ರಾಷ್ಟ್ರೀಯ ಫ್ಲೋರೋಸಿಸ್ ತಡೆ ಜಾಗೃತಿ ಕಾರ್ಯಕ್ರಮ | ಶಾಲಾ ಮಕ್ಕಳಿಗೆ ಫ್ಲೋರೈಡ್ ಕುರಿತು ಅರಿವು
ಉದಯರಶ್ಮಿ ದಿನಪತ್ರಿಕೆ
ಚಿಕ್ಕಪಡಸಲಗಿ: ಸೇವಿಸುವ ಆಹಾರ ಹಾಗೂ ಕುಡಿಯುವ ನೀರಿನಲ್ಲಿ ಅಗತ್ಯಕ್ಕಿಂತಲೂ ಹೆಚ್ಚು ಫ್ಲೋರೈಡ್ ಯುತ ಅಂಶ ಇದ್ದರೆ ಫ್ಲೋರೋಸಿಸ್ ವ್ಯಾಧಿ ಬಾಧಿಸಿ ದೇಹದ ಶರೀರಕ್ಕೆ ಆವರಿಸುತ್ತದೆ. ಇದರಿಂದ ಭಾಗಶಃ ದೇಹದ ಹಲವಾರು ಭಾಗಗಳಲ್ಲಿ ಗಂಭೀರ ಸ್ವರೂಪದ ದುಷ್ಪರಿಣಾಮಗಳು ತಲೆದೋರುತ್ತವೆ. ಬಗೆಬಗೆಯ ಸಮಸ್ಯೆಗಳು ಉಲ್ಬಣಗೊಂಡು ನರಳಾಟದ ಯಾತನೆಯಲ್ಲಿ ಬದುಕು ಕಳೆಯುವಂತೆ ಮಾಡುತ್ತದೆ. ಕಾರಣ ಫ್ಲೋರೈಡ್ ಅಂಶವನ್ನು ಹೊಂದಿರುವ ನೀರು, ಆಹಾರ ಸೇವನೆ ಬಗ್ಗೆ ಯುವಜನತೆ ಬಹು ಜಾಗರೂಕತೆ ವಹಿಸಬೇಕು ಎಂದು ಆರೋಗ್ಯ ಇಲಾಖೆ ಜಿಲ್ಲಾ ಸಮಾಲೋಚಕ ಡಾ.ಬಾಬುರಡ್ಡಿ ಕೆಂಗಲಗುತ್ತಿ ಹೇಳಿದರು.
ಚಿಕ್ಕಪಡಸಲಗಿ ಗ್ರಾಮದಲ್ಲಿ ಗದುಗಿನ ತೋಂಟದಾರ್ಯ ವಿದ್ಯಾಪೀಠ ಸಂಸ್ಥೆಯ ಶಿವಶರಣ ಹರಳಯ್ಯ ಸ್ಮಾರಕ ಪ್ರೌಢಶಾಲೆಯಲ್ಲಿ ಜಿಲ್ಲಾ ಆಸ್ಪತ್ರೆ ಬಾಗಲಕೋಟೆ ಫ್ಲೋರೋಸಿಸ್ ಪ್ರಯೋಗಾಲಯ ಜಿಲ್ಲಾ ಸಮೀಕ್ಷಾ ಘಟಕದ ವತಿಯಿಂದ ಜಿಲ್ಲಾ ಆಡಳಿತ, ಜಿಲ್ಲಾ ಪಂಚಾಯತ ಹಾಗೂ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಬಾಗಲಕೋಟೆ ಇವರ ಆಶ್ರಯದಲ್ಲಿ ರಾಷ್ಟ್ರೀಯ ಫ್ಲೋರೋಸಿಸ್ ತಡೆ ಹಾಗೂ ನಿಯಂತ್ರಣ ಕುರಿತು ಶಾಲಾ ಮಕ್ಕಳಿಗಾಗಿ ಹಮ್ಮಿಕೊಂಡಿದ್ದ ಜಾಗೃತಿ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಸಾಮಾನ್ಯವಾಗಿ ಫ್ಲೋರೈಡ್ ಪ್ರಮಾಣವನ್ನು ಹೊಂದಿರುವ ಕುಡಿಯುವ ನೀರು, ಆಹಾರ ಜೊತೆಗೆ ಕೆಲವು ಔಷಧೀಯ ಸೇವನೆಯಿಂದ ಹಾಗೂ ಹೊಗೆ ಕಾರುವ ಕಾಖಾ೯ನೆಗಳ ಮಲಿನ ಧೂಳಿನಿಂದ ಮಾರಕ ಫ್ಲೋರೈಡ್ ದೇಹದೊಳಗೆ ಪ್ರವೇಶಿಸಿದರೆ ಇದರಿಂದ ಫ್ಲೋರೋಸಿಸ್ ಕಾಯಿಲೆ ಉಂಟಾಗುತ್ತದೆ. ಈ ರೋಗಕ್ಕೆ ಯಾವುದೇ ರೀತಿಯ ವಯೋಮಿತಿಗಳಿಲ್ಲ.ಭೇದ ಭಾವಗಳಿಲ್ಲ. ಕಾರಣ ರೋಗ ತಡೆಗಟ್ಟುವುದು ಇಂದಿನ ಅಗತ್ಯವಿದೆ. ಆ ದಿಸೆಯಲ್ಲಿ ಜನರಲ್ಲಿ ಮೂಡುವ ಆರೋಗ್ಯಕರ ಜಾಗೃತ ಮನಸ್ಸು, ವಿಚಾರಗಳೇ ಫ್ಲೋರೋಸಿಸ್ ದಮನಕ್ಕೆ ಸೂಕ್ತ ಮದ್ದು ಎಂದರು.
ಫ್ಲೋರೈಡ್ ರಹಿತ ಶುದ್ಧ ನೀರು, ಕ್ಯಾಲ್ಸಿಯಂ ಮತ್ತು ವಿಟಮಿನ್ ಸಿ ಯುತ ಆಹಾರ ಸೇವನೆಯಿಂದ ಹಾಗೂ ಫ್ಲೋರೈಡ್ ರಹಿತ ಟೂತ್‌ಪೇಸ್ಟ್, ಬಾಯಿಗೆ ಸ್ವಚ್ಛ ದ್ರಾವಣವನ್ನು ಉಪಯೋಗಿಸುವುದರಿಂದ ಫ್ಲೋರೋಸಿಸ್ ಗೆ ತುತ್ತಾಗದಂತೆ ನೋಡಿಕೊಳ್ಳಬಹುದು ಎಂದರು.
