ಸಿಂದಗಿಯಲ್ಲಿ ಕನ್ನಡ ಸಾಹಿತ್ಯ ಗೆಳೆಯರ ಬಳಗದಿಂದ ಎಸ್.ಜಾನಕಿ ಅವರ ಶ್ರದ್ಧಾಂಜಲಿ ಸಭೆ
ಉದಯರಶ್ಮಿ ದಿನಪತ್ರಿಕೆ
ಸಿಂದಗಿ: ಭಾರತೀಯ ಚಿತ್ರರಂಗದ ಗಾನ ಕೋಗಿಲೆ, ಕೋಟ್ಯಂತರ ಸಂಗೀತಾಭಿಮಾನಿಗಳ ಮನಸೂರೆಗೊಂಡ ಹಿನ್ನೆಲೆ ಗಾಯಕಿ ಎಸ್. ಜಾನಕಿ ಅವರ ನಿಧನ ಭಾರತೀಯ ಸಂಗೀತ ಲೋಕಕ್ಕೆ ತುಂಬಲಾರದ ನಷ್ಟವಾಗಿದೆ ಎಂದು ಕನ್ನಡ ಸಾಹಿತ್ಯ ಗೆಳೆಯರ ಬಳಗದ ಅಧ್ಯಕ್ಷ ರಾಜಶೇಖರ ಕೂಚಬಾಳ ಹೇಳಿದರು.
ಸಿಂದಗಿ ನಗರದ ಬಸವೇಶ್ವರ ವೃತ್ತದ ಹತ್ತಿರವಿರುವ ಕುಮಾರ ಕಂಪ್ಯೂಟರ ತರಬೇತಿ ಕೇಂದ್ರದಲ್ಲಿ ಹಮ್ಮಿಕೊಂಡ ವಾಗ್ದೇವಿ ಪುತ್ರಿ ಎಸ್ ಜಾನಕಿ ಅವರ ಶ್ರದ್ಧಾಂಜಲಿ ಸಭೆಯನ್ನು ಉದ್ದೇಶಿಸಿ ಮಾತನಾಡಿದ ಅವರು, ದಶಕಗಳ ಕಾಲ ತಮ್ಮ ಅಪರೂಪದ ಕಂಠಸಿರಿಯ ಮೂಲಕ ಕನ್ನಡ ಸೇರಿದಂತೆ ದಕ್ಷಿಣ ಭಾರತದ ಎಲ್ಲಾ ಪ್ರಮುಖ ಭಾಷೆಗಳಲ್ಲಿಯೂ ಹಾಗೂ ಹಿಂದಿಯಲ್ಲಿಯೂ ಸಾವಿರಾರು ಅಮರ ಗೀತೆಗಳನ್ನು ಹಾಡಿದ ಅವರು, ಭಾರತೀಯ ಸಂಗೀತ ಕ್ಷೇತ್ರದ ಧ್ರುವತಾರೆಯಾಗಿ ಸದಾ ನೆನಪಿನಲ್ಲಿ ಉಳಿಯಲಿದ್ದಾರೆ ಎಂದರು.
ಈ ಸಂದರ್ಭದಲ್ಲಿ ಮಾತನಾಡಿದ ಸಿಂದಗಿ ಶಿಕ್ಷಣ ಸುಧಾರಣಾ ಸಮಿತಿ ಸದಸ್ಯ ಸಿದ್ದಲಿಂಗ ಚೌದರಿ ಅವರು, ಸೂರ್ಯ-ಚಂದ್ರ ಇರುವವರೆಗೂ ಅವರ ಸಾಧನೆಯನ್ನು ಸಂಪೂರ್ಣವಾಗಿ ಕೊಂಡಾಡಲು ಸಾಧ್ಯವಿಲ್ಲ ಎನ್ನುವಷ್ಟು ಅವರ ಪ್ರತಿಭೆ ಅಸಾಧಾರಣವಾಗಿತ್ತು.
