಮೀಯವಾಗಿ ಸನ್ಮಾನಿಸಿದರು.
ಈ ಸಂದರ್ಭದಲ್ಲಿ ಪ್ರತಿಷ್ಠಾನದ ಸಂಚಾಲಕ, ಸಾಹಿತಿ ಮುರುಗೇಶ ಸಂಗಮ ಮಾತನಾಡಿ, ಬಸವೇಶ್ವರರು ಜನಿಸಿ ಓಡಾಡಿದ ಬಸವನಬಾಗೇವಾಡಿಯ ನೆಲವೆ ಪಾವನ ಭೂಮಿ. ಈ ಪವಿತ್ರ ಕ್ಷೇತ್ರಕ್ಕೆ ಸಮೀಪದ ಇವಣಗಿ ಗ್ರಾಮ ಒಂದು ಸುಕ್ಷೇತ್ರ. ಇಂಥ ಪಾವನ ಪರಿಸರದಲ್ಲಿ ಜರುಗಲಿರುವ ಕನ್ನಡ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷತೆಯ ಸ್ಥಾನ ಸಾಹಿತಿ ಸಿದ್ಧರಾಮ ಬಿರಾದಾರ ಅವರಿಗೆ ಒಲಿದು ಬಂದಿರುವುದು ಸಂತಸದ ಸಂಗತಿ.
ಮನಗೂಳಿ ಪಟ್ಟಣದ ಬಿರಾದಾರ ಅವರು ಉಕ್ಕಲಿ ಗ್ರಾಮದ ಸರ್ಕಾರಿ ಕನ್ನಡ ಹಿರಿಯ ಪ್ರಾಥಮಿಕ ಶಾಲೆಯ ಮುಖ್ಯ ಗುರುಗಳಾಗಿ ಸೇವೆ ಸಲ್ಲಿಸುತ್ತಿದ್ದು, ಸಾಹಿತ್ಯ ಕೃಷಿ ಮಾಡುತ್ತ ಖುಷಿಯಾಗಿದ್ದಾರೆ. ಇವರ ೧೧ ಕೃತಿಗಳು ಕನ್ನಡ ಸಾರಸ್ವತ ಲೋಕಕ್ಕೆ ಅರ್ಪಣೆಯಾಗಿದ್ದು ಹಿರಿಯ ಸಾಹಿತಿಗಳ ಮೆಚ್ಚುಗೆ ಪಡೆದಿವೆ ಎಂದರು.
ಸಾಹಿತಿ ಶಂಕರ ಬೈಚಬಾಳ, ನಿ.ಶಿಕ್ಷಕ ಶಿವಲಿಂಗ ಕಾರಜೋಳ, ಸಾಹಿತಿ ಬಸನಗೌಡ ಬಿರಾದಾರ, ಶ್ರೀಕಾಂತ ಮಂಗಾನವರ ಹಾಗೂ ಉದ್ಯಮಿ ವೀರೇಶ ಬಿರಾದಾರ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.