ಮೂಳೆಗಳ ನೋವು,ಕೀಲುಗಳ ಬಿಗಿತ ರೋಗದ ಆರಂಭಿಕ ಹಂತವಾಗಿದ್ದು ಎರಡನೇ ಹಂತದಲ್ಲಿ ವಿನಾಶಕಾರಿ ಫ್ಲೋರೋಸಿಸ್ ವ್ಯಾಧಿ ಗಂಭೀರತನದ ಆರೋಗ್ಯ ಸಮಸ್ಯೆ ಸೃಷ್ಟಿ ಮಾಡುತ್ತದೆ. ಇದೊಂದು ಮನುಕುಲಕ್ಕೆ ಮಾರಕ ಕಾಯಿಲೆಯಾಗಿದ್ದು ದೀರ್ಘಕಾಲದವರೆಗೆ ಕೀಲು, ಸ್ನಾಯುಗಳು, ಉದ್ದ ಮೊಳೆಗಳ ವಿಪರೀತ ನೋವು ಹಾಗೂ ಮೊಳೆಗಳ ಸವೇತ ಉಂಟುಮಾಡುವ ಮೂಲಕ ಹೀನಾಯ ಸ್ಥಿತಿಗೆ ತಂದೊಡ್ಡುತ್ತದೆ. ಇನ್ನೂ ಮೂರನೇ ಹಂತದಲ್ಲಿ ಕತ್ತಿನ ಮೊಳೆ, ಬೆನ್ನಿನ ಮೊಳೆ, ಎಲುಬುಗಳ ಬಾಗುವಿಕೆ ಆರಂಭಿಸುತ್ತದೆ. ದೇಹದ ನರಗಳ ಸತ್ವ ಹಿಮ್ಮೆಟ್ಟಿಸಿ ವ್ಯಾಪಕ ತೊಂದರೆ, ತಾಪತ್ರಯ ಅನುಭವಿಸುವಂತೆ ನರಳಾಡಿಸುತ್ತದೆ. ಈ ವೇಳೆ ವಾಕರಿಕೆ, ವಾಂತಿ, ಅಜೀರ್ಣ, ಹೊಟ್ಟೆ ಉಬ್ಬರ, ನೋವು ಕಾಣಿಸುತ್ತದೆ. ಮನುಷ್ಯ ನಿಶ್ಯಕ್ತಿಗೆ ಒಳಗಾಗಿ ಪದೇಪದೇ ಮೂತ್ರ ವಿಸರ್ಜನೆಯಿಂದ ನಿತ್ರಾಣಾವಸ್ಥೆಯಲ್ಲಿ ಕೆಂಗಡುವಂತೆ ಮಾಡುತ್ತದೆ. ಈ ಮಾರಕ ಕಾಯಿಲೆಯಿಂದ ದೂರುಳಿಯಲು ಮೂತ್ರ ಪರೀಕ್ಷೆ ಹಾಗೂ ಸೇವಿಸುವ ನೀರಿನ ಪರೀಕ್ಷೆ ಮೂಲಕ ಫ್ಲೋರೋಸಿಸ್ ವ್ಯಾಧಿ ಬಗ್ಗೆ ಖಚಿತ ಪಡಿಸಿಕೊಳ್ಳಲು ಜನತ ಮುಂದಾಗಬೇಕು ಎಂದರು.
ದೀರ್ಘಕಾಲದವರೆಗೆ ನಿರಂತರ ದೇಹಕ್ಕೆ ಅವಶ್ಯಕತೆಕ್ಕಿಂತ ಹೆಚ್ಚು ಫ್ಲೋರೈಡ್ ಯುತ ಆಹಾರ,ನೀರು ಬಳಸಿದರೆ ಖಂಡಿತ ಮೊಳೆಗಳ ಸವೆತಕ್ಕೆ ಒಳಗಾಗಿ ಫ್ಲೋರೋಸಿಸ್ ವ್ಯಾಧಿ ಬರುತ್ತದೆ ಎಂದು ಎಚ್ಚರಿಸಿದರು.
ಮಕ್ಕಳಲ್ಲಿ ಹಲ್ಲುಗಳು ಪರಿಪಕ್ವವಾಗಿ ಬೆಳೆಯುವ ಮುನ್ನ ಹೆಚ್ಚು ಪ್ರಮಾಣದ ಫ್ಲೋರೈಡ್ ಸೇವಿಸಿದರೆ ಫ್ಲೋರೋಸಿಸ್ ಬಾಧೆ ಉಲ್ಬಣಕ್ಕೆ ಕಾರಣವಾಗುತ್ತದೆ. ಅಗತ್ಯಕ್ಕಿಂತ ಅಲ್ಪ ಪ್ರಮಾಣದಲ್ಲಿ ಕ್ಯಾಲ್ಸಿಯಂ, ವಿಟಮಿನ್ ಸಿ ಸೇವಿಸುವ ಮಕ್ಕಳಲ್ಲಿ ಹಾಗೂ ವಯಸ್ಕರಲ್ಲಿ ಫ್ಲೋರೋಸಿಸ್ ತೀವ್ರತೆ ಕಾಡುತ್ತದೆ. ಫ್ಲೋರೈಡ್ ರಹಿತ ನೀರು ಸೇವನೆಯಿಂದ ಫ್ಲೋರೋಸಿಸ್ ನ್ನು ತಡೆಗಟ್ಟಬಹುದು ಎಂದರು.