ಸರಸ್ವತಿಯ ವರಪುತ್ರಿಯಾಗಿದ್ದ ಎಸ್. ಜಾನಕಿ ಅವರು ದಣಿವರಿಯದ ಕಲಾವಿದೆಯಾಗಿ ಎಲ್ಲ ಪ್ರಮುಖ ಸಂಗೀತ ನಿರ್ದೇಶಕರು ಹಾಗೂ ಬಹುತೇಕ ಎಲ್ಲ ಖ್ಯಾತ ಹಿನ್ನೆಲೆ ಗಾಯಕರೊಂದಿಗೆ ಯುಗಯುಗಾಂತರಗಳವರೆಗೆ ಉಳಿಯುವ ಗೀತೆಗಳನ್ನು ನೀಡಿದ ಕೀರ್ತಿಗೆ ಪಾತ್ರರಾಗಿದ್ದಾರೆ. ಅವರ ಗಾಯನ ಭಾರತೀಯ ಸಂಗೀತ ಪರಂಪರೆಯ ಅಮೂಲ್ಯ ಸಂಪತ್ತಾಗಿದೆ ಎಂದರು.
ಜಿಪಿ ಪೋರವಾಲ ಕಾಲೇಜಿನ ದೈಹಿಕ ನಿರ್ದೇಶಕ ರವಿ ಗೋಲಾ ಮಾತನಾಡಿ, ಸರಳತೆ, ಸೌಜನ್ಯ ಮತ್ತು ವಿನಯಶೀಲತೆಯ ಸಾಕಾರಮೂರ್ತಿಯಾಗಿದ್ದ ಎಸ್. ಜಾನಕಿ ಅವರು ಕನ್ನಡ ನಾಡಿನೊಂದಿಗೆ ವಿಶೇಷ ಆತ್ಮೀಯತೆ ಹೊಂದಿದ್ದರು. ಕನ್ನಡದಲ್ಲಿ ಅವರು ಹಾಡಿದ ನೂರಾರು ಗೀತೆಗಳು ಇಂದಿಗೂ ಸಂಗೀತಾಸಕ್ತರ ಹೃದಯದಲ್ಲಿ ಅಚ್ಚಳಿಯದೆ ಉಳಿದಿವೆ ಎಂದು ಸ್ಮರಿಸಿದರು.
ಸಿಂದಗಿ ಉಪನ್ಯಾಸಕರ ಸಂಘದ ಅಧ್ಯಕ್ಷ ಸಿದ್ದಲಿಂಗ ಕಿಣಗಿ ಮಾತನಾಡಿ, ಎಸ್.ಜಾನಕಿ ಅವರು ಕರುನಾಡನ್ನು ತಮ್ಮ ಕಲಾ ಸೇವೆಯ ಪ್ರಮುಖ ನೆಲೆಯಾಗಿ ಆರಿಸಿಕೊಂಡಿದ್ದು ಕನ್ನಡಿಗರಿಗೆ ಹೆಮ್ಮೆಯ ವಿಷಯವಾಗಿದೆ.
ಅವರ ಅಗಲಿಕೆಯೊಂದಿಗೆ ಭಾರತೀಯ ಚಿತ್ರರಂಗವು ಅಪರೂಪದ ಗಾನಮಣಿಯನ್ನು ಕಳೆದುಕೊಂಡಿದೆ ಎಂದರು.
ಈ ಸಂದರ್ಭದಲ್ಲಿ ಸಿದ್ದು ಚಿಂಚೋಳಿ, ರಾಗರಂಜನೀ ಸಂಗೀತ ಅಕಾಡೆಮಿಯ ಸಂಚಾಲಕ ಪ್ರಕಾಶ , ಶಿಕ್ಷಕ ಬಿ ವಿ ಹಿರೇಮಠ, ಸತೀಶ್ ಹಿರೇಮಠ, ಜಗದೀಶ್ ಪಾಟೀಲ, ಚೇತನ ಲೋಣಿ, ಶಿವಲಿಂಗ ಉಮ್ಮರಗಿ , ಬುಳ್ಳಪ್ಪ ಡಿ, ಸುಭಾಷ್ ಪಾಟೀಲ, ಸೇರಿದಂತೆ ಮತ್ತತರು ಉಪಸ್ಥಿತರಿದ್ದರು.

