ಉದಯರಶ್ಮಿ ದಿನಪತ್ರಿಕೆ
ಅಫಜಲಪುರ: ಅನೇಕರು ಆಳ್ವಿಕೆ ನಡೆಸಿದ ರಾಜ ಮನೆತನಗಳ ಸಾಂಸ್ಕೃತಿಕ ಇತಿಹಾಸವನ್ನು ಕುರಿತು ಮತ್ತು ಇಲ್ಲಿನ ಮೂಲ ಇತಿಹಾಸದ ಕುರಿತು ಅಧ್ಯಯನ ಅವಶ್ಯಕವಾಗಿದೆ ಎಂದು ವಿಭಾಗೀಯ ಪತ್ರಗಾರ ಇಲಾಖೆ ಹಿರಿಯ ಸಹಾಯಕ ನಿರ್ದೇಶಕ ಡಾ.ವೀರಶೆಟ್ಟಿ ಹೇಳಿದರು.
ಪಟ್ಟಣದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಆಂತರಿಕ ಗುಣಮಟ್ಟ ಭರವಸೆ ಕೋಶ ಅಡಿಯಲ್ಲಿ ಇತಿಹಾಸ ವಿಭಾಗ ಮತ್ತು ಪತ್ರಗಾರ ಇಲಾಖೆ ವಿಭಾಗೀಯ ಕಚೇರಿಯ ಸಹಯೋಗದಲ್ಲಿ ನಡೆದ ಪತ್ರಗಾರ ಪರಿಚಯ ಉಪನ್ಯಾಸ ಮಾಲೆ ಕಾರ್ಯಕ್ರಮದಲ್ಲಿ ಉಪನ್ಯಾಸ ನೀಡಿ ಮಾತನಾಡುತ್ತಾ ಮೊಘಲರ ಆಳ್ವಿಕೆಯ ಕಾಲದ ಇತಿಹಾಸದ ದಾಖಲೆಗಳು ಪುಣೆ, ಮುಂಬೈನಲ್ಲಿವೆ, ನಿಜಾಮರ ಆಳ್ವಿಕೆಯ ಕಾಲದ ಇತಿಹಾದ ದಾಖಲೆಗಳು ಹೈದ್ರಾಬಾದ್‌ನಲ್ಲಿವೆ. ಕೆಲವು ದಾಖಲಾತಿಗಳು ಚೆನ್ನೈನಲ್ಲಿವೆ. ಇಷ್ಟಾಗಿಯೂ ೩೯ ವಿಭಾಗಗಳಿಗೆ ಸಂಬಂಧ ಪಟ್ಟ ೧೬ ಲಕ್ಷ ಕಡತಗಳೂ ಕಲಬುರಗಿಯಲ್ಲಿ ಲಭ್ಯವಿವೆ. ಇವುಗಳನ್ನು ವಿದ್ಯಾರ್ಥಿಗಳು ಸಂಶೋಧನೆಗಾಗಿ ಸಹಾಯ ಪಡೆದುಕೊಳ್ಳಬಹುದು. ಇನ್ನೂ ಹೆಚ್ಚಿನ ಇತಿಹಾಸ ಅರಿಯುವ ಸಲುವಾಗಿ ಸಂಶೋಧನೆಗಳು ಜಾರಿಯಲ್ಲಿವೆ ಎಂದು ಮಾಹಿತಿ ನೀಡಿದರು.
ವಿರೇಂದ್ರ ಪಾಟೀಲ್ ಕಾಲೇಜು ಪ್ರಾಚಾರ್ಯ ಕೆ. ನಾರಾಯಣ ಮಾತನಾಡುತ್ತಾ ನಮ್ಮ ತಾಲೂಕಿನಲ್ಲಿ ಸಾಕಷ್ಟು ಚಾರಿತ್ರಿಕ ಸ್ಥಳಗಳಿವೆ, ರಾಷ್ಟçಕೂಟರು, ಕಲ್ಯಾಣಿ ಚಾಲುಕ್ಯರು, ಬಹಮನಿಗಳು ಸೇರಿದಂತೆ ಅನೇಕ ಮನೆತನಗಳ ಆಳ್ವಿಕೆಗೆ ಒಳಪಟ್ಟ ಊರುಗಳು ಇವೆ. ಅವುಗಳಲ್ಲಿ ಅಡಗಿರುವ ಇತಿಹಾಸ ಹೊರ ತೆಗೆಯುವ ಕೆಲಸ ನಡೆಯಬೇಕಾಗಿದೆ ಎಂದರು.
ಪ್ರಾಚಾರ್ಯ ಮಾಣಿಕರಾವ್ ಕುಲಕರ್ಣಿ ಅಧ್ಯಕ್ಷತೆ ವಹಿಸಿ ಮಾತನಾಡುತ್ತಾ ಪದವಿ ವಿದ್ಯಾರ್ಥಿಗಳು ಸದಾ ಸಂಶೋಧನಾತ್ಮಕವಾಗಿ ಅಧ್ಯಯನ ಮಾಡಬೇಕು. ಈ ನಿಟ್ಟಿನಲ್ಲಿ ಪತ್ರಗಾರ ಇಲಾಖೆ ಸಹಕಾರ ಪಡೆದುಕೊಳ್ಳಿ ಎಂದು ಕರೆ ನೀಡಿದರು.
ಡಾ. ಸೂರ್ಯಕಾಂತ ಉಮಾಪೂರೆ, ಡಾ. ಸಾವಿತ್ರಿ ಕೃಷ್ಣ ಮಾತನಾಡಿದರು. ಡಾ. ಮಹ್ಮದ್ ಯೂನೂಸ್ ಪ್ರಾಸ್ತಾವಿಕವಾಗಿ ಮಾತನಾಡಿದರು.
ಈ ಸಂದರ್ಭದಲ್ಲಿ ಹಿರೂ ರಾಠೋಡ, ಡಾ. ಚಿನ್ನಾ, ಡಾ. ಶ್ರೀದೇವಿ ರಾಠೋಡ, ಡಾ. ವಿನಾಯಕ ಕುಲಕರ್ಣಿ, ಡಾ. ನಾಗವೇಣಿ, ಡಾ. ಗಿರಿಜಾ, ಡಾ. ಕವಿತಾ ರಾಠೋಡ, ಡಾ. ಜಯಕುಮಾರ ನೂಲ್ಕರ್ ಸೇರಿದಂತೆ ವಿದ್ಯಾರ್ಥಿಗಳು ಇದ್ದರು. ಡಾ. ಸಂಗಣ್ಣ ಎಂ ಸಿಂಗೆ ಸ್ವಾಗತಿಸಿದರು. ಡಾ. ಸುರೇಖಾ ಕರೂಟಿ ನಿರೂಪಿಸಿದರು. ಡಾ. ದಶರಥ ವಂದಿಸಿದರು.