*ಉದಯರಶ್ಮಿ ದಿನಪತ್ರಿಕೆ*
ಕೊಲ್ಹಾರ: ನಾಳಿನ ನಾಡಿನ ನಕ್ಷತ್ರಗಳಾಗಿ ಬೆಳೆಯಬೇಕಾದ ವಿದ್ಯಾರ್ಥಿಗಳು, ಹೆತ್ತವರ ಕನಸುಗಳಿಗೆ ಕೊಳ್ಳೆ ಇಟ್ಟು ಮಾದಕ ದ್ರವ್ಯ ವ್ಯಸನಕ್ಕೆ ಬಲಿಯಾಗುತ್ತಿರುವುದು ಅತ್ಯಂತ ದುಃಖಕರ ಸಂಗತಿ ಎಂದು ಕೂಡಗಿ ಪೊಲೀಸ್ ಠಾಣೆಯ ಕ್ರೈಂ ಪಿಎಸ್‌ಐ ವಿ.ಎಚ್. ಹತ್ತಳ್ಳಿ ಹೇಳಿದರು.
ಅವರು ತೆಲಗಿ ಗ್ರಾಮದ ಶ್ರೀ ಸದ್ಗುರು ಸದಾನಂದ ಸಂಯುಕ್ತ ಪದವಿ ಪೂರ್ವ ಕಾಲೇಜಿನಲ್ಲಿ ಕೂಡಗಿ ಪೊಲೀಸ್ ಠಾಣೆಯ ವತಿಯಿಂದ ಶನಿವಾರ ಆಯೋಜಿಸಲಾದ ಎನ್‌ಟಿ ಡ್ರಗ್ಸ್ – ಮಾದಕ ದ್ರವ್ಯ ದುರ್ಬಳಕೆ ಮತ್ತು ಅಕ್ರಮ ಸಾಗಾಣಿಕೆ ತಡೆ ಜಾಗೃತಿ ಅಭಿಯಾನ ಕಾರ್ಯಕ್ರಮದಲ್ಲಿ ಮಾತನಾಡಿದರು.
ವಿದ್ಯಾರ್ಥಿಗಳು ಇಂತಹ ದುಷ್ಚಟಗಳಿಂದ ದೂರವಿದ್ದು, ತಮ್ಮ ಭವಿಷ್ಯವನ್ನು ಉತ್ತಮವಾಗಿ ರೂಪಿಸಿಕೊಳ್ಳಬೇಕು. ಮಾದಕ ದ್ರವ್ಯಗಳ ಅಕ್ರಮ ಸಾಗಾಣಿಕೆ ಅಥವಾ ದುರ್ಬಳಕೆ ಪ್ರಕರಣಗಳು ಕಂಡುಬಂದಲ್ಲಿ ತಕ್ಷಣವೇ ಪೊಲೀಸರಿಗೆ ಮಾಹಿತಿ ನೀಡಿ, ಸಮಾಜವನ್ನು ವ್ಯಸನಮುಕ್ತಗೊಳಿಸಲು ಸಾರ್ವಜನಿಕರು ಸಹಕರಿಸಬೇಕು ಎಂದು ಅವರು ಮನವಿ ಮಾಡಿದರು.
ಕಾರ್ಯಕ್ರಮದಲ್ಲಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರಾಚಾರ್ಯ ಎಲ್.ಎಚ್. ಪತ್ತಾರ, ಪೊಲೀಸ್ ಸಿಬ್ಬಂದಿಗಳಾದ ಮಲ್ಲು ಆರ್. ಆಶಂಪೂರ, ಸುನೀಲ ತಿವಾರಿ ಸೇರಿದಂತೆ ಇತರರು ಉಪಸ್ಥಿತರಿದ್ದರು.