ಫ್ಲೋರೈಡ್ ರಹಿತ ಟೂತ್‌ಪೇಸ್ಟ್, ಬಾಯಿ ಸ್ವಚ್ಛ ದ್ರಾವಣಗಳನ್ನು ಬಳಸವುದರಿಂದ ಫ್ಲೋರೋಸಿಸ್ ಕಾಯಿಲೆ ತಡೆಗಟ್ಟಬಹುದು ಎಂದು ಡಾ.ಬಾಬುರೆಡ್ಡಿ ಕೆಂಗಲಗುತ್ತಿ ತಿಳಿಸಿದರು.
ಚಿಕ್ಕಪಡಸಲಗಿ ಆಯುಷ್ಮಾನ ಆರೋಗ್ಯ ಮಂದಿರದ ಸಮುದಾಯ ಆರೋಗ್ಯ ಅಧಿಕಾರಿ ಆನಂದ ತೇಲಸಂಗ, ಆಶಾ ಕಾರ್ಯಕರ್ತೆ ಶ್ರೀಮತಿ ಸಾವಿತ್ರಿ ನ್ಯಾಮಗೌಡ, ಮುಖ್ಯೋಪಾಧ್ಯಾಯ ಬಸವರಾಜ ಜಾಲೋಜಿ, ವಿಶ್ರಾಂತ ಹಿರಿಯ ಶಿಕ್ಷಕ ಬಸವರಾಜ ಅನಂತಪೂರ, ಶಿಕ್ಷಕ ಈರಪ್ಪ ದೇಸಾಯಿ, ಜಿ.ಆರ್.ಜಾಧವ, ಲೋಹಿತ ಮಿಜಿ೯,ಕವಿತಾ ಅಂಬಿ, ಸಹನಾ ಕಲ್ಯಾಣಿ, ಪ್ರಮೀಳಾ ತೇಲಸಂಗ ಇತರರಿದ್ದರು.
ಕಾಯಿಲೆಗೆ ಮಕ್ಕಳೇ ಹೆಚ್ಚು ತುತ್ತು!
ಇಂದಿನ ಯುವ ಮಕ್ಕಳಲ್ಲಿ ದಂತ ಫ್ಲೋರೋಸಿಸ್ ಹೆಚ್ಚಾಗಿ ಕಂಡುಬರುತ್ತಿದೆ. ಸುಲಭವಾಗಿ ಈ ಕಾಯಿಲೆಗೆ ಒಳಗಾಗುತ್ತಿದ್ದಾರೆ. ಹಲ್ಲುಗಳ ಬೆಳವಣಿಗೆ ಸಮಯದಲ್ಲಿ ಅಧಿಕ ಫ್ಲೋರೈಡ್ ಅಂಶವಿರುವ ನೀರು, ಆಹಾರ ಪದಾರ್ಥಗಳನ್ನು ಸೇವಿಸಿ ಮತ್ತು ಟೂತ್‌ಪೇಸ್ಟ್ ಗಳನ್ನು ಬಳಸಿ ಫ್ಲೋರೋಸಿಸ್ ರೋಗ ಅಂಟಿಸಿಕೊಳ್ಳುತ್ತಿರುವುದು ವಿಷಾದನೀಯ. ಮಕ್ಕಳಲ್ಲಿ ಹಾಗೂ ವಯಸ್ಕರಲ್ಲಿ ಈ ರೋಗಬಾಧೆ ಕಂಡುಬರುತ್ತಿದೆ.

