ಸಾರ್ವಜನಿಕರಲ್ಲಿ ತೀವ್ರ ಕುತೂಹಲ | ಹಲವು ಸದಸ್ಯರಿಗೆ ಪ್ರವಾಸ ಭಾಗ್ಯ
ಉದಯರಶ್ಮಿ ದಿನಪತ್ರಿಕೆ
ಚಿಮ್ಮಡ: ಇಲ್ಲಿನ ಗ್ರಾಮ ಪಂಚಾಯತಿ ಅಧ್ಯಕ್ಷರ ವಿರುಧ್ಧ ಅವಿಶ್ವಾಸ ವ್ಯಕ್ತಪಡಿಸಿ ಹಲವು ಸದಸ್ಯರಿಂದ ಜಮಖಂಡಿ ಉಪ ವಿಭಾಗಾಧಿಕಾರಿಗಳಿಗೆ ದೂರು ಸಲ್ಲಿಸಲಾಗಿದ್ದು, ಸೂಚನೆ ಪರ್ಯಾಲೋಚಿಸಲು ಶನಿವಾರ (ನ.೩೦) ಚಿಮ್ಮಡ ಗ್ರಾ.ಪಂ. ಕಾರ್ಯಾಲಯದಲ್ಲಿ ಸರ್ವ ಸದಸ್ಯರ ಸಭೆ ಕರೆಯಲಾಗಿದೆ.
ಇಪ್ಪತ್ತೆಂಟು ಸದಸ್ಯಬಲದ ಇಲ್ಲಿನ ಗ್ರಾಮ ಪಂಚಾಯತಿಯಲ್ಲಿ ಕಳೆದ ಹದಿನೈದು ತಿಂಗಳ ಹಿಂದೆ ಬಿಜೆಪಿ ಬೆಂಬಲಿತ ೧೯ ಸದಸ್ಯರ ಬೆಂಬಲದೊಂದಿಗೆ ಶ್ರೀಮತಿ ಮಾಲಾ ಅಶೋಕ ಮೋಟಗಿ ಅಧ್ಯಕ್ಷರಾಗಿ ಆಯ್ಕೆಗೊಂಡಿದ್ದರು.
ನಂತರ ನಡೆದ ಆಂತರಿಕ ಬೆಳವಣಿಗೆಯಲ್ಲಿ ಮಾಲಾ ಅವರು ಕಾಂಗ್ರೆಸ್ ಪಕ್ಷ ಸೇರ್ಪಡೆಗೊಂಡಿದ್ದರು, ೧೯/೯ ಪರ ವಿರೋಧ ಬಲವಿರುವ ಪಂಚಾಯತಿಯಲ್ಲಿ ಬಿಜೆಪಿ ಬೆಂಬಲಿತ ೧೯ ಸದಸ್ಯರು ಅವಿಶ್ವಾಸ ನಿರ್ಣಯ ಮಂಡಿಸಲು ಮುಂದಾಗಿ ಜಮಖಂಡಿ ಉಪ ವಿಭಾಗಾಧಿಕಾರಿ ಶ್ವೇತಾ ಮೋಹನ ಬಿರಡಿಕರರಿಗೆ ಮನವಿ ಸಲ್ಲಿಸಲಾಗಿದ್ದು, ಅವರು ವಿಶ್ವಾಸ ಮತಯಾಚನೆಗಾಗಿ ಶನಿವಾರ (ನ.೩೦) ಚಿಮ್ಮಡ ಗ್ರಾ.ಪಂ. ಕಾರ್ಯಾಲಯದಲ್ಲಿ ಸರ್ವ ಸದಸ್ಯರ ಸಭೆ ಕರೆಯಲಾಗಿದ್ದು ಈ ಸಂಬಂದ ನೋಟಿಸ್ ಜಾರಿ ಮಾಡಿದ್ದಾರೆ.
ಪ್ರವಾಸ ಭಾಗ್ಯ: ಈ ನಡುವೆ ಎಲ್ಲ ಸದಸ್ಯರನ್ನು ಒಗ್ಗಟ್ಟಿನಿಂದ ಇಡುವ ಕಾರಣ ಕಳೆದ ಮೂರು ದಿನಗಳಿಂದ ಹಲವು ಸದಸ್ಯರನ್ನು ಧಾರ್ಮಿಕ ಕ್ಷೇತ್ರಗಳ ಪ್ರವಾಸಕ್ಕೆ ಕರೆದೊಯ್ಯಲಾಗಿದ್ದು ಅವಿಶ್ವಾಸ ಮಂಡನೆಯ ದಿನವಾದ ಶನಿವಾರ ಎಲ್ಲ ಸದಸ್ಯರು ಗ್ರಾಮಕ್ಕೆ ಆಗಮಿಸಲಿದ್ದಾರೆ ಎನ್ನಲಾಗುತಿದ್ದು ಸದಸ್ಯರ ಮುಂದಿನ ನಡೆ ಕುತೂಹಲಕಾರಿಯಾಗಿದೆ.
ಚಿಮ್ಮಡ ಗ್ರಾ.ಪಂ. ಇತಿಹಾಸದಲ್ಲಿಯೇ ಮೊದಲ ಬಾರಿಗೆ ಅಧ್ಯಕ್ಷರ ವಿರುದ್ದ ಅವಿಶ್ವಾಸ ಮಂಡನೆಯಾಗಿದ್ದು, ಎರಡೂ ಬಣಗಳು ತೆರೆಯ ಹಿಂದೆ ತೀವೃ ಕಸರತ್ತು ನಡೆಸುತಿದ್ದು ವಿಶ್ವಾಸಮತ ಯಾಚನೆಯ ದಿನ ಏನಾಗುವುದೋ ಎಂಬ ತೀವ್ರ ಕುತೂಹಲ ಸಾರ್ವಜನಿಕರಲ್ಲಿ ಮೂಡಿದೆ